‘ಐಎಸ್ಆರ್ ಸಕ್ಕರೆ ಕಾರ್ಖಾನೆ ಆರಂಭಿಸಿ’

7
ಸಾಲ ಮನ್ನಾ, ಭೂಸುಧಾರಣೆ ತಿದ್ದುಪಡಿ ಕಾಯ್ದೆ ಕೈಬಿಡಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ

‘ಐಎಸ್ಆರ್ ಸಕ್ಕರೆ ಕಾರ್ಖಾನೆ ಆರಂಭಿಸಿ’

Published:
Updated:
Deccan Herald

ಹೊಸಪೇಟೆ: ಐ.ಎಸ್.ಆರ್. ಸಕ್ಕರೆ ಕಾರ್ಖಾನೆ ಪುನರ್‌ ಪ್ರಾರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಚಾರ ಕೈಬಿಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ರಸ್ತೆ ಮಧ್ಯದಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ನಗರದ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ ಬಂದ್‌ ಆಗಿರುವುದರಿಂದ ಸ್ಥಳೀಯ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಅದನ್ನು ಕೂಡಲೇ ಶುರು ಮಾಡಿದರೆ ಕಬ್ಬು ಬೆಳೆಯುವ ರೈತರಿಗೆ ಅನುಕೂಲವಾಗುತ್ತದೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌ ತಿಳಿಸಿದರು.

‘ರಾಜ್ಯದ 13 ಜಿಲ್ಲೆಗಳಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ದುರದೃಷ್ಟಕರ ವಿಚಾರ. ಬರುವ ದಿನಗಳಲ್ಲಿ ರೈತರ ಜಮೀನುಗಳನ್ನು ಬಂಡವಾಳಷಾಹಿಗಳ ಕೈಗೆ ಒಪ್ಪಿಸುವುದು ಇದರ ಹುನ್ನಾರ. ಬಗರ್‌ ಹುಕುಂ ಸಾಗುವಳಿ ಮಾಡುವ ರೈತರಿಗೆ ಹಕ್ಕು ಪತ್ರ ಕೊಡಬೇಕು. ಅಲ್ಲಿಯವರೆಗೆ ಅರಣ್ಯ ಅಧಿಕಾರಿಗಳು ರೈತರಿಗೆ ತೊಂದರೆ ಕೊಡಬಾರದು’ ಎಂದು ಹೇಳಿದರು.

‘ಗಣಿ ಪರಿಸರ ಪುನಶ್ಚೇತನ ಅಭಿವೃದ್ಧಿ ನಿಗಮದಿಂದ ತಾಲ್ಲೂಕಿನ ಕಾರಿಗನೂರಿನಿಂದ ಭುವನಹಳ್ಳಿ ಭಾಗದ ರೈತರಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆ ಜಾರಿಗೆ ತರಬೇಕು. ಹೊಸಪೇಟೆ ಹಾಗೂ ಕಂಪ್ಲಿ ತಾಲ್ಲೂಕಿನಲ್ಲಿ ಸಾವಿರ ಎಕರೆಗೂ ಅಧಿಕ ಬಾಳೆ ಹಾಳಾಗಿದ್ದು, ಕೂಡಲೇ ಅವರಿಗೆ ಪರಿಹಾರ ಕೊಡಬೇಕು. ಹೊಸಪೇಟೆಯಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಹಾಗಾಗಿ ಇಡೀ ತಾಲ್ಲೂಕು ಬರಪೀಡಿತ ಎಂದು ಘೋಷಿಸಬೇಕು. ಸ್ವಾಮಿನಾಥನ್‌ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ಕಳಪೆ ರಸಗೊಬ್ಬರ, ಬೀಜ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಎಲ್‌.ಎಸ್‌. ರುದ್ರಪ್ಪ, ಬಿ.ವಿ. ಗೌಡ, ಕೆ. ಕಾಸೀಂ ಸಾಬ್‌, ಸಣ್ಣ ಜಡೆಪ್ಪ, ಕೆ.ಎಸ್‌. ಹನುಮಂತ, ನಾಗು ನಾಯ್ಕ, ಜೆ. ಪಂಪಾಪತಿ ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !