ಸರ್ಕಾರದ ವಿರುದ್ಧ ಪತ್ರ ಚಳವಳಿ

7
ತುಂಗಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ; ಉಜ್ಜಯನಿ ಪೀಠದ ಸಿದ್ಧಲಿಂಗ ಶಿವಾಚಾರ್ಯರಿಂದ ಹೇಳಿಕೆ

ಸರ್ಕಾರದ ವಿರುದ್ಧ ಪತ್ರ ಚಳವಳಿ

Published:
Updated:
Deccan Herald

ಹೊಸಪೇಟೆ: ‘ತುಂಗಭದ್ರಾ ಜಲಾಶಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಪತ್ರ ಚಳವಳಿ ಆರಂಭಿಸಲಾಗುವುದು’ ಎಂದು ಉಜ್ಜಯನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿ ಆಗಿರುವುದರಿಂದ ಸೋಮವಾರ ಅವರು ವಿಶೇಷ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ತುಂಗಭದ್ರಾ ಅಣೆಕಟ್ಟೆ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿದೆ. ಇದನ್ನೇ ನೆಚ್ಚಿಕೊಂಡು ಸಾವಿರಾರು ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ, ಅಣೆಕಟ್ಟೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಹೂಳು ತೆಗೆಯುವಂತೆ ಆಗ್ರಹಿಸಿ ಶೀಘ್ರದಲ್ಲೇ ಪತ್ರ ಚಳವಳಿ ಆರಂಭಿಸುತ್ತೇವೆ’ ಎಂದು ಹೇಳಿದರು.

‘ತುಂಗಭದ್ರಾ ರೈತ ಸಂಘವು ಎರಡು ಸಲ ಜಲಾಶಯದ ಹಿನ್ನೀರಿನಿಂದ ಯಶಸ್ವಿಯಾಗಿ ಅಪಾರ ಪ್ರಮಾಣದಲ್ಲಿ ಹೂಳು ತೆಗೆದಿದೆ. ಇದು ರೈತರಿಂದ ಸಾಧ್ಯವಾಗುವುದಾದರೆ ಸರ್ಕಾರದಿಂದ ಏಕೆ ಸಾಧ್ಯವಾಗುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ, ಶೀಘ್ರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜತೆಗೆ ಹೂಳಿನ ವಿಷಯವಾಗಿ ರೈತರು ನಡೆಸುವ ಎಲ್ಲ ರೀತಿಯ ಹೋರಾಟಗಳಿಗೆ ತಮ್ಮ ಸಂಪೂರ್ಣ ಬೆಂಬಲ ಇರುತ್ತದೆ’ ಎಂದು ಘೋಷಿಸಿದರು.

‘ಸುಮಾರು 60 ಟಿ.ಎಂ.ಸಿ. ಅಡಿ ನೀರು ಜಲಾಶಯದಿಂದ ನದಿಗೆ ನೀರು ಹರಿಸಲಾಗಿದೆ. ಒಂದುವೇಳೆ ಹೂಳು ತೆಗೆಸಿದರೆ 33 ಟಿ.ಎಂ.ಸಿ. ಅಡಿ ನೀರು ಉಳಿಸಬಹುದು. ಜತೆಗೆ ಸುತ್ತಮುತ್ತಲಿನ ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ರೈತರ ಬಾಳು ಹಸನಾಗುತ್ತದೆ’ ಎಂದು ತಿಳಿಸಿದರು.

ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮಾತನಾಡಿ, ‘ಜಲಾಶಯದ ಹಿನ್ನೀರಿನಿಂದ ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆಯ ಕೆರೆಗಳನ್ನು ತುಂಬಿಸಬೇಕು. ತುಂಬಿರುವ ಹೂಳನ್ನು ತೆಗೆಸಬೇಕು’ ಎಂದರು.

‘ಕಾವೇರಿಗೆ ಕೊಡುವಷ್ಟು ಪ್ರಾಮುಖ್ಯ ರಾಜ್ಯ ಸರ್ಕಾರ ತುಂಗಭದ್ರಾ, ಕೃಷ್ಣೆಗೆ ಕೊಡುತ್ತಿಲ್ಲ. ಈ ತಾರತಮ್ಯದ ಧೋರಣೆ ಹೋಗಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಒತ್ತು ಕೊಡಬೇಕು’ ಎಂದು ಆಗ್ರಹಿಸಿದರು.

ಮಲ್ಲಿಕಾರ್ಜುನ ಸ್ವಾಮೀಜಿ, ಚಾನುಕೋಟಿ ಸ್ವಾಮೀಜಿ, ವಾಮದೇವ ಶಿವಾಚಾರ್ಯ ಸ್ವಾಮೀಜಿ, ರಾಘವಾಂಕ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಕಲ್ಯಾಣ ಸ್ವಾಮೀಜಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !