ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ಸ್ಪರ್ಶ: ಅಚ್ಚುಮೆಚ್ಚಿನ ಶಿಕ್ಷಕ ಯಲ್ಲಪ್ಪ ಹಂದ್ರಾಳ

7
ಮಕ್ಕಳ ಪ್ರೀತಿಗೆ ಪಾತ್ರ

ಸರ್ಕಾರಿ ಶಾಲೆಗೆ ಸಾಂಸ್ಕೃತಿಕ ಸ್ಪರ್ಶ: ಅಚ್ಚುಮೆಚ್ಚಿನ ಶಿಕ್ಷಕ ಯಲ್ಲಪ್ಪ ಹಂದ್ರಾಳ

Published:
Updated:
Deccan Herald

ಹೂವಿನಹಡಗಲಿ: ಈ ಶಾಲೆಯ ಮಕ್ಕಳು ಪ್ರಚಲಿತ ಘಟನೆಗಳ ಮೇಲೆ ಕಾವ್ಯ ಕಟ್ಟುತ್ತಾರೆ. ವಿಷಯ ಯಾವುದೇ ಇರಲಿ ಪ್ರಬಂಧ ಮಂಡಿಸುತ್ತಾರೆ. ನಾಟಕದ ಪಾತ್ರಗಳಿಗೆ ಜೀವ ತುಂಬುತ್ತಾರೆ. ಹಾಡು, ಕುಣಿತ ಎಲ್ಲವೂ ಸಹಜ. ಹರಳು ಹುರಿದಂತೆ ಮಾತಾಡುವ ಕಲೆ ಇವರಿಗೆ ಕರಗತ. ಪಠ್ಯದ ಆಚೆಗೂ ಮಕ್ಕಳು ಈ ರೀತಿ ಪರಿಪಕ್ವತೆ ಸಾಧಿಸಲು ಸಾಧ್ಯವಾಗಿರುವುದು ಇಲ್ಲಿನ ಒಬ್ಬ ಕ್ರಿಯಾಶೀಲ ಶಿಕ್ಷಕರಿಂದ.

ಹೂವಿನಹಡಗಲಿ ತಾಲ್ಲೂಕು ಹಿರೇಹಡಗಲಿ ಗ್ರಾಮದ ವಿ.ಕೆ.ಕೆ. ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಯಲ್ಲಪ್ಪ ಹಂದ್ರಾಳ ಅವರು ಬೋಧನೆಯ ಜತೆಗೆ ಮಕ್ಕಳನ್ನು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಅಣಿಗೊಳಿಸುತ್ತಿದ್ದಾರೆ. ಕವಿ, ಸಾಹಿತಿ, ರಂಗನಟ, ಪರಿಸರ ಹಾಗೂ ಕ್ರೀಡಾ ಪ್ರೇಮಿಯಾಗಿರುವ ಯಲ್ಲಪ್ಪನವರು.

ವಿದ್ಯಾರ್ಥಿಗಳನ್ನು ಬರೀ ಪಠ್ಯಕ್ಕೆ ಸೀಮಿತಗೊಳಿಸದೇ ಬಹುಮುಖಿ ಆಯಾಮಗಳಲ್ಲಿ ತೊಡಗಿಸುತ್ತಾರೆ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕು ಮೇವುಂಡಿ ಗ್ರಾಮದ ಯಲ್ಲಪ್ಪನವರು 2004ರಲ್ಲಿ ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಎಂ.ಎ ., ಬಿ.ಎಡ್. ಪದವೀಧರರಾಗಿರುವ ಅವರು 2010ರಿಂದ ಹಿರೇಹಡಗಲಿಯ ವಿ.ಕೆ.ಕೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಣಾಮಕಾರಿ ಬೋಧನಾ ಶೈಲಿಯಿಂದ ವಿದ್ಯಾರ್ಥಿಗಳ ಮನಸ್ಸು ಗೆದ್ದಿರುವ ಯಲ್ಲಪ್ಪನವರು, ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದಾರೆ.

ಈ ಶಾಲೆಯಲ್ಲಿ ಮಕ್ಕಳ ಕಾವ್ಯೋತ್ಸವ, ಬೃಹತ್ ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಾಟಕ, ನೈರ್ಮಲ್ಯ ಜಾಗೃತಿ, ಪರಿಸರ ಕಾಳಜಿಯ ಹತ್ತು ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ‘ಮಲ್ಲಿಗೆ ಮಕ್ಕಳ ಕಾವ್ಯೋತ್ಸವ’ ಆಯೋಜಿಸಿ ನಾಡಿನ ಹೆಸರಾಂತ ಮಕ್ಕಳ ಸಾಹಿತಿಗಳಾದ ಆನಂದ ಪಾಟೀಲ, ತಮ್ಮಣ್ಣ ಬೀಗಾರ, ಮತ್ತೂರು ಸುಬ್ಬಣ್ಣ ಅವರನ್ನು ಆಹ್ವಾನಿಸಿ ಮಕ್ಕಳಿಗೆ ಸಾಹಿತ್ಯ ಲೋಕವನ್ನು ಪರಿಚಯಿಸಿದ್ದಾರೆ.

ಇಂದಿನ ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟೋ ಜನ ಶಿಕ್ಷಕರು ಶಾಲೆ ಮತ್ತು ಮಕ್ಕಳ ವಿಷಯದಲ್ಲಿ ಇಲ್ಲದ ಉಸಾಬರಿಗೆ ಹೋಗುವುದಿಲ್ಲ. ತಾವಾಯಿತು, ತಮ್ಮ ಬೋಧನೆಯಾಯಿತು ಎಂದು ಸುಮ್ಮನೆ ಇದ್ದು ಬಿಡುತ್ತಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದಿರುವ, ಪ್ರಗತಿಪರ ಆಲೋಚನೆ ಹೊಂದಿರುವ ಶಿಕ್ಷಕ ಯಲ್ಲಪ್ಪನವರಲ್ಲಿ ಬದಲಾವಣೆಯ ತುಡಿತ ಎದ್ದು ಕಾಣುತ್ತದೆ. ಗ್ರಾಮೀಣ ಮಕ್ಕಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುವಂತಾಗಬೇಕು ಎನ್ನುವುದು ಅವರ ಕಾಳಜಿ. ಹೀಗಾಗಿ ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ, ರಂಗಕಲೆ, ಪರಿಸರ ಪ್ರಜ್ಞೆಯ ಮೂಲಕ ಹೊಸದನ್ನು ತಿಳಿಸಿಕೊಡುವ ಮೂಲಕ ಅವರಲ್ಲಿ ಕಲಿಕಾ ಆಸಕ್ತಿ ಚಿಗುರುವಂತೆ ಮಾಡುತ್ತಿದ್ದಾರೆ.

ವರ್ಷದಲ್ಲಿ ಒಂದೆರಡು ಸಲ ಮಕ್ಕಳನ್ನು ಹೊರ ಸಂಚಾರಕ್ಕೆ ಕರೆದೊಯ್ದು ನಿಸರ್ಗವನ್ನು ಪರಿಚಯಿಸುತ್ತಾರೆ. ಕಾಡುಫಲ, ಕಾಡು ಪುಷ್ಪ ಮತ್ತು ಅಲ್ಲಿನ ಜೀವ ವೈವಿಧ್ಯದ ಬಗ್ಗೆ ತಿಳಿಸಿಕೊಡುತ್ತಾರೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಕಾಲದಲ್ಲಿ ಯಲ್ಲಪ್ಪ ಹಂದ್ರಾಳರಂತಹ ಸೃಜನಶೀಲ ಶಿಕ್ಷಕರು ಆಶಾಕಿರಣವಾಗಿ ಕಾಣುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !