ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಸೋರಿಕೆ: ತನಿಖೆಗೆ ಸಮಿತಿ ರಚನೆ

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯೋಗವು ಅಧಿಕೃತವಾಗಿ ರಾಜ್ಯ ಚುನಾವಣೆಯ ದಿನಾಂಕವನ್ನು ಪ್ರಕಟಿಸುವ ಮೊದಲೇ ಮತದಾನ ದಿನದ ಮಾಹಿತಿ ಸೋರಿಕೆ ಆಗಿರುವ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ.

ಈ ಗಂಭೀರ ಲೋಪದ ಬಗ್ಗೆ ತನಿಖೆ ನಡೆಸಿ ಏಳು ದಿನಗಳಲ್ಲಿ ವರದಿ ನೀಡುವಂತೆ ಆಯೋಗದ ಹಿರಿಯ ಅಧಿಕಾರಿಗಳನ್ನು ಒಳಗೊಂಡ  ಸಮಿತಿಗೆ ಸೂಚಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

‘ಟೈಮ್ಸ್‌ ನೌ’ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ಆಧರಿಸಿ ಟ್ವೀಟ್‌ ಮಾಡಿದ್ದಾಗಿ ಬಿಜೆಪಿಯ ಅಮಿತ್‌ ಮಾಳವಿಯಾ ತಿಳಿಸಿರುವುದರಿಂದ ಸುದ್ದಿವಾಹಿನಿಗೆ ಈ ಕುರಿತು ಮಾಹಿತಿ ನೀಡುವಂತೆ ಕೋರಲಾಗಿದೆ.

ಆಯುಕ್ತರಿಗೆ ಮುಜುಗರ: ಆಯೋಗದ ಕಚೇರಿಯಲ್ಲಿ ಮಂಗಳವಾರ ಬೆಳಿಗ್ಗೆ 11ಕ್ಕೆ ಆರಂಭವಾದ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆ ಕುರಿತ ವಿವರ ನೀಡುತ್ತಿದ್ದ ಆಯುಕ್ತರು ಗೋಷ್ಠಿಯ ಕೊನೆಗೆ ದಿನಾಂಕ ಪ್ರಕಟಿಸಲಿದ್ದರು.

ಅವರು ದಿನಾಂಕ ಘೋಷಿಸುವ ಮೊದಲೇ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಮತದಾನದ ಮತ್ತು ಮತ ಎಣಿಕೆಯ ದಿನಾಂಕದ ಮಾಹಿತಿ ಮತ್ತು ‘ಬ್ರೇಕಿಂಗ್‌ ಸುದ್ದಿ’ ಹರಿದಾಡುತ್ತಿದ್ದುದರ ಕುರಿತು ಪತ್ರಕರ್ತರು ಗಮನ ಸೆಳೆದಾಗ, ಆಯುಕ್ತರು ಹಾಗೂ ಸಿಬ್ಬಂದಿ ಅಚ್ಚರಿಗೆ ಒಳಗಾದರು.

‘ಮೇ 12ರಂದು ಮತದಾನ, ಮೇ 18ರಂದು ಮತ ಎಣಿಕೆ’ ಎಂಬ ಮಾಹಿತಿಯನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದಲೇ ಟ್ವೀಟ್‌ ಮಾಡಲಾಗಿದೆ’ ಎಂದು ಗಮನ ಸೆಳೆದಾಗ, ಆಯೋಗದ ಸಿಬ್ಬಂದಿ ಕುಳಿತಿದ್ದ ಆಸನಗಳತ್ತ ದೃಷ್ಟಿ ಹರಿಸಿದ ಅವರು, ‘ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಮೊದಲು ನಾನು ವಿವರ ನೀಡುವೆ. ನಂತರ ಈ ಬಗ್ಗೆ ಪರಿಶೀಲಿಸಿಕೊಳ್ಳಿ’ ಎಂದು ಹೇಳಿದ ರಾವತ್‌, ವಿವರಗಳನ್ನೆಲ್ಲ ನೀಡಿ ದಿನಾಂಕ ಪ್ರಕಟಿಸಿದಾಗ, ಸೋರಿಕೆಯಾದ ಸುದ್ದಿಯಲ್ಲಿ ಮತ ಎಣಿಕೆಯ ದಿನ ಮಾತ್ರ ಬದಲಾಗಿತ್ತು.

ಘೋಷಣೆಗೆ ಮೊದಲೇ ಚುನಾವಣೆಯ ದಿನಾಂಕದ ಮಾಹಿತಿ ಸೋರಿಕೆ ಆಗಿರುವುದು ಸ್ಪಷ್ಟವಾಗಿದ್ದು, ದಿನಾಂಕ ಮುಂದೂಡಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರ ನೀಡದ ಅವರು, ಆಯೋಗವು ಮಾಹಿತಿ ಸೋರಿಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ. ಈ ಕುರಿತು ಅಗತ್ಯ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT