ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೇಯಕ್ಕಾಗಿ ಬಿಜೆಪಿ ಕಾಂಗ್ರೆಸ್ ನಡುವೆ ಪೈಪೋಟಿ

ಪರಿಶಿಷ್ಟ ಪಂಗಡಕ್ಕೆ ಸೇರಿದ ಪರಿವಾರ, ತಳವಾರ ಸಮುದಾಯ
Last Updated 23 ಮಾರ್ಚ್ 2018, 9:19 IST
ಅಕ್ಷರ ಗಾತ್ರ

ಚಾಮರಾಜನಗರ: ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದ ಶ್ರೇಯ ಪಡೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಹಗ್ಗಜಗ್ಗಾಟ ಆರಂಭಿಸಿವೆ.

ಸಂಸದ ಧ್ರುವನಾರಾಯಣ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ಮಲ್ಲಿಕಾರ್ಜುನಪ್ಪ ಅವರು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸುವ ಮೂಲಕ ಇದು ತಮ್ಮ ತಮ್ಮ ಪಕ್ಷಗಳ ಸಾಧನೆ ಎಂದು ಹೇಳಿಕೊಂಡರು.

ಕಾಂಗ್ರೆಸ್ ವಾದ ಏನು?

ಸಂಸದ ಧ್ರುವನಾರಾಯಣ ಮಾತನಾಡಿ, ‘ಪರಿಶಿಷ್ಟ ಪಂಗಡಕ್ಕೆ ತಳವಾರ ಮತ್ತು ಪರಿವಾರ ಸಮುದಾಯವನ್ನು ಸೇರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ’ ಎಂದು ಬಣ್ಣಿಸಿದರು.

ಕೇಂದ್ರ ಸರ್ಕಾರ ಸಮಗ್ರ ಕುಲಶಾಸ್ತ್ರೀಯ ಅಧ್ಯಯನದ ವರದಿ ಕೇಳಿದಾಗ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ನಿರ್ಲಕ್ಷಿಸಿತು. ನಂತರ, ಅಧಿಕಾರಕ್ಕೆ ಬಂದ ಕಾಂಗ್ರೆಸ್ 2014ರಲ್ಲಿ ಸಲ್ಲಿಸಿತು. ಆದರೆ, ಕೇಂದ್ರ 2016ರ ಆಗಸ್ಟ್‌ನಲ್ಲಿ ವರದಿಯನ್ನು ವಾಪಸ್ ಕಳುಹಿಸಿ ಕೆಲವೊಂದು ಸ್ಪಷ್ಟನೆಗಳನ್ನು ಕೇಳಿತು. 2017ರಲ್ಲಿ ರಾಜ್ಯ ಸರ್ಕಾರವು ಕೇಂದ್ರ ಕೇಳಿದ ಎಲ್ಲ ಸ್ಪಷ್ಟನೆಗಳನ್ನೂ ನೀಡಿ ಶಿಫಾರಸು ಮಾಡಿತು. ಇದರ ಆಧಾರದ ಮೇಲೆ ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ ಎಂದು ವಿವರಿಸಿದರು.

‘ಅಲ್ಲದೇ, ಸ್ವತಃ ನಾನು 4  ಬಾರಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜೋಯೆಲ್ ಓರಂ ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದೆ. ನನ್ನ ಜತೆ ಇತರ 4 ಮಂದಿ ಸಂಸದರೂ ಇದ್ದರು. ಪ್ರತಿ ಬಾರಿ ಹೋದಾಗಲೂ ಸಚಿವರು ನಮ್ಮನ್ನು ಪರಿವಾರ ಮತ್ತು ತಳವಾರ ಎಂದೇ ಕರೆಯುತ್ತಿದ್ದರು. ಅಷ್ಟರಮಟ್ಟಿಗೆ ನಮ್ಮ ಒತ್ತಡ ಕೆಲಸ ಮಾಡಿತ್ತು’ ಎಂದು ಹೇಳಿದರು.

ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರದಲ್ಲಿದ್ದ 8 ವರ್ಷಗಳ ಕಾಲ ಕುಲಶಾಸ್ತ್ರೀಯ ಅಧ್ಯಯನವೇ ಆಗಲಿಲ್ಲ. ಇದು ಸ್ಪಷ್ಟವಾಗಿ ರಾಜ್ಯ ಸರ್ಕಾರದ ಸಾಧನೆ ಎಂದು ತಿಳಿಸಿದರು.

ಬಿಜೆಪಿ ವಾದವೇನು?

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ‘ತಳವಾರ ಮತ್ತು ಪರಿವಾರ ಸಮುದಾಯವನ್ನು
ಪರಿಶಿಷ್ಟ ಪಂಗಡಕ್ಕೆ ಸೇರಿಸಿದ್ದು ಕೇಂದ್ರ ಸರ್ಕಾರದ ಐತಿಹಾಸಿಕ ಸಾಧನೆ’ ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಈ ಕುರಿತ ಪ್ರಯತ್ನಕ್ಕೆ ಚಾಲನೆ ನೀಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಾಡಿದ ಶಿಫಾರಸ್ಸಿನ ಕಡತವೇ ನಾಪತ್ತೆಯಾಗಿತ್ತು. ಹತ್ತು ವರ್ಷಗಳ ಕಾಲ ಕಡತವೇ ಸಿಕ್ಕಿರಲಿಲ್ಲ ಎಂದು ಅವರು ಆರೋಪಿಸಿದರು.

ಸಂಸದ ಧ್ರುವನಾರಾಯಣ ಅವರ ಹೇಳಿಕೆ ಸಂಪೂರ್ಣವಾಗಿ ಸತ್ಯಕ್ಕೆ ದೂರವಾದುದು. 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರವೇ ಈ ನಿರ್ಧಾರವನ್ನು ತೆಗೆದುಕೊಳ್ಳಬಹುದಿತ್ತು. ಇಷ್ಟು ವರ್ಷ ಕಾಯಬೇಕಾದ ಅಗತ್ಯ ಇರಲಿಲ್ಲ ಎಂದು ತಿರುಗೇಟು ನೀಡಿದರು.

ಈ ಕುರಿತು ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಶ್ರೀರಾ ಮುಲು, ಅನಂತಕುಮಾರ್ ಹಾಗೂ ಎಸ್.ಎ.ರಾಮದಾಸ್ ಅವಿರತ ಶ್ರಮ ಪಟ್ಟಿದ್ದಾರೆ. ಸಾಧನೆಯ ಸಂಪೂರ್ಣ ಶ್ರೇಯ ಬಿಜೆಪಿ ಮುಖಂಡರಿಗೆ ಹಾಗೂ ಜನಾಂಗದ ಹೋರಾಟಗಾರರಿಗೆ ಸಲ್ಲಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT