ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ವಿರೋಧಿಗಳ ಸೋಲಿಸೋಣ: ಬಸವರಾಜ

ದಲಿತ ಮತದಾರರ ಜಿಲ್ಲಾ ಜಾಗೃತಿ ಸಮಾವೇಶ
Last Updated 12 ಏಪ್ರಿಲ್ 2019, 12:30 IST
ಅಕ್ಷರ ಗಾತ್ರ

ಹೊಸಪೇಟೆ: ‘ಪ್ರಜಾಪ್ರಭುತ್ವ ವ್ಯವಸ್ಥೆ, ದೇಶದ ಸಂವಿಧಾನದ ಮೇಲೆ ನಂಬಿಕೆಯಿಲ್ಲದ ಕೋಮುವಾದಿ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ, ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕು’ ಎಂದುಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.

ದಲಿತ ಹಕ್ಕುಗಳ ಜಿಲ್ಲಾ ಸಮಿತಿಯಿಂದ ಶುಕ್ರವಾರ ಇಲ್ಲಿನ ಗೌತಮ ಬುದ್ಧ ಸಭಾಂಗಣದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 127ನೇ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ‘ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವ ರಕ್ಷಣೆ’ ಕುರಿತ ವಿಚಾರ ಸಂಕಿರಣ ಹಾಗೂ ದಲಿತ ಮತದಾರರ ಜಿಲ್ಲಾ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿ ಮುಖಂಡರು ಹೋದಲ್ಲಿ, ಬಂದಲ್ಲಿ ಸಂವಿಧಾನ ಸುಡುವ, ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಾರೆ. ಮೀಸಲಾತಿ ತೆಗೆಯಲು ಹಾತೊರೆಯುತ್ತಿದ್ದಾರೆ. ಮನುಸ್ಮೃತಿ ಸಿದ್ಧಾಂತ ಹೇರಲು ಪ್ರಯತ್ನಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಬದಲಿಸಿದರೆ ಶೋಷಿತರು, ದಲಿತರು, ಅಲ್ಪಸಂಖ್ಯಾತರು ಗುಲಾಮರಾಗಿ ಬಾಳಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು’ ಎಂದು ಸಲಹೆ ಮಾಡಿದರು.

‘2014ರ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ಭರವಸೆಗಳನ್ನು ಕೊಟ್ಟಿದ್ದರು. ಆದರೆ, ಒಂದೇ ಒಂದು ಭರವಸೆ ಈಡೇರಿಸಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ದಲಿತರು, ಮಹಿಳೆಯರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಬಹುಮುಖ ಸಂಸ್ಕೃತಿಯ ದೇಶದಲ್ಲಿ ಏಕಸಂಸ್ಕೃತಿ ಹೇರುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಪುನಃ ಅಧಿಕಾರಕ್ಕೆ ಬಂದರೆ ಈ ದೇಶವನ್ನು ಸಂಪೂರ್ಣ ಹಾಳು ಮಾಡುತ್ತಾರೆ’ ಎಂದು ಎಚ್ಚರಿಸಿದರು.

‌ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶ ವಿಘಟನೆಯಾಗುತ್ತಿದೆ. ಜಾತಿ, ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಲಾಗುತ್ತಿದೆ. ಒಂದೇ ಸಿದ್ಧಾಂತವನ್ನು ಹೇರುವ ಪ್ರಯತ್ನ ಮಾಡಲಾಗುತ್ತಿದೆ. ಜಾತಿವಾದಿ ಶಕ್ತಿಗಳ ಕುತಂತ್ರ ಅರಿತು ಜಾತ್ಯತೀತ ಶಕ್ತಿಗಳನ್ನು ಜನ ಚುನಾವಣೆಯಲ್ಲಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ, ಸಿ.ಐ.ಟಿ.ಯು ಜಿಲ್ಲಾ ಘಟಕದ ಅಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ, ಮುಖಂಡರಾದ ಎ.ಸ್ವಾಮಿ,ಕೆ.ಎನ್.ಸಂತೋಷ, ಪಿ.ಎನ್.ಈರಣ್ಣ, ಎಸ್.ಸತ್ಯಮೂರ್ತಿ, ಯಲ್ಲಾಲಿಂಗ, ಶಿವುಕುಮಾರ, ಎಸ್.ಯಲ್ಲಮ್ಮ, ಎಸ್.ಶಾಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT