ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ, ನಾನು ರಾಮ–ಲಕ್ಷ್ಮಣರು; ಹುಸಿಯಾಗಲಿದೆ ಚುನಾವಣಾ ಪೂರ್ವ ಸಮೀಕ್ಷೆ – ಈಶ್ವರಪ್ಪ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಭವಿಷ್ಯ
Last Updated 29 ಮಾರ್ಚ್ 2018, 6:44 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಸಿ ಫೋರ್’ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯನ್ನು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹುಸಿಗೊಳಿಸಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ನಡೆದಿದ್ದ ಸಮೀಕ್ಷೆಯಲ್ಲಿ ಬಿಜೆಪಿ 174 ಸ್ಥಾನ ಮಾತ್ರ ಗಳಿಸುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಲ್ಲಿ ಪಕ್ಷ ಗಳಿಸಿದ್ದು 324 ಸ್ಥಾನ. ರಾಜ್ಯದಲ್ಲೂ ಅದೇ ಫಲಿತಾಂಶ ಪುನರಾವರ್ತನೆಯಾಗಲಿದೆ. ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರ ಗದ್ದುಗೆ ಏರಲಿದೆ. ಯಡಿಯೂರಪ್ಪ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಕಳೆದ ಚುನಾವಣೆ ಸಮಯದಲ್ಲಿ ಹಲವು ಆಶ್ವಾಸನೆ ನೀಡಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಜನರಿಗೆ ದ್ರೋಹ ಎಸಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದಲ್ಲಿ ಗೊಂದಲ ಮೂಡಿಸುವುದರಲ್ಲೇ ಐದು ವರ್ಷ ಕಳೆದಿದ್ದಾರೆ ಎಂದು ದೂರಿದರು.

ಅಧಿಕಾರಕ್ಕೆ ಬರುವ ಮೊದಲು ನೀಡಿದ ಆಶ್ವಾಸನೆಯಂತೆ ಉದ್ಯೋಗ, ಶಿಕ್ಷಣ, ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಿಲ್ಲ. ಹಿಂದೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಹಿಂದುಳಿದ, ದಲಿತ ವರ್ಗಕ್ಕೆ ಬಿಡುಗಡೆ ಮಾಡಿದ ಅನುದಾನ ಎಷ್ಟು? ಹಿಂದ ವರ್ಗದ ಚಾಂಪಿಯನ್ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು ಎನ್ನುವ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಹಿಂದು ವಿರೋಧಿ ನೀತಿ ಅನುಸರಿಸಲಾಗಿದೆ. ಉಡುಪಿ ಶ್ರೀಕೃಷ್ಣ ಮಠ ಸೇರಿದಂತೆ ಎಲ್ಲ ಮಠಗಳನ್ನು ಸ್ವಾಧೀನಕ್ಕೆ ಪಡೆಯಲು ಸಂಚು ರೂಪಿಸಲಾಗಿತ್ತು. ವಿರೋಧಕ್ಕೆ ಹೆದರಿ ಹಿಂದೆ ಸರಿದರು.

ಉಡುಪಿಗೆ ಹೋದರೂ ಮುಖ್ಯಮಂತ್ರಿ ಶ್ರೀಕೃಷ್ಣನ ದರ್ಶನ ಪಡೆಯಲಿಲ್ಲ. ರಾಹುಲ್ ಗಾಂಧಿಗೂ ದರ್ಶನ ಪಡೆಯಲು ಬಿಡಲಿಲ್ಲ ಎಂದು ವ್ಯಂಗ್ಯವಾಡಿದರು.

ಗೋಹತ್ಯೆಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಪಿಎಫ್ಐ ಕಾರ್ಯಕರ್ತರಿಗೆ ರಕ್ಷಣೆ ನೀಡುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಹಲವು ಮಠ-ಮಾನ್ಯಗಳಿಗೆ ಅನುದಾನ ನೀಡಿತ್ತು. ಕಾಂಗ್ರೆಸ್‌ಗಿಂತ ಬಿಜೆಪಿಗೇ ಹಿಂದುಳಿದ, ದಲಿತ ವರ್ಗದ ಮೇಲೆ ಹೆಚ್ಚು ಕಾಳಜಿ ಇದೆ. ಸಿದ್ದರಾಮಯ್ಯ ಆ ವರ್ಗ ಮುಂದಿಟ್ಟುಕೊಂಡು ಸುಳ್ಳು ಆಶ್ವಾಸನೆ ನೀಡಿ, ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈ ಚುನಾವಣೆಯಲ್ಲಾದರೂ ಕಾಂಗ್ರೆಸ್‌ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸವಾಲು ಎಸೆದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ್ರು, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ಡಿ.ಎಸ್. ಅರುಣ್, ಎನ್.ಜೆ. ರಾಜಶೇಖರ್, ಎಸ್.ಎಸ್. ಚನ್ನಬಸಪ್ಪ, ಎಸ್. ದತ್ತಾತ್ರಿ, ಮಧುಸೂದನ್, ರತ್ನಾಕರ್ ಶೆಣೈ, ಅನಿತಾ ರವಿಶಂಕರ್, ಅಶೋಕ್‌ ನಾಯ್ಕ ಉಪಸ್ಥಿತರಿದ್ದರು.

**

ಏ.3ಕ್ಕೆ ಸಮಾವೇಶ

ಕಾಗಿನೆಲೆಯಲ್ಲಿ ಏಪ್ರಿಲ್‌ 3ರಂದು ಹಿಂದುಳಿದ, ದಲಿತ ವರ್ಗಗಳ ಬೃಹತ್‌ ಸಮಾವೇಶ ಆಯೋಜಿಸಲಾಗುತ್ತಿದೆ. ಸುಮಾರು 3ರಿಂದ 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುತ್ತಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

**

‘ಪಕ್ಷ ಅಧಿಕಾರಕ್ಕೆ ತರಲು ಶ್ರಮ’

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷ ಆಂತರಿಕ ಸಮೀಕ್ಷೆ ನಡೆಸಿದೆ. ಗೆಲುವು ಸಾಧಿಸುವ ಅಭ್ಯರ್ಥಿಗಳಿಗೆ ವರಿಷ್ಠರು ಅವಕಾಶ ಕಲ್ಪಿಸುತ್ತಾರೆ. ಶಿವಮೊಗ್ಗದಲ್ಲೂ ಹಲವರು ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇವೆ. ಪಕ್ಷ ಅಧಿಕಾರಕ್ಕೆ ತರುವುದೇ ಮುಂದಿರುವ ಗುರಿ ಎಂದು ಈಶ್ವರಪ್ಪ ಹೇಳಿದರು.

**

ಯಡಿಯೂರಪ್ಪ ಹಾಗೂ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ರಾಮ, ಲಕ್ಷ್ಮಣರು. ಸಣ್ಣಪುಟ್ಟ ಮನಸ್ತಾಪ ಎಂದೋ ಬಗೆಹರಿದಿದೆ.

–ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT