ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭವನದ ನಿವೇಶನಕ್ಕೆ ಆಗ್ರಹ

ನಿವೇಶನ ಹಸ್ತಾಂತರ ಮಾಡದಿದ್ದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ಎಚ್ಚರಿಕೆ
Last Updated 21 ಮೇ 2019, 12:25 IST
ಅಕ್ಷರ ಗಾತ್ರ

ಹೊಸಪೇಟೆ: ‘ನಗರಾಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಕೂಡಲೇ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ ಎಚ್ಚರಿಕೆ ನೀಡಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2004ರಲ್ಲಿ ನಿವೇಶನಕ್ಕಾಗಿ ಪರಿಷತ್ತಿನಿಂದ ₹34 ಸಾವಿರ ಕಟ್ಟಲಾಗಿದೆ. ನಾಗಪ್ಪನ ಕಟ್ಟೆ ಬಳಿಯ 279/ಬಿ/ಬಿ, 279/ಬಿ/3ಎ.ಐ. ಸರ್ವೇ ನಂಬರ್‌ನಲ್ಲಿ ಒಟ್ಟು 12,741 ಚದರ ಅಡಿ ನಿವೇಶನ ಮೀಸಲಿಟ್ಟಿದ್ದರು. ಆದರೆ, ಇದುವರೆಗೆ ಪರಿಷತ್ತಿಗೆ ಹಸ್ತಾಂತರ ಮಾಡದೆ ವಿಳಂಬ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಿವೇಶನವನ್ನು ಹಸ್ತಾಂತರಿಸಬೇಕೆಂದು ಹಲವು ಸಲ ಪ್ರಾಧಿಕಾರದ ಆಯುಕ್ತರಿಗೆ ಪರಿಷತ್ತಿನಿಂದ ಪತ್ರ ಬರೆಯಲಾಗಿದೆ. ಆದರೆ, ಅದಕ್ಕೆ ಸ್ಪಂದಿಸಿಲ್ಲ. ನಿವೇಶನ ಕೊಡದ ಕಾರಣ ಕನ್ನಡ ಭವನ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಖಾಸಗಿಯವರ ಕಟ್ಟಡಗಳಲ್ಲಿ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪರಿಷತ್ತಿಗೆ ಸೇರಿದ ಸ್ವಂತ ಕಟ್ಟಡವಾದರೆ ಎಲ್ಲ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಸಂಘಟಿಸಬಹುದು’ ಎಂದು ಹೇಳಿದರು.

‘ನಗರದಲ್ಲಿ ಸುಸಜ್ಜಿತವಾದ ಕನ್ನಡ ಭವನ ನಿರ್ಮಾಣಕ್ಕೆ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನು ಬಳಿಗಾರ ಅವರು ಈಗಾಗಲೇ ₹20 ಲಕ್ಷ ಅನುದಾನ ಕೊಡುವುದಾಗಿ ಘೋಷಿಸಿದ್ದಾರೆ. ಮೊದಲ ಕಂತಿನಲ್ಲಿ ₹10 ಲಕ್ಷ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಾಧಿಕಾರವು ನಿವೇಶನ ಕೊಟ್ಟರೆ ಜುಲೈನಲ್ಲಿ ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಡಿಗಲ್ಲು ಹಾಕಲಾಗುವುದು’ ಎಂದು ಮಾಹಿತಿ ಹಂಚಿಕೊಂಡರು.

‘ಜೂ. 2ರಂದು ನಗರದ ತಾಲ್ಲೂಕು ಕಚೇರಿ ಎದುರು ಪರಿಷತ್ತಿನ ಆಜೀವ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಆಸಕ್ತರು ₹500 ಶುಲ್ಕ, ಎರಡು ಭಾವಚಿತ್ರಗಳನ್ನು ಕೊಟ್ಟು ಸದಸ್ಯತ್ವ ಪಡೆಯಬಹುದು’ ಎಂದು ತಿಳಿಸಿದರು.

ಪರಿಷತ್ತಿನ ಕಾರ್ಯದರ್ಶಿ ಎಚ್‌.ಎಂ. ಜಂಬುನಾಥ,ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್‌, ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಕೆ. ನಾಗರಾಜ, ಕಂಪ್ಲಿ ಘಟಕದ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಪ್ರಮುಖರಾದ ನಿಂಬಗಲ್‌ ರಾಮಕೃಷ್ಣ, ಮಧುರಚೆನ್ನ ಶಾಸ್ತ್ರಿ, ಎನ್‌. ನಾಗರಾಜ, ಎರ್ರಿಸ್ವಾಮಿ, ಎಸ್‌.ಎಂ. ಗಿರೀಶ್‌, ನೂರ್‌ ಜಹಾನ್‌, ವಿಶ್ವನಾಥ ಕವಿತಾಳ, ಸೋದಾ ವಿರೂಪಾಕ್ಷಗೌಡ, ಸೌಭಾಗ್ಯಲಕ್ಷ್ಮಿ, ಉಮಾ ಮಹೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT