ಮಂಗಳವಾರ, ನವೆಂಬರ್ 19, 2019
25 °C
ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಮಾಹಿತಿ ಸಂಗ್ರಹ

ಹೊಸಪೇಟೆ: ಕರಡಿಧಾಮದಲ್ಲಿ ಕರಡಿ ಗಣತಿ

Published:
Updated:
Prajavani

ಹೊಸಪೇಟೆ: ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಇಲ್ಲಿನ ದರೋಜಿ ಕರಡಿಧಾಮದಲ್ಲಿ ಕರಡಿಗಳ ಗಣತಿ ಕಾರ್ಯವನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ.

ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ ಮಧ್ಯೆ 82.72 ಚದರ ಅಡಿ ಕಿ.ಮೀ. ವಿಸ್ತೀರ್ಣ ಪ್ರದೇಶದಲ್ಲಿ ಕರಡಿಧಾಮ ಇದ್ದು, ಒಟ್ಟು 149 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ.

ಕರಡಿಗಳು ಅತಿ ಹೆಚ್ಚು ಓಡಾಡುವ ಕರಡಿಗುಡ್ಡ, ಅಲ್ಲಿನ ಕೆರೆ ಸೇರಿದಂತೆ ಧಾಮದ ಗಡಿ ಸುತ್ತಮುತ್ತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕರಡಿಗಳ ನಿಖರ ಸಂಖ್ಯೆ ಕಲೆ ಹಾಕುವುದರ ಜತೆಗೆ ಅವುಗಳ ಚಲನವಲನ, ಗಡಿ ದಾಟಿ ಹೋಗಲು ಇರುವ ಪ್ರಮುಖ ಕಾರಣಗಳೇನು, ಸಂತಾನಭಿವೃದ್ಧಿ, ಇತರೆ ವನ್ಯಜೀವಿಗಳೊಂದಿಗೆ ಅವುಗಳ ಸಂಘರ್ಷದ ಕುರಿತು ವಿವರ ಕಲೆ ಹಾಕುವುದು ಇದರ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ಕರಡಿಧಾಮ ಆರಂಭಗೊಂಡು 25 ವರ್ಷಗಳು ಪೂರ್ಣಗೊಂಡಿವೆ. ಇದುವರೆಗೆ ಕರಡಿಗಳ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. ಅರಣ್ಯ ಇಲಾಖೆಯ ಅಂದಾಜಿನ ಪ್ರಕಾರ, 105ರಿಂದ 110 ಕರಡಿಗಳಿವೆ. ಗಣತಿ ನಡೆಸಿದರೆ ನಿಖರ ಅಂಕಿ ಅಂಶ ಸಿಗುವ ಸಾಧ್ಯತೆ ಇದೆ. ತಿಂಗಳ ಹಿಂದೆಯೇ ಗಣತಿ ಕೆಲಸ ಆರಂಭಗೊಂಡಿದ್ದು, ಇನ್ನೂ ನಾಲ್ಕೈದು ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಅದಾದ ಬಳಿಕ ಕ್ಯಾಮೆರಾಗಳಲ್ಲಿ ದಾಖಲಾದ ಮಾಹಿತಿಯ ಸಮಗ್ರ ಅಧ್ಯಯನ ನಡೆಯಲಿದ್ದು, ಎರಡರಿಂದ ಮೂರು ತಿಂಗಳಲ್ಲಿ ನಿಖರವಾದ ಮಾಹಿತಿ ಲಭ್ಯವಾಗಲಿದೆ.

‘ಕರಡಿಧಾಮ ಆರಂಭವಾದ ನಂತರ ಮೊದಲ ಬಾರಿಗೆ ಅತ್ಯಾಧುನಿಕ ಕ್ಯಾಮೆರಾಗಳ ಸಹಾಯದಿಂದ ಅವುಗಳ ಗಣತಿ ನಡೆಸಲಾಗುತ್ತಿದೆ. ಇದು ಬಹಳ ಸೂಕ್ಷ್ಮವಾದ ಕೆಲಸ. ತಜ್ಞರ ನೆರವಿನೊಂದಿಗೆ ನಮ್ಮ ಸಿಬ್ಬಂದಿ ಈ ಕೆಲಸ ಮಾಡುತ್ತಿದ್ದಾರೆ’ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯ ಅಧಿಕಾರಿ ಬಿ. ವಿನೋದ ಕುಮಾರ ನಾಯಕ ‘ಪ್ರಜಾವಾಣಿ‘ಗೆ ಶನಿವಾರ ಮಾಹಿತಿ ನೀಡಿದರು.

‘ಕರಡಿಗಳ ಗಣತಿ ನಡೆಯದ ಕಾರಣ ನಿಖರವಾದ ಅಂಕಿ ಅಂಶ ನಮ್ಮ ಬಳಿಯಿಲ್ಲ. 105ರಿಂದ 110 ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಧ್ಯಯನ ವರದಿ ಬಂದ ಬಳಿಕ ನಿಖರವಾದ ವಿವರ ಕೈಸೇರಲಿದೆ. ಇಷ್ಟೇ ಅಲ್ಲ, ಅವುಗಳ ಚಲನವಲನ ಪರಿಶೀಲಿಸಿ, ಅವುಗಳಿಗೆ ಏನಾದರೂ ತೊಂದರೆಯಿದ್ದಲ್ಲಿ ಬಗೆಹರಿಸಲಾಗುವುದು. ಅವುಗಳ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)