ಹೊಸಪೇಟೆ: ಹೆಚ್ಚಿಸಿದ ಆಸ್ತಿ ತೆರಿಗೆ ಹಿಂಪಡೆಯಲು ಆಗ್ರಹ

ಹೊಸಪೇಟೆ (ವಿಜಯನಗರ): ನಗರಸಭೆ ಹೆಚ್ಚಿಸಿರುವ ಆಸ್ತಿ ತೆರಿಗೆ ಆದೇಶ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಕಾರ್ಯಕರ್ತರು ಶುಕ್ರವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋವಿಡ್ ಲಾಕ್‌ಡೌನ್‌ನಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತೆರಿಗೆ ಹೆಚ್ಚಿಸಿ ಜನರ ಕಷ್ಟ ಹೆಚ್ಚಿಸುವುದು ಎಷ್ಟು ಸರಿ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ನಗರಸಭೆಯಿಂದ ನಗರದಲ್ಲಿ ಸಮೀಕ್ಷೆ ಕಾರ್ಯ ಕೈಗೊಂಡು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಬೇಕು. ಆಶ್ರಯ ಯೋಜನೆಯ ಅಡಿಯಲ್ಲಿ ಇನ್ನೂ ಬಾಕಿ ಇರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಆಶ್ರಯ ಯೋಜನೆಯಡಿ ಆಯ್ಕೆಯಾದವರಿಗೆ ಇದುವರೆಗೆ ಸಹಾಯ ಧನ ಬಂದಿಲ್ಲ. ತಾಂತ್ರಿಕ ದೋಷ ಸರಿಪಡಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕುಡಿಯುವ ನೀರು, ಒಳಚರಂಡಿ ಹಾಗೂ ಕೇಬಲ್ ಅಳವಡಿಸಲು ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಅಂತಹ ರಸ್ತೆಗಳನ್ನು ಆದಷ್ಟು ಶೀಘ್ರ ದುರಸ್ತಿಗೊಳಿಸಬೇಕು. 24X7 ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ನಗರವನ್ನು ದೂಳುಮುಕ್ತಗೊಳಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಅನಂತಶಯನಗುಡಿಯ ಬಳ್ಳಾರಿ ರಸ್ತೆ, ಹಂಪಿ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಚಿತ್ತವಾಡ್ಗಿಯ ಟಿಪ್ಪು ನಗರದಲ್ಲಿ ನೀರಿನ ಟ್ಯಾಂಕ್ ಮೋಟಾರ್ ಸರಿಪಡಿಸಬೇಕು. ಅರವಿಂದ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನು ನಿಯಂತ್ರಿಸಬೇಕು. ಎಲ್ಲ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.
ಡಿವೈಎಫ್‌ಐ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್, ಜಿಲ್ಲಾ ಅಧ್ಯಕ್ಷ ವಿ. ಸ್ವಾಮಿ, ಮುಖಂಡರಾದ ಮರಡಿ ಜಂಬಯ್ಯ ನಾಯಕ, ಕಲ್ಯಾಣಯ್ಯ, ಈಡಿಗರ ಮಂಜುನಾಥ, ಕಿನ್ನಾಳ್ ಹನುಮಂತ, ಬಂಡೆ ತಿರುಕಪ್ಪ, ಬಿ.ಟಿ. ಸೂರ್ಯಕಿರಣ್, ಅಲ್ತಾಫ್, ರೆಹಮಾನ್, ಮಹಾಂತೇಶ್, ಜಾವೀದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.