ಚಿಂತ್ರಪಳ್ಳಿ ಮಣ್ಣಿನ ಹಣತೆಗೆ ಭಾರಿ ಬೇಡಿಕೆ

7

ಚಿಂತ್ರಪಳ್ಳಿ ಮಣ್ಣಿನ ಹಣತೆಗೆ ಭಾರಿ ಬೇಡಿಕೆ

Published:
Updated:
Deccan Herald

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಚಿಂತ್ರಪಳ್ಳಿಯಲ್ಲಿ ದೀಪಾವಳಿ ಹಬ್ಬಕ್ಕೆಂದೇ ತಯಾರಿಸುವ ಹಣತೆಗಳಿಗೆ ಜಿಲ್ಲೆ ಸೇರಿದಂತೆ ಗದಗ, ಕೊಪ್ಪಳ, ದಾವಣಗೆರೆಯಲ್ಲಿ ಬಹಳ ಬೇಡಿಕೆ ಇದೆ.

ಗ್ರಾಮದ ಕುಂಬಾರ ರಮೇಶ್‌ ಮತ್ತು ಅವರ ಕುಟುಂಬ ಕಳೆದ 40 ವರ್ಷಗಳಿಂದ ಕುಂಬಾರಿಕೆಯಲ್ಲೇ ಬದುಕು ಕಂಡುಕೊಂಡಿದ್ದಾರೆ. ಪೂರ್ವಜರಿಂದ ಕಲಿತ ಕುಂಬಾರಿಕೆ ಕಲೆಯಿಂದ, ಕುಂಬಾರ ರಮೇಶ್‌ ಹೊಸ ವಿಧಾನಗಳನ್ನು ಬಳಸಿ ನವೀನ ರೀತಿಯ ಹಣತೆಗಳನ್ನು ತಯಾರಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ.

ಸ್ಥಳೀಯ ಚಿಂತ್ರಪಳ್ಳಿ ಕೆರೆಯಲ್ಲಿ ದೊರೆಯವ ಮಣ್ಣಿನಿಂದ ತಯಾರಿಸಿದ ಹಣತೆಗಳನ್ನು ವಿವಿಧ ಜಿಲ್ಲೆಗಳ ಜನರು ಸ್ಥಳಕ್ಕೆ ಬಂದು ಖರೀದಿಸುವುದು ವಿಶೇಷ.

ಕಳೆದ ಒಂದು ತಿಂಗಳಿಂದ ಕೇವಲ ಹಣತೆಗಳ ತಯಾರಿಕೆಯಲ್ಲಿ ತೊಡಗಿರುವ ರಮೇಶ್ ಅವರಿಗೆ ತಂದೆ, ತಾಯಿ ಮತ್ತು ಪತ್ನಿ ಸಾಥ್ ನೀಡಿದ್ದಾರೆ. ರಮೇಶ್ ಅವರಿಗೆ ಮಾರುಕಟ್ಟೆಯ ತೊಂದರೆಯಿಲ್ಲ. ವಿವಿಧ ನಗರ ಮತ್ತು ಗ್ರಾಮಗಳಿಂದ ಬರುವ ಖರೀದಿದಾರರು ಮುಂಗಡ ಹಣ ನೀಡಿ ತೆಗೆದುಕೊಂಡು ಹೋಗುತ್ತಾರೆ.

ಈ ವರ್ಷ ಹತ್ತು ಸಾವಿರ ಹಣತೆಗಳನ್ನು ಮಾರಾಟ ಮಾಡುವ ಗುರಿ ಹೊಂದಿದ್ದಾರೆ. ಅದಕ್ಕೆಂದೇ ಹಲವು ದಿನಗಳ ಹಿಂದೆಯೇ ಪೂರ್ವಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಹಣತೆಗಳು ಸಿದ್ಧಗೊಂಡಿದ್ದು, ಮಾರುಕಟ್ಟೆಯಲ್ಲಿ ಮಾರಾಟಕ್ಕೆ ತಯಾರಾಗಿವೆ. ಹಣತೆಗಳಿಗೆ ವಿವಿಧ ರೀತಿಯ ಬಣ್ಣ ಲೇಪನ ಮಾಡಿ, ಸುಂದರ ರೂಪ ಕೊಡುತ್ತಾರೆ. ಇದು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.
ಹಣತೆಗಳಿಗೆ ಶಂಖರೂಪ, ಸೆಟ್‌ ದೀಪ, ಪ್ರಣತಿ ದೀಪ ಸೇರಿದಂತೆ ವಿವಿಧ ಹೆಸರುಗಳನ್ನು ನೀಡಿ ಅವುಗಳಿಗೆ ಅಂತಿಮ ಸ್ಪರ್ಶ ಕೊಡುವ ಕೆಲಸ ಅಂತಿಮ ಹಂತದಲ್ಲಿದೆ. ಒಂದು ಸೆಟ್‌ ಹಣತೆಗಳನ್ನು ₨100ಗೆ ಮಾರಾಟ ಮಾಡುತ್ತಾರೆ.

‘ಈ ಬಾರಿ ಹಣತೆಗಳನ್ನು ಸಗಟಾಗಿ ಮಾರಾಟ ಮಾಡದೇ ಚಿಲ್ಲರೆ ಮಾರಾಟ ಮಾಡುತ್ತೇವೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ. ಹಣತೆಗಳನ್ನು ತಯಾರಿಸಲು ಹೆಚ್ಚಿನ ಖರ್ಚು ಬರುವುದಿಲ್ಲ. ಆದರೆ, ಒಂದು ತಿಂಗಳಿಂದ ಮನೆಯ ಎಲ್ಲ ಸದಸ್ಯರು ಸೇರಿ ತಯಾರಿಸುತ್ತಿರುವುದು ಸಾವಿರಾರು ರೂಪಾಯಿ ಕೂಲಿ ಹಣ ಉಳಿತಾಯವಾಗಿದೆ. ಹಣತೆಗಳನ್ನು ಒಲೆಯಲ್ಲಿ ಸುಡಲು ಕಟ್ಟಿಗೆ ಖರೀದಿಸಬೇಕು. ದೀಪಾವಳಿಗೆ ತಯಾರಿಸುವ ಹಣತೆಗಳ ಮಾರಾಟದಿಂದ ಇದುವರೆಗೂ ನಷ್ಟವಾಗಿಲ್ಲ’ ಎಂದು ರಮೇಶ್ ಹೇಳುತ್ತಾರೆ.

ಬೇಸಿಗೆಯಲ್ಲಿ ತಯಾರಿಸುವ ಇಲ್ಲಿನ ಮಡಿಕೆಗಳಿಗೂ ಹತ್ತಾರು ಜಿಲ್ಲೆಗಳ ಮಾರಾಟಗಾರರಿಂದ ಬೇಡಿಕೆ ಇದೆ. ತಯಾರಿಕೆಗೆ ಮುಂಗಡ ಹಣ ನೀಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !