ಗುರುವಾರ , ನವೆಂಬರ್ 14, 2019
18 °C
ಮಾಜಿಶಾಸಕರಾದ ಭೂಪತಿ, ಘೋರ್ಪಡೆ ಶ್ರಮದಿಂದ 1994ರಲ್ಲಿ ಧಾಮ ಘೋಷಣೆ

ದರೋಜಿ ಕರಡಿಧಾಮಕ್ಕೆ 25ರ ಸಂಭ್ರಮ

Published:
Updated:
Prajavani

ಹೊಸಪೇಟೆ: ತಾಲ್ಲೂಕಿನ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುವ ದರೋಜಿ ಕರಡಿಧಾಮ 25ರ ಸಂಭ್ರಮದಲ್ಲಿದೆ.

82.72 ಚದರ ಅಡಿ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಧಾಮದಲ್ಲಿ ಸದ್ಯ 100ರಿಂದ 110 ಕರಡಿಗಳಿವೆ. ಚಿರತೆ, ಮುಂಗೂಸಿ, ಲಂಗೂರ್‌ ಸೇರಿದಂತೆ ಅನೇಕ ಸರೀಸೃಪಗಳ ಆಶ್ರಯ ತಾಣವಾಗಿದೆ. 180ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು, 50 ಬಗೆಯ ಚಿಟ್ಟೆಗಳು, ಹಲವು ಔಷಧೀಯ ಸಸ್ಯಗಳ ನೆಲೆಬೀಡಾಗಿದೆ.

ಕರಡಿಧಾಮ ಅಸ್ತಿತ್ವಕ್ಕೆ ಬಂದ ನಂತರ ನಿಧಾನವಾಗಿ ಮಾನವ ಮತ್ತು ಪ್ರಾಣಿ ಸಂಘರ್ಷ ತಗ್ಗಿದೆ. ಆರಂಭದಲ್ಲಿ ಆಹಾರ ಅರಸಿಕೊಂಡು ಕರಡಿಗಳು ಸಮೀಪದ ಗ್ರಾಮಗಳಿಗೆ ಲಗ್ಗೆ ಇಡುತ್ತಿದ್ದವು. ಈಗ ಅವುಗಳಿಗೆ ಎಲ್ಲವೂ ಧಾಮದಲ್ಲೇ ಸಿಗುತ್ತಿರುವುದರಿಂದ ಆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಪ್ರಸಕ್ತ ಸಾಲಿನ ಸೆಪ್ಟೆಂಬರ್‌ 25ರಂದು ಧಾಮವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸಿದ ಬಳಿಕ ಅದರ ಸುತ್ತಮುತ್ತ ನಡೆಯುತ್ತಿದ್ದ ಅನೇಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ.

ಕಟ್ಟಡಗಳ ನಿರ್ಮಾಣ, ಕಲ್ಲು ಕ್ವಾರಿ ಗಣಿಗಾರಿಕೆ, ಕೈಗಾರಿಕೆಗಳ ನಿರ್ಮಾಣ, ಗಣಿಗಾರಿಕೆ, ಇಟ್ಟಿಗೆ ತಯಾರಿಕೆ ಘಟಕ, ಘನತಾಜ್ಯ ವಿಲೇವಾರಿ ಸೇರಿದಂತೆ ಇತರೆ ಚಟುವಟಿಕೆಗಳು ನಿಂತಿರುವುದರಿಂದ ಕರಡಿ ಸೇರಿದಂತೆ ಇತರೆ ಜೀವಿಗಳಿಗೆ ಮತ್ತಷ್ಟು ಸುರಕ್ಷತೆ ಕಲ್ಪಿಸಿದಂತಾಗಿದೆ. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲೆಂದೆ ಸಮಿತಿ ಕೂಡ ರಚಿಸಲಾಗಿದೆ.

ವಿಶ್ವ ಪಾರಂಪರಿಕ ತಾಣ ಹಂಪಿ, ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಂತೆ ಕರಡಿಧಾಮ ಇರುವುದರಿಂದ ಅದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನಿತ್ಯ ದೇಶ–ವಿದೇಶಗಳಿಂದ ನೂರಾರು ಪ್ರವಾಸಿಗರು ಕರಡಿಧಾಮಕ್ಕೆ ಬಂದು ಹೋಗುತ್ತಿದ್ದಾರೆ. ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಅನೇಕ ಜನರಿಗೆ ಪರೋಕ್ಷ ಹಾಗೂ ಅಪರೋಕ್ಷವಾಗಿ ಉದ್ಯೋಗಗಳು ಸಿಕ್ಕಿವೆ.

ಮಾಜಿಶಾಸಕ ಯು. ಭೂಪತಿ, ಎಂ.ವೈ. ಘೋರ್ಪಡೆ ಅವರ ಸತತ ಶ್ರಮದಿಂದ ಸರ್ಕಾರ 1994ರಲ್ಲಿ ಕರಡಿಧಾಮ ಘೋಷಣೆ ಮಾಡಿತು. ಆರಂಭದಲ್ಲಿ 55.87 ಚದರ ಅಡಿ ಕಿ.ಮೀ ವಿಸ್ತೀರ್ಣಕ್ಕೆ ಸೀಮಿತವಾಗಿದ್ದ ಧಾಮಕ್ಕೆ 2009ರಲ್ಲಿ ಹೆಚ್ಚುವರಿಯಾಗಿ 26.85 ಚದರ ಅಡಿ ಕಿ.ಮೀ ವಿಸ್ತೀರ್ಣ ಪ್ರದೇಶವನ್ನು ಹೆಚ್ಚುವರಿಯಾಗಿ ಸೇರಿಸಲಾಯಿತು.

ಇಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ ಅರಣ್ಯ ಅಧಿಕಾರಿಗಳಾದ ಶೇಖರ್‌ ಕಂಬಳಿ, ಸಂಗಮೇಶ ಎನ್‌. ಮಠ, ಇಮ್ಮಡಿ ರವೀಂದ್ರನಾಥ, ಎಂ. ಗೋಪಾಲ್‌, ಸಿರಿಗೇರಿ ನಾಗರಾಜ್‌, ಎಂ.ಎನ್‌. ಕಿರಣ್‌ ಅವರ ವಿಶೇಷ ಮುತುವರ್ಜಿಯಿಂದ ಧಾಮ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ಈ ಧಾಮದ ಸುತ್ತಲಿನ ಪರಿಸರವನ್ನು ಸೂಕ್ಷ್ಮ ವಲಯವನ್ನಾಗಿ ಘೋಷಿಸಬೇಕೆಂದು ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು ಸರ್ಕಾರಕ್ಕೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಮಾನವ ಪ್ರಾಣಿ ಸಂಘರ್ಷ ತಪ್ಪಿಸಲು ಕಾಲಕಾಲಕ್ಕೆ ಅವರು ಅರಣ್ಯ ಇಲಾಖೆಗೆ ಮಾರ್ಗದರ್ಶನ ಮಾಡುತ್ತ ಬಂದಿದ್ದಾರೆ. 

‘ಸೊಸೈಟಿ ಫಾರ್‌ ವೈಲ್ಡ್‌ಲೈಫ್‌ ಅಂಡ್‌ ನೇಚರ್‌’ ಎಂಬ ಸಂಸ್ಥೆಯು ಕರಡಿಧಾಮದ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಯೋಜನೆ ರೂಪಿಸಿದೆ. ಅದರ ಅಂಗವಾಗಿ ಗುರುವಾರ (ಅ.17) ನಗರದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪರಿಸರಪ್ರೇಮಿಗಳು, ವನ್ಯಜೀವಿ ತಜ್ಞರು ಹಾಗೂ ವನ್ಯಜೀವಿ ಛಾಯಾಗ್ರಾಹಕರು ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)