ಬುಧವಾರ, ನವೆಂಬರ್ 25, 2020
25 °C
ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ; ಸಿಎಂ, ಸಚಿವರಿಗೆ ಕೃತಜ್ಞತೆ

ವಿಜಯನಗರ ಜಿಲ್ಲೆ ರಚನೆ: ಶೀಘ್ರ ಗೆಜೆಟ್‌ ಅಧಿಸೂಚನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜಿಲ್ಲೆಗೆ ಸಂಬಂಧಿಸಿದಂತೆ ಆದಷ್ಟು ಶೀಘ್ರ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲೆ ರಚನೆಗಾಗಿ 2007ರಿಂದ ಹೋರಾಟ ಆರಂಭಿಸಲಾಗಿತ್ತು. ದಿ. ಡಾ. ಉಳ್ಳೇಶ್ವರ್‌ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಈಗ ರಾಜಕೀಯ ಇಚ್ಛಾಶಕ್ತಿ ತೋರಿಸಿ, ಜಿಲ್ಲೆ ರಚನೆಗೆ ಆನಂದ್‌ ಸಿಂಗ್ ಶ್ರಮಿಸಿದ್ದಾರೆ ಎಂದು ಗುರುವಾರ ನಗರದಲ್ಲಿ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮಾಜಿಶಾಸಕರಾದ ದಿ. ಶಂಕರಗೌಡ, ರತನ್‌ ಸಿಂಗ್‌, ಗುಜ್ಜಲ್‌ ಜಯಲಕ್ಷ್ಮಿ, ಎಚ್‌.ಆರ್‌. ಗವಿಯಪ್ಪ ನೂತನ ಜಿಲ್ಲೆ ರಚನೆಗೆ ಈ ಹಿಂದೆ ಶ್ರಮಿಸಿದ್ದಾರೆ. ಮಠಾಧೀಶರು, ಸಂಘ ಸಂಸ್ಥೆಗಳು ಕೂಡ ಬೆಂಬಲ ಸೂಚಿಸಿದ್ದವು. ಆ ಹೋರಾಟ ಈಗ ತಾರ್ಕಿಕ ಅಂತ್ಯ ಕಂಡಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯ ಹಿಂದುಳಿದ ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೊಸಪೇಟೆಯು ಪಶ್ಚಿಮ ತಾಲ್ಲೂಕುಗಳಿಗೆ ಭೌಗೋಳಿಕವಾಗಿ ಹತ್ತಿರದಲ್ಲಿದ್ದು, ಜಿಲ್ಲಾ ಕೇಂದ್ರ ಸ್ಥಾನಕ್ಕೆ ಅರ್ಹವಾಗಿದೆ. ಕಂಪ್ಲಿ ತಾಲ್ಲೂಕು ಚಾರಿತ್ರಿಕವಾಗಿ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು. ಅದು ಸಹಜವಾಗಿಯೇ ನೂತನ ಜಿಲ್ಲೆಗೆ ಸೇರಬೇಕು. ಕೂಡ್ಲಿಗಿ ತಾಲ್ಲೂಕಿನ ಜನ ಕೂಡ ಹೊಸ ಜಿಲ್ಲೆಗೆ ಸೇರಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಅದನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆಗೆ ಅನುಮೋದನೆ ನೀಡಿ, ಗೆಜೆಟ್‌ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೋರಾಟ ಸಮಿತಿಯ ಮುಖಂಡರಾದ ವೈ. ಯಮುನೇಶ್‌, ಮಲ್ಲಾರಿ ದೀಕ್ಷಿತ್‌, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಇಮಾಮ್‌ ನಿಯಾಜಿ, ಶಿವಾನಂದ ಕನ್ನಾಳ್‌, ಎಂ.ಸಿ. ವೀರಸ್ವಾಮಿ, ಎಸ್‌. ಗಾಳೆಪ್ಪ, ರಾಮಣ್ಣ, ಚಂದ್ರಬಾಬು, ತಾರಿಹಳ್ಳಿ ಹನುಮಂತಪ್ಪ, ದುರುಗಪ್ಪ ಪೂಜಾರ್‌, ವಿನಾಯಕ ಶೆಟ್ಟರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು