ಸಮರ್ಪಕವಾಗಿ ಗೊಬ್ಬರ ಪೂರೈಕೆಗೆ ಆಗ್ರಹ

ಶನಿವಾರ, ಜೂಲೈ 20, 2019
25 °C

ಸಮರ್ಪಕವಾಗಿ ಗೊಬ್ಬರ ಪೂರೈಕೆಗೆ ಆಗ್ರಹ

Published:
Updated:
Prajavani

ಹೊಸಪೇಟೆ: ಗೊಬ್ಬರ ಸಹಕಾರ ಸಂಘಗಳಿಗೆ ಸಮರ್ಪಕವಾಗಿ ಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಸಭೆಯಲ್ಲಿ ಕೇಳಿ ಬಂತು.

ಸದಸ್ಯ ಸಿ.ಡಿ. ಮಹಾದೇವ ವಿಷಯ ಪ್ರಸ್ತಾಪಿಸಿ, ’ಸಹಕಾರ ಸಂಘಗಳಿಗೆ ಸಮರ್ಪಕವಾಗಿ ಗೊಬ್ಬರ ಪೂರೈಸದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಈಗ ಬಿತ್ತನೆಯ ಕಾಲ. ರೈತರಿಗೆ ಗೊಬ್ಬರ ಬೇಕಾಗುತ್ತದೆ. ಹಾಗಾಗಿ ಸಕಾಲಕ್ಕೆ ಪೂರೈಸುವ ವ್ಯವಸ್ಥೆ ಮಾಡಬೇಕು‘ ಎಂದರು.

ಅದಕ್ಕೆ ದನಿಗೂಡಿಸಿದ ರಾಜಪ್ಪ, ’ಸರ್ಕಾರ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದಿಲ್ಲ‘ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಷಣ್ಮುಖಪ್ಪ, ’ಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿವೆ. ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸಬೇಕು‘ ಎಂದು ಆಗ್ರಹಿಸಿದರು.

‘ಅರಣ್ಯ ಇಲಾಖೆಯಿಂದ ಮೆಟ್ರಿ ಭಾಗಕ್ಕೆ 46 ಸಿಲಿಂಡರ್‌ಗಳನ್ನು ನೀಡಲಾಗಿದೆ. ಗ್ಯಾಸ್‌ ತುಂಬಿಸಿಕೊಳ್ಳಲು ಜನ ಹೊಸಪೇಟೆ ನಗರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಗ್ಯಾಸ್‌ ತುಂಬಿಸಿಕೊಡುವ ವ್ಯವಸ್ಥೆ ಇರದಿದ್ದರೆ ಸಿಲಿಂಡರ್‌ಗಳನ್ನು ಏಕೆ ಕೊಡಬೇಕಿತ್ತು?‘ ಎಂದು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ವಲಯ ಅರಣ್ಯ ಅಧಿಕಾರಿ ಎನ್‌. ಬಸವರಾಜ, ’ಕಂಪ್ಲಿಯಲ್ಲಿ ಗ್ಯಾಸ್‌ ಏಜೆನ್ಸಿ ಆರಂಭಿಸಲು ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ. ಶೀಘ್ರ ಆರಂಭಿಸುವಂತೆ ಇನ್ನೊಮ್ಮೆ ಪತ್ರ ಬರೆಯಲಾಗುವುದು‘ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ. ವೆಂಕೋಬಪ್ಪ ಮಾತನಾಡಿ, ’ಒಂದು ವರ್ಷದಿಂದ ಈ ಸಮಸ್ಯೆ ಇದೆ. ಇಷ್ಟು ನಿಧಾನ ಗತಿಯಲ್ಲಿ ಕೆಲಸ ನಡೆದರೆ ಜನರಿಗೆ ತೊಂದರೆ ಆಗುತ್ತದೆ. ಆದ್ಯತೆಯ ಮೇರೆಗೆ ಈ ಕೆಲಸ ಆಗಬೇಕು‘ ಎಂದು ಸೂಚಿಸಿದರು.

ಅಧ್ಯಕ್ಷೆ ಜೋಗದ ನೀಲಮ್ಮ, ಸದಸ್ಯರಾದ ಪಾಲಪ್ಪ. ನಾಗವೇಣಿ, ಸುಬ್ಬಮ್ಮ, ಮಲ್ಲೆ ಹನುಮಕ್ಕ, ಶಾರದಮ್ಮ, ಜಗದೀಶ್‌ ಗೌಡ, ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಬೆಣ್ಣಿ ಬಸವರಾಜ, ಶಿಕ್ಷಣ ಸಂಯೋಜನಾಧಿಕಾರಿ ಗುರುರಾಜ್‌, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಂದ್ರ, ಕೃಷಿ ಇಲಾಖೆ ಅಧಿಕಾರಿ ವಾಮದೇವ ಕೊಳ್ಳಿ, ಬಿ.ಸಿ.ಎಂ. ಅಧಿಕಾರಿ ಎರ್ರಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !