ಸೋಮವಾರ, ಮೇ 10, 2021
19 °C

‘ಬೇಂದ್ರೆ ಸಾಹಿತ್ಯ ಎಲ್ಲ ಕಾಲಕ್ಕೂ ಪ್ರಸ್ತುತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಬೇಂದ್ರೆ ಸಾಹಿತ್ಯ ಕೇವಲ ನವೋದಯ ಕಾಲಕ್ಕೆ ಸಲ್ಲುವುದಿಲ್ಲ. ಅವರ ಕಾವ್ಯ ಸಾಹಿತ್ಯ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಅವರು ಕೇವಲ ಶಬ್ದ ಬ್ರಹ್ಮರು ಮಾತ್ರವಲ್ಲ, ನಾದ ಬ್ರಹ್ಮರೂ ಹೌದು’ ಎಂದು ಶಂಕರ್‌ ಆನಂದ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಿ.ಜಿ.ಕನಕೇಶಮೂರ್ತಿ ಹೇಳಿದರು.

ಸಮುದಾಯ ಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಪಂದನ ಸಾಹಿತ್ಯಿಕ ಸಾಂಸ್ಕೃತಿಕ ಕಟ್ಟೆ ಸಹಭಾಗಿತ್ವದಲ್ಲಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ದ.ರಾ. ಬೇಂದ್ರೆಯವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

‘ಬೇಂದ್ರೆಯವರ ಕಾವ್ಯಗಳಲ್ಲಿ ಹಾಸ್ಯ, ಲಾಸ್ಯ, ಶೃಂಗಾರ, ಕರುಣೆ ಮೈಗೂಡಿಸಿಕೊಂಡಂತೆ ಬಂಡಾಯವೂ ಸಿಡಿದೆದ್ದಿದೆ. ಸಮಕಾಲೀನ ಸಂಗತಿಗಳಿಗೆ ಮಹತ್ವ ಕೊಡುವುದಲ್ಲದೆ ಸುತ್ತಲೂ ನೋಡುವ ದಾರ್ಶನಿಕರಾಗಿ ನಿಲ್ಲುತ್ತಾರೆ. ಸ್ವಾನುಭವವೇ ಆಗಲಿ, ಲೋಕಾನುಭವವೇ ಆಗಲಿ ಹದಗೆಡದಂತೆ ನಿಂತು ಕೇಳುವಂತೆ ಕಾವ್ಯ ಕಟ್ಟಿದರು. ಹಸಿವು ಬೇಂದ್ರೆಯವರ ದೃಷ್ಟಿಯಲ್ಲಿ ಮಾನವನ ಅತಿದೊಡ್ಡ ಸಾಮಾಜಿಕ ಸಮಸ್ಯೆ’ ಎಂದು ತಿಳಿಸಿದರು.

ಸಮುದಾಯ ಕರ್ನಾಟಕ ಸಂಘಟನೆಯ ಗೌರವ ಅಧ್ಯಕ್ಷ ಎ. ಕರುಣಾನಿಧಿ, ‘ಪಂಪನ ಕಾಲದ ಸಾಹಿತ್ಯ ಮಾರ್ಗ ದೇಶಿ ಎರಡು ಬಗೆ. ಬೇಂದ್ರೆ ಮಾರ್ಗ ಸಾಹಿತ್ಯ ತೊರೆದು ದೇಶಿಯ ಸೊಗಡನ್ನು ಚೆನ್ನಾಗಿ ಬಳಸಿಕೊಂಡು ಕಾವ್ಯ ಕಟ್ಟಿದರು. ಬಡತನ, ಹಸಿವು ಕಂಡ ಅವರು ಕಾವ್ಯವನ್ನು ಹದವಾಗಿ ಹಿತಮಿತವಾಗಿ ಬಳಸಿದರು’ ಎಂದರು.

ಸಾಹಿತಿ ದಯಾನಂದ ಕಿನ್ನಾಳ್, ಸಮುದಾಯ ಸಂಘಟನೆಯ ಜಿಲ್ಲಾ ಅಧ್ಯಕ್ಷ ಎಂ.ಮುನಿರಾಜ, ಲೇಖಕಿ ಡಾ.ಎಸ್.ಡಿ.ಸುಲೋಚನಾ, ಗಾಯಕ ನಾಗರಾಜ ಪತ್ತಾರ ಇದ್ದರು.

ಬಳಿಕ ನಡೆದ ಕವಿಗೋಷ್ಠಿಯಲ್ಲಿ ಡಾ.ಕೆ.ನಾಗಪುಷ್ಪಲತಾ, ನೂರ್ ಜಹಾನ್, ರಮ್ಯಾ ಒಡೆಯರ್, ವಿ. ಪರಶುರಾಮ, ನಾಗರಾಜ, ಕ್ಯಾದಿಗಿಹಾಳ್ ಉದೇದಪ್ಪ, ವಿರೂಪಾಕ್ಷಗೌಡ, ಟಿ.ಯಮನಪ್ಪ, ಉಮಾಮಹೇಶ್ವರ, ಜಗದೀಶ ಬೆನ್ನೂರು, ಶೀಲಾ ಬಡಿಗೇರ, ಹಾಲ್ಯಾ ನಾಯ್ಕ, ಎಚ್.ಎಂ. ಜಂಬುನಾಥ, ವೆಂಕಟೇಶ ಬಡಿಗೇರ, ಕಾಡಜ್ಜಿ ಮಂಜುನಾಥ, ಜಿ.ಯರಿಸ್ವಾಮಿ, ಜಿ.ಎಂ.ರಾಜಶೇಖರ ಬೇಂದ್ರೆ ಕುರಿತು ಕವನ ವಾಚಿಸಿದರು.

ವಿಜಯಕುಮಾರ, ಶ್ರೀಧರ ಮರುಳ್, ಮಲ್ಲಿಕಾರ್ಜುನ, ಕೆ. ಸುಜಾತಾ, ಅನುರಾಧ ಪತ್ತಾರ, ವಾಲ್ಯಾ ನಾಯ್ಕ, ಎ. ಗೌತಮಿ, ಭಾರತಿ ಹಾಗೂ ತಂಡದವರು ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು