ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

7

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:

ಹೊಸಪೇಟೆ: ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಹತ್ತು ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗಿಲ್ಲ. ಒಂದು ವರ್ಷ ಹೆಚ್ಚಿನ ವರ್ಷಧಾರೆಯಾಗಿ ರೈತರು ಬೆಳೆದ ಬೆಳೆ ಸಂಪೂರ್ಣ ನಷ್ಟವಾಗಿತ್ತು. ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಪ್ರತಿ ವರ್ಷ ಸಾಲದ ಹೊರೆ ಹೆಚ್ಚಾಗುತ್ತಿದೆ. ಸಂಕಷ್ಟದಿಂದ ಅವರನ್ನು ಪಾರು ಮಾಡಬೇಕಾದರೆ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.

2006ರಿಂದ 2018ರ ವರೆಗೆ ರಾಜ್ಯದಲ್ಲಿ ರೈತರು ವಿವಿಧ ಬ್ಯಾಂಕುಗಳಲ್ಲಿ ₹1.20 ಲಕ್ಷ ಕೋಟಿ ಸಾಲ ಪಡೆದಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ₹36 ಸಾವಿರ ಕೋಟಿಯಷ್ಟೇ ಸಾಲ ಮನ್ನಾ ಮಾಡಿದ್ದಾರೆ. ಇದರಿಂದ 20 ಲಕ್ಷ ರೈತರಿಗಷ್ಟೇ ಅನುಕೂಲವಾಗುತ್ತದೆ. ಇನ್ನುಳಿದ 45 ಲಕ್ಷ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ವಿವರಿಸಿದರು.

ತಾಲ್ಲೂಕಿನ ಕಮಲಾಪುರ ಹೋಬಳಿಯ ರೈತರು ಸಂಕಷ್ಟದಲ್ಲಿದ್ದಾರೆ. ಈ ಭಾಗದಲ್ಲಿ ಏತ ನೀರಾವರಿ ಯೋಜನೆಯನ್ನು ಶಾಸಕರು ಮಂಜೂರು ಮಾಡಿಸಿ, ರೈತರ ಕಷ್ಟ ನೀಗಿಸಬೇಕೆಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಎಂ. ಜಡೆಪ್ಪ, ಉಪಾಧ್ಯಕ್ಷ ಕೆ. ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿ ಎಸ್‌. ರುದ್ರೇಶ್‌, ಮುಖಂಡರಾದ ಹನುಮಂತರೆಡ್ಡಿ, ಎಚ್‌.ಎಸ್‌. ರೇವಣಸಿದ್ದೇಶ್‌, ಬಿ. ತಿಮ್ಮಪ್ಪ, ಕೆ. ಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !