ಭಾನುವಾರ, ಮೇ 22, 2022
28 °C
ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೂ ಮುಂಚೆಯೇ ಸಮಸ್ಯೆಗಳಿಗೆ ಪರಿಹಾರ

ಬದಲಾಗುತ್ತಿರುವ ತಿಮ್ಮಲಾಪುರದ ಚಿತ್ರಣ

ಹರಪ್ರಸಾದ್‌ Updated:

ಅಕ್ಷರ ಗಾತ್ರ : | |

Prajavani

ತಿಮ್ಮಲಾಪುರ (ಮರಿಯಮ್ಮನಹಳ್ಳಿ/ಹೊಸಪೇಟೆ ತಾಲ್ಲೂಕು): ಎಲ್ಲಿ ನೋಡಿದರೂ ಸದಾ ಗಬ್ಬುನಾರುವ ಚರಂಡಿಗಳು, ಎಲ್ಲೆಂದರಲ್ಲಿ ಕಸದ ರಾಶಿ, ಮನೆಯ ಹಿತ್ತಲು ಸೇರಿದಂತೆ ಬಯಲು ಜಾಗದಲ್ಲೆಲ್ಲಾ ತಿಪ್ಪೆ, ಸಂಜೆಯಾದರೆ ಜೇನು ನೊಣಗಳಂತೆ ಕಾಡುವ ಸೊಳ್ಳೆಗಳ ಹಾವಳಿ, ‌‌ಬೆಳಗದ ಬೀದಿ ದೀಪಗಳು...

ಇದು ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಸದಾ ಕಂಡು ಬರುತ್ತಿದ್ದ ದೃಶ್ಯ. ಆದರೆ, ಈಗ ಊರು ಬದಲಾಗುತ್ತಿದೆ. ಶನಿವಾರ (ಫೆ.20) ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರ ಗ್ರಾಮ ವಾಸ್ತವ್ಯ ಇರುವುದರಿಂದ ಗ್ರಾಮದ ಚಹರೆಯೇ ಬದಲಾಗುತ್ತಿದೆ.

ಗ್ರಾಮ ವಾಸ್ತವ್ಯಕ್ಕೆ ಕೆಲವೇ ದಿನಗಳ ಮುನ್ನ ಈ ಗ್ರಾಮ ಆಯ್ಕೆಯಾಗಿದೆ. ಆದರೆ, ಜಿಲ್ಲಾಧಿಕಾರಿ ವಾಸ್ತವ್ಯ ಮಾಡುವುದು ಖಚಿತವಾದ ನಂತರ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ. ಗ್ರಾಮದಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಶಾಲೆಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ.

ಸದಾ ತುಂಬಿ ಹರಿಯುತ್ತಿದ್ದ ಚರಂಡಿಗಳು ಸ್ವಚ್ಛತೆಯ ಭಾಗ್ಯ ಕಾಣುತ್ತಿವೆ. ಶಾಲೆಯ ಆವರಣ ಸೇರಿದಂತೆ ಗ್ರಾಮದ ಎಲ್ಲೆಂದರಲ್ಲಿ ಇದ್ದ ತ್ಯಾಜ್ಯದ ರಾಶಿ ತೆರವು ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡ ತಿಮ್ಮಲಾಪುರ ಗ್ರಾಮಕ್ಕೆ ಹೆದ್ದಾರಿಯಿಂದ ಸೂಕ್ತ ಸರ್ವಿಸ್ ರಸ್ತೆ ಹಾಗೂ ರಸ್ತೆ ಬದಿ ಚರಂಡಿ ವ್ಯವಸ್ಥೆಯಿಲ್ಲದ್ದರಿಂದ ಮಳೆಗಾಲದಲ್ಲಿ ನೀರು ಹೆದ್ದಾರಿ ಮುಂದಿನ ಮನೆಗಳಿಗೆ ನುಗ್ಗುವುದರಿಂದ ತೀವ್ರ ತರಹದ ತೊಂದರೆ ಉಂಟಾಗುತ್ತಿತ್ತು. ಈಗ ಅದು ಕೂಡ ಸರಿಪಡಿಸುವ ಕೆಲಸ ನಡೆಯುತ್ತಿದೆ.

ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮವು 3,000 ಜನಸಂಖ್ಯೆ ಹೊಂದಿದೆ. 400 ಮನೆಗಳಿವೆ. ಒಟ್ಟು ನಾಲ್ಕು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಏಳನೇ ತರಗತಿಯವರೆಗೆ ಇರುವ ಸರ್ಕಾರಿ ಶಾಲೆಯಲ್ಲಿ 279 ಮಕ್ಕಳು ಕಲಿಯುತ್ತಿದ್ದಾರೆ.

1953ರಲ್ಲಿ ತುಂಗಭದ್ರಾ ಜಲಾಶಯದಲ್ಲಿ ಮುಳುಗಡೆಯಾದ ವಿವಿಧ ಗ್ರಾಮಗಳ ಜನರು ಬಂದು ಇಲ್ಲಿ ನೆಲೆಸಿದ್ದಾರೆ. ಬಹುತೇಕ ಹಿಂದುಳಿದ ವರ್ಗದವರೇ ಹೆಚ್ಚು ವಾಸವಿರುವ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳು ಜನರನ್ನು ಬಹುವಾಗಿ ಕಾಡುತ್ತಿದ್ದವು. ಆದರೆ, ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಿಂದ ಆ ಸಮಸ್ಯೆಗೆ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು