ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಂಗಾ–ಭದ್ರಾ ಕಾಲುವೆ ಅಪಾಯ’

ತುಂಗಭದ್ರಾ ಹೂಳಿನ ವಿಚಾರವಾಗಿ ಪ್ರಧಾನಿ ಬಳಿ ನಿಯೋಗ–ಪುರುಷೋತ್ತಮಗೌಡ
Last Updated 5 ಜುಲೈ 2018, 10:24 IST
ಅಕ್ಷರ ಗಾತ್ರ

ಹೊಸಪೇಟೆ: ‘ತುಂಗಭದ್ರಾ ಜಲಾಶಯದಿಂದ ಹೂಳು ತೆಗೆಸಿ, ರೈತರನ್ನು ಕಾಪಾಡಬೇಕೆಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ನಿಯೋಗ ಕೊಂಡೊಯ್ಯಲು ಚಿಂತನೆ ನಡೆಸಲಾಗುತ್ತಿದೆ’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.

ಸಂಘದಿಂದ ಗುರುವಾರ ಇಲ್ಲಿನ ತುಂಗಭದ್ರಾ ಹಿನ್ನೀರಿನಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಹೂಳಿನ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಮುತುವರ್ಜಿ ವಹಿಸಿದರಷ್ಟೇ ಹೂಳು ತೆಗೆಯಲು ಸಾಧ್ಯ. ರಾಜ್ಯ ಸರ್ಕಾರದ ಗಮನ ಸೆಳೆಯಲು ಕಳೆದ ವರ್ಷದಿಂದ ಹೂಳಿನ ಜಾತ್ರೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಪ್ರಧಾನಿ ಅವರನ್ನು ಭೇಟಿ ಮಾಡಲಾಗುವುದು. ಸ್ವಾಮೀಜಿಗಳು, ರೈತ ಮುಖಂಡರು ನಿಯೋಗದಲ್ಲಿ ಇರುವರು’ ಎಂದು ಹೇಳಿದರು.

‘ಕಳೆದ ವರ್ಷ ನಿರೀಕ್ಷೆಗೂ ಮೀರಿ ಹೂಳಿನ ಜಾತ್ರೆ ಯಶಸ್ವಿಯಾಗಿತ್ತು. ರೈತರು, ಸ್ವಾಮೀಜಿಗಳು ₨32 ಲಕ್ಷ ದೇಣಿಗೆ ನೀಡಿದ್ದರು. ಅನೇಕ ಜನ ದವಸ ಧಾನ್ಯಗಳನ್ನು ಕೊಟ್ಟಿದ್ದರು. ಆಂಧ್ರ ಪ್ರದೇಶ, ತೆಲಂಗಾಣ ಭಾಗದ ರೈತರು, ಅಲ್ಲಿನ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದರು. ಈ ಸಲ ಅವಧಿಗೂ ಮುನ್ನವೇ ಮಳೆ ಬಂದು ಜಲಾಶಯಕ್ಕೆ ಹೆಚ್ಚಿನ ನೀರು ಬಂದಿದೆ. ಆದಕಾರಣ ಒಂದು ದಿನ ಸಾಂಕೇತಿಕವಾಗಿ ಹೂಳಿನ ಜಾತ್ರೆ ಹಮ್ಮಿಕೊಂಡಿದ್ದೇವೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಇದು ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

‘ನಾಲ್ಕು ವರ್ಷಗಳಿಂದ ಭದ್ರಾ ನದಿಯಿಂದ ಜಲಾಶಯಕ್ಕೆ ನೀರು ಬರುತ್ತಿಲ್ಲ. ಈಗ ತುಂಗಾ ಮತ್ತು ಭದ್ರಾ ನದಿ ನಡುವೆ ಕಾಲುವೆ ನಿರ್ಮಿಸಿ ಎರಡನ್ನೂ ಜೋಡಿಸುವ ಕೆಲಸ ಮಾಡಲಾಗುತ್ತಿದೆ. ಒಂದುವೇಳೆ ಈ ಕಾಮಗಾರಿ ಮುಗಿದರೆ ಎರಡೂ ನದಿಗಳಿಂದ ಅಣೆಕಟ್ಟೆಗೆ ನೀರು ಹರಿದು ಬರುವುದು ನಿಂತು ಹೋಗುತ್ತದೆ. ಹೆಸರಿಗಷ್ಟೇ ತುಂಗಭದ್ರಾ ಜಲಾಶಯ ಇರುತ್ತದೆ. ಇದು ಅಪಾಯಕಾರಿ ಬೆಳವಣಿಗೆ. ಎಲ್ಲರೂ ಇದರ ವಿರುದ್ಧ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.

‘ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ಬಹಳ ಫಲವತ್ತಾಗಿದೆ. ರೈತರ ಜಮೀನಿಗೆ ಹಾಕಿದರೆ ಚಿನ್ನದಂಥಹ ಬೆಳೆ ಬೆಳೆಯಬಹುದು. ಸರ್ಕಾರ ಹೂಳು ತೆಗೆದು ರೈತರ ಗದ್ದೆಗಳಲ್ಲಿ ಹಾಕಬೇಕು. ರೈತರು ಈ ಕೆಲಸ ಮಾಡುವುದಾದರೆ ಸರ್ಕಾರಕ್ಕೆ ಏಕೆ ಆಗುವುದಿಲ್ಲ’ ಎಂದು ಲಿಂಗನಾಯಕನಹಳ್ಳಿಯ ಚೆನ್ನವೀರ ಸ್ವಾಮೀಜಿ ತಿಳಿಸಿದರು.

ಮರಿಯಮ್ಮನಯಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರು, ಪಂಚಾಕ್ಷರಿ ಹಿರೇಮಠ, ಮಹೇಶ್ವರ ಸ್ವಾಮಿ, ಶಂಕರ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ವೀರಾಂಜನೇಯ ದೇವರು, ಅಭಿನವ ಪ್ರಭು ಸ್ವಾಮೀಜಿ, ಅಭಿನವ ಸಿದ್ಧಲಿಂಗ ಸ್ವಾಮೀಜಿ, ಶಿವಪ್ಪ ತಾತ, ಪಂಚಾಕ್ಷರಿ ಶಿವಾಚಾರ್ಯರು, ಗದಗಿನ ಕಲ್ಲಯಜ್ಜ, ರೈತ ಮುಖಂಡರಾದ ಕೊಂಚಗೇರಿ ಮಲ್ಲಪ್ಪ, ಶಾನವಾಸಪುರ ಶರಣಪ್ಪ, ಹಂಪಿನ ಕಟ್ಟಿ ಭೀಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT