ಬಿಜೆಪಿ ಸೋಲಿಸಿ, ಪ್ರಜಾತಂತ್ರ ಉಳಿಸಿ: ಬಿಸಾಟಿ ಮಹೇಶ ಮನವಿ

ಶುಕ್ರವಾರ, ಮೇ 24, 2019
28 °C

ಬಿಜೆಪಿ ಸೋಲಿಸಿ, ಪ್ರಜಾತಂತ್ರ ಉಳಿಸಿ: ಬಿಸಾಟಿ ಮಹೇಶ ಮನವಿ

Published:
Updated:

ಹೊಸಪೇಟೆ: ‘ಸಂವಿಧಾನ ಹಾಗೂ ಪ್ರಜಾತಂತ್ರದ ಉಳಿವಿಗಾಗಿ ಜನ ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು’ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ)
ರಾಜ್ಯ ಸಮಿತಿ ಉಪಾಧ್ಯಕ್ಷ ಬಿಸಾಟಿ ಮಹೇಶ ಮನವಿ ಮಾಡಿದ್ದಾರೆ.

‘2014ರ ಚುನಾವಣೆ ಪೂರ್ವದಲ್ಲಿ ಮೋದಿಯವರು ‘ಅಚ್ಛೆ ದಿನ್‌’ ಭರವಸೆ ನೀಡಿದ್ದರು. ಆದರೆ, ಐದು ವರ್ಷ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಭರವಸೆ ಈಡೇರಿಸಿಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕಪ್ಪು ಹಣ ವಾಪಸ್‌ ತರಲು ಆಗಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಿಲ್ಲ’ ಎಂದು ಪ್ರಕಟಣೆಯಲ್ಲಿ ಪಟ್ಟಿ ಮಾಡಿದ್ದಾರೆ.

‘ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಗುಂಪು ಹಲ್ಲೆಗಳಿಂದ ಅಲ್ಪಸಂಖ್ಯಾತರ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಸಂವಿಧಾನ ಬದಲಿಸುವ ಮಾತುಗಳನ್ನು ಆಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುವ ಹುನ್ನಾರ ನಡೆಸಲಾಗುತ್ತಿದೆ. ದೇಶದ ಸಂಪನ್ಮೂಲವನ್ನು ಬಂಡವಾಳಷಾಹಿಗಳ ಕೈಗೆ ಕೊಟ್ಟು, ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ಜರಿದರು.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಬ್ಯಾಂಕಿಂಗ್‌ ವ್ಯವಸ್ಥೆ ಹಾಳು ಮಾಡಿದ್ದಾರೆ. ಡಿಜಿಟಲ್‌ ಇಂಡಿಯಾ, ಕೌಶಲ ಭಾರತ ಸೇರಿದಂತೆ ಇತರೆ ಯೋಜನೆಗಳ ಮೂಲಕ ಬಿಜೆಪಿ ಹಾಗೂ ಆರ್‌.ಎಸ್‌.ಎಸ್‌ ಕಾರ್ಯಕರ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ಕುಲಗೆಡಿಸಿದ್ದಾರೆ. ರಾಷ್ಟ್ರೀಯವಾದದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿದ್ದಾರೆ’ ಎಂದು ಆರೋಪಿಸಿದರು. 

‘ದೇಶದ ಬಹುತ್ವ, ಬಹುಸಂಸ್ಕೃತಿ ಉಳಿಯಬೇಕಾದರೆ ಬಿಜೆಪಿ ಅಧಿಕಾರದಿಂದ ತೊಲಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರವಾಗಿ ಯೋಚಿಸಿ ಹಕ್ಕು ಚಲಾಯಿಸಬೇಕು’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !