ಶನಿವಾರ, ಜನವರಿ 18, 2020
23 °C
ಜ. 13ಕ್ಕೆ ಕಮಲಾಪುರದಲ್ಲಿ ಪೌರತ್ವ ಕಾಯ್ದೆ ವಿರೋಧಿ ಸಭೆ

ಹೊಸಪೇಟೆ: ಪೌರತ್ವ ತಿದ್ದುಪ‍ಡಿ ಕಾಯ್ದೆ ಹಿಂಪಡೆಯಲು ಹಕ್ಕೊತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಜ. 13ರಂದು ಬೆಳಿಗ್ಗೆ 10ಕ್ಕೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಭೆ ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಭಾಗದ ಚಿಂತಕರು ಸಭೆ ಉದ್ದೇಶಿಸಿ ಮಾತನಾಡುವರು’ ಎಂದು ‘ನಾವು ಭಾರತೀಯರು ಎನ್‌.ಪಿ.ಆರ್‌./ಎನ್‌.ಆರ್‌.ಸಿ./ಸಿ.ಎ.ಎ ಕಾಯ್ದೆ ವಿರೋಧಿ ನಾಗರಿಕರ ವೇದಿಕೆ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ ತಿಳಿಸಿದರು.

‘ಅಂದಿನ ಸಭೆಯಲ್ಲಿ ಪ್ರಗತಿಪರ ವಿಚಾರಧಾರೆ ಹೊಂದಿದವರು, ಸೌಹಾರ್ದತೆ ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಕಾಯ್ದೆ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸದೆ, ಬುದ್ಧಿಜೀವಿಗಳೊಂದಿಗೆ ಚರ್ಚಿಸದೆ, ಬಹುಮತವಿದೆ ಎಂದು ಜಾರಿಗೊಳಿಸಿರುವುದು ಸರಿಯಲ್ಲ. ಈಗಾಗಲೇ ದೇಶದಾದ್ಯಂತ ಕಾಯ್ದೆ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಕಾಯ್ದೆ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ನಿರುದ್ಯೋಗ, ಬಡತನ, ಹಸಿವಿನಿಂದ ದೇಶದ ಜನ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಹರಿಸಲು ಪೌರತ್ವ ಕಾಯ್ದೆ ತಂದು ಕೇಂದ್ರ ಸರ್ಕಾರ ಜನರ ನೆಮ್ಮದಿಗೆ ಭಂಗ ತಂದಿದೆ’ ಎಂದು ಆರೋಪಿಸಿದರು.

‘ಶಾಸಕ ಸೋಮಶೇಖರ ರೆಡ್ಡಿ ಅವರು ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವುದು ಸರಿಯಲ್ಲ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು. ಕಾಯ್ದೆ ವಿರೋಧಿಸುವ ಬದಲು ಅದರ ಬಗ್ಗೆ ಪ್ರಚಾರ ಮಾಡುತ್ತಿರುವ ಶಾಸಕ ಆನಂದ್‌ ಸಿಂಗ್‌ಗೆ ಮೂರುವರೆ ವರ್ಷದ ನಂತರ ಚುನಾವಣೆಯಲ್ಲಿ ಜನ ಪಾಠ ಕಲಿಸುವುದು ಖಚಿತ’ ಎಂದು ಹೇಳಿದರು.

ಸಮಿತಿ ಸದಸ್ಯರಾದ ಶರ್ಮಾಸ್‌ ಹುಸೇನ್‌, ಮೆಹಬೂಬ್‌ ಬಾಷಾ, ಕಣ್ಣೇಶ್ವರ ದೇವರಮನೆ, ಅಬ್ದುಲ್‌ ಖುದ್ದೂಸ್‌, ಮೊಹಮ್ಮದ್‌ ಖಾದ್ರಿ, ಟಿ. ಶಿವಕುಮಾರ, ಹೊನ್ನೂರ ವಲಿ, ಡಿ. ನಾಗರಾಜ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು