ಬುಧವಾರ, ನವೆಂಬರ್ 13, 2019
28 °C

ಪ್ರತ್ಯೇಕ ಬಲಿಜ ನಿಗಮ ಮಂಡಳಿ ರಚನೆಗೆ ಬಲಿಜರ ಹಕ್ಕೊತ್ತಾಯ

Published:
Updated:
Prajavani

ಹೊಸಪೇಟೆ: ಪ್ರತ್ಯೇಕ ಬಲಿಜ ನಿಗಮ ಮಂಡಳಿ ರಚಿಸಬೇಕೆಂದು ಆಗ್ರಹಿಸಿ ಬಲಿಜ ಸಂಘದ ನೇತೃತ್ವದಲ್ಲಿ ಸಮುದಾಯದವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ’ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡುವುದರಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಲಿಜ ಸಮುದಾಯ ಸಬಲೀಕರಣ ಹೊಂದಲು ಸಾಧ್ಯ. ಹಾಗಾಗಿ ಸರ್ಕಾರ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ, ದೀರ್ಘಕಾಲದ ಬೇಡಿಕೆ ಈಡೇರಿಸಬೇಕು‘ ಎಂದು ಒತ್ತಾಯಿಸಿದರು.

’ಶೆಟ್ಟಿ ಬಲಿಜ, ಗಾಜುಲ ಬಲಿಜ, ಕಾಪು ಬಲಿಜ, ಮನ್ನೂರು ಕಾಪು, ತೆಲಗ, ಒಂಟರಿ ಸಮುದಾಯಗಳು ಇದರ ವ್ಯಾಪ್ತಿಗೆ ಬರುತ್ತವೆ. ಸಮಾಜದವರು ಬಳೆ, ಅರಿಶಿಣ ಕುಂಕುಮ, ಮುತ್ತು, ಸುಗಂಧ ದ್ರವ್ಯ ವ್ಯಾಪಾರ ಮಾಡಿ ಬದುಕು ಸಾಗಿಸುತ್ತಿದದಾರೆ. 1984ರಿಂದ 1994ರ ವರೆಗೆ ಬಲಿಜ ಸಮುದಾಯ ಹಿಂದುಳಿದ ವರ್ಗಗಳ ಪ್ರವರ್ಗ 2(ಎ) ನಲ್ಲಿತ್ತು. ಆದರೆ, 1994ರಲ್ಲಿ ಅದರಿಂದ ತೆಗೆದು ಹಾಕಲಾಗಿದೆ. ಇದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾಜದವರಿಗೆ ಅನ್ಯಾಯವಾಗುತ್ತಿದೆ‘ ಎಂದು ತಿಳಿಸಿದ್ದಾರೆ.

’ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ 225 ಜಾತಿಗಳಲ್ಲಿ ಬಲಿಜ ಸಮುದಾಯಕ್ಕೆ ಮಾತ್ರ ಅನ್ಯಾಯವಾಗಿದೆ. ಯಾವುದೇ ಸೂಕ್ತ ಕಾರಣ ತಿಳಿಸದೆ ಮೀಸಲಾತಿ ಸೌಲಭ್ಯ ಕಸಿದುಕೊಳ್ಳಲಾಗಿದೆ. ನಮ್ಮ ಹೋರಾಟಕ್ಕೆ ಮಣಿದು 2011ರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನ್ವಯವಾಗುವಂತೆ ಮೀಸಲು ಸೌಲಭ್ಯವನ್ನು ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಪಿ.ಸಿ. ಮೋಹನ್‌ ಅವರನ್ನು ಸಂಸದರಾಗಿ ಮಾಡಲಾಗಿದೆ. ಈಗ ನೀವೇ ಮುಖ್ಯಮಂತ್ರಿ ಆಗಿರುವುದರಿಂದ ಉದ್ಯೋಗದಲ್ಲೂ ಮೀಸಲು ಸೌಲಭ್ಯ ಕೊಡಲು ಕ್ರಮ ಕೈಗೊಳ್ಳಬೇಕು‘ ಎಂದು ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.

ಸಂಘದ ಅಧ್ಯಕ್ಷ ಎನ್‌.ಟಿ. ರಾಜು, ಕಾರ್ಯದರ್ಶಿ ಜಿ. ಲಕ್ಷ್ಮಿನಾರಾಯಣ, ಖಜಾಂಚಿ ಜಿ. ಪಾಂಡುರಂಗ, ಮುಖಂಡರಾದ ವೈ. ಯಮುನೇಶ್‌, ಕೆ. ಶಿವಾನಂದ, ವಿಷ್ಣು, ಯೋಗಾನಂದ, ಕೆ. ಅನಿಲ್‌ ಕುಮಾರ್‌, ಜಿ. ಜಂಬುನಾಥ, ಆರ್‌. ಕೃಷ್ಣಮೂರ್ತಿ, ಎಸ್‌. ಕೋದಂಡಪಾಣಿ, ಕೆ. ಗವಿಸಿದ್ದಪ್ಪ, ಎನ್‌. ಶಿವಶಂಕರ್‌, ನಾಗರಾಜ, ಕೆ.ಬಿ. ದುರ್ಗಾಪ್ರಸಾದ್‌, ಎನ್‌. ಮಂಜುನಾಥ, ಲಕ್ಷ್ಮಿದೇವಿ, ಮಂಜುಳಾ, ಜಿ. ಉಮಾದೇವಿ, ಸರಜೂ, ಜಿ. ರಾಜೇಂದ್ರ, ಎಂ. ಪ್ರಶಾಂತ್‌ ಇದ್ದರು.

 

ಪ್ರತಿಕ್ರಿಯಿಸಿ (+)