ಕಾಡಂಚಿನ ರೈತರಿಗೆ ಹಗಲಲ್ಲೇ ವಿದ್ಯುತ್‌ ಕೊಡಿ

7
ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ

ಕಾಡಂಚಿನ ರೈತರಿಗೆ ಹಗಲಲ್ಲೇ ವಿದ್ಯುತ್‌ ಕೊಡಿ

Published:
Updated:
Deccan Herald

ಹೊಸಪೇಟೆ: ‘ತಾಲ್ಲೂಕಿನಲ್ಲಿ ಚಿರತೆ, ಕರಡಿ ಹಾಗೂ ಕಾಡು ಹಂದಿಗಳು ಯಥೇಚ್ಛವಾಗಿದ್ದು, ಕಾಡಂಚಿನ ರೈತರಿಗೆ ಹಗಲಲ್ಲೇ ವಿದ್ಯುತ್‌ ಪೂರೈಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್‌. ರಾಜಪ್ಪನವರು ಜೆಸ್ಕಾಂ ಅಧಿಕಾರಿಗೆ ಸೂಚಿಸಿದರು.

ನಗರದಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಏಳು ಗಂಟೆ ಬದಲಾಗಿ ಆರು ತಾಸು ವಿದ್ಯುತ್‌ ಪೂರೈಸುತ್ತಿದ್ದೀರಿ. ಅದು ಕೂಡ ತಡರಾತ್ರಿ. ವೊಲ್ಟೋಜ್‌ ಸಹ ಇರುವುದಿಲ್ಲ. ಕಾಡಂಚಿನ ಭಾಗದ ಹೊಲಗಳಲ್ಲಿ ಚಿರತೆ, ಕರಡಿಗಳು ಓಡಾಡುತ್ತವೆ. ಪರಿಸ್ಥಿತಿ ಹೀಗಿರುವಾಗ ರಾತ್ರಿ ವೇಳೆ ವಿದ್ಯುತ್‌ ಪೂರೈಸಿದರೆ ಹೊಲದಲ್ಲಿ ನೀರು ಹರಿಸಲು ಹೇಗೆ ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನ ಅನೇಕ ಭಾಗಗಳಲ್ಲಿ ಹಗಲಲ್ಲೇ ಕರಡಿ, ಚಿರತೆಗಳು ರೈತರು, ಕುರಿಗಾಹಿಗಳ ಮೇಲೆ ದಾಳಿ ನಡೆಸಿದ ಉದಾಹರಣೆಗಳಿವೆ. ಆದಕಾರಣ ರಾತ್ರಿ ಬದಲು ಹಗಲಿನಲ್ಲೇ ವಿದ್ಯುತ್‌ ಪೂರೈಸಬೇಕು. ರೈತರು ದಿನವಿಡೀ ಗದ್ದೆಗಳಲ್ಲಿ ಕೆಲಸ ಮಾಡಿ, ಕತ್ತಲಾಗುವುದಕ್ಕೂ ಮುನ್ನ ಸುರಕ್ಷಿತವಾಗಿ ಮನೆ ಸೇರಿಕೊಳ್ಳಬಹುದು’ ಎಂದು ಹೇಳಿದರು.

ಜೆಸ್ಕಾಂ ಗ್ರಾಮೀಣ ವಿಭಅಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನರೇಶ್‌, ‘ಹಗಲಿನಲ್ಲೇ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಎಲ್ಲ ರೈತರು ಒಂದೇ ಸಲ ಪಂಪ್‌ಸೆಟ್‌ಗಳನ್ನು ಹಾಕುವುದರಿಂದ ವೊಲ್ಟೋಜ್‌ ಕಮ್ಮಿಯಾಗುತ್ತದೆ. ಕೆಲವು ಕಡೆಗಳಷ್ಟೇ ಈ ಸಮಸ್ಯೆ ಇದೆ. ಹೆಚ್ಚುವರಿ ಫೀಡರ್‌ ಅಳವಡಿಸಲು ಹೈಟೆನ್ಶನ್‌ ವಿದ್ಯುತ್‌ ತಂತಿ ಹಾಕಬೇಕಿದೆ. ರೈಲು ಹಳಿ ಹಾದು ಹೋಗಿರುವುದರಿಂದ ರೈಲ್ವೆ ಇಲಾಖೆಯ ಅನುಮತಿ ಅಗತ್ಯ. ಹೆಚ್ಚುವರಿ ಫೀಡರ್‌ ಅಳವಡಿಸಿದರೆ ಮರಿಯಮ್ಮನಹಳ್ಳಿ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಉಪಾಧ್ಯಕ್ಷ ಶಿವಮೂರ್ತಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !