ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್‌ ಕಾಲೇಜಿನ ಬರ್ತ್‌ಡೇ ವನ...

Last Updated 5 ಜೂನ್ 2018, 8:52 IST
ಅಕ್ಷರ ಗಾತ್ರ

ಮೂಡಬಿದಿರೆ ಸಮೀಪದ ಹಂಡೇಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಒಂದು ವಿಶಿಷ್ಟ ಕೈತೋಟವಿದೆ. ಅದರ ಹೆಸರು ‘ಬರ್ತ್ ಡೇ ವನ’.  ಆಳ್ವಾಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ವಿಭಾಗವು ಪರಿಸರ ಸಂರಕ್ಷಣೆಗಾಗಿ ‘ಬರ್ತ್ ಡೇ ವನ’ ಎನ್ನುವ ಹೊಸ ಯೋಜನೆಯನ್ನು  ಈ ವರ್ಷ  ಜನವರಿ 22ರಂದು ಪ್ರಾರಂಭಿಸಿತು. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಮ್ಮ ಹುಟ್ಟುಹಬ್ಬದಂದು ಈ ಬರ್ತ್ ಡೇ ವನದಲ್ಲಿ ಒಂದು ಗಿಡ ನೆಡಬೇಕು. ಅಥವಾ ಬೀಜ ಬಿತ್ತನೆ ಮಾಡಬೇಕು.  ಆಳ್ವಾಸ್‌ ಕಾಲೇಜಿನಲ್ಲಿ ಇರುವಷ್ಟು ದಿನ ಆ ಗಿಡದ ಪೋಷಣೆಯ ಜವಾಬ್ದಾರಿಯನ್ನೂ ಅವರು ಹೊತ್ತುಕೊಳ್ಳಬೇಕು.

‘ಪರಿಸರ ಸ್ನೇಹಿ ಹೆಜ್ಜೆಯಾಗಿ ಹುಟ್ಟುಹಬ್ಬದಂದು ಒಂದು ಗಿಡ ನೆಟ್ಟು ಪೋಷಿಸಿ’ ಎಂದು ಬಹಳ ಮಂದಿ ಹೇಳುವುದನ್ನು ಕೇಳಿದ್ದೆವೆ. ಆದರೆ ಪ್ರತ್ಯಕ್ಷ ನಿದರ್ಶನ ಇಲ್ಲದ ಕಾರಣ ಈ ನಿಲುವನ್ನು ಯಾರೂ ಬಹಳ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದನ್ನು ಕಾರ್ಯರೂಪಕ್ಕೆ ತಂದು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ  ಮೂಡಿಸಲು ಹಂಡೇಲು ಪ್ರಾಥಮಿಕ ಶಾಲೆ ಹಾಗೂ ಆಳ್ವಾಸ್ ಕಾಲೇಜಿನ ಎನ್.ಎಸ್.ಎಸ್. ಘಟಕವು ಸಫಲವಾಗಿದೆ.

ಸುಮಾರು ಒಂದೂವರೆ ಎಕರೆ ಜಮೀನಿನಲ್ಲಿ ಬರ್ತ್ ಡೇ ವನ ವ್ಯಾಪಿಸಿದೆ. ಈಗ ಸುಮರು 45 ಗಿಡಗಳಿವೆ. ‘ವಿದ್ಯಾರ್ಥಿಗಳು ಇಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಕಾಲೇಜಿನ  ಉಪನ್ಯಾಸಕರು ಅಥವಾ ಸ್ವತಃ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರನ್ನು ಆಹ್ವಾನಿಸಬಹುದು. ಮತ್ತೆ ಎರಡು ವರ್ಷಗಳವರೆಗೆ ನೆಟ್ಟ ಗಿಡದ ಸಂಪೂರ್ಣ ಜವಾಬ್ದಾರಿ ವಿದ್ಯಾರ್ಥಿಯದ್ದಾಗಿರುತ್ತದೆ. ಹಣ್ಣು ಬಿಡುವ ಗಿಡಗಳು ಅಥವಾ ಔಷಧೀಯ ಸಸ್ಯಗಳಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಇಲ್ಲಿ ಸುಮಾರು 300 ಹೊಂಡಗಳನ್ನು ತೋಡಲಾಗಿದೆ.  ಬೇಸಿಗೆ ತೀವ್ರವಾಗಿದ್ದಾಗ ಹೆಚ್ಚು ಗಿಡ ನೆಟ್ಟಿಲ್ಲ. ಇದೀಗ ಜೂನ್ ತಿಂಗಳಿಂದ ಯೋಜನೆಯನ್ನು ಪುನರಾರಂಭಿಸಲಾಗುವುದು. ಎರಡು ವರ್ಷಗಳಲ್ಲಿ ಅಲ್ಲೊಂದು ಸುಂದರ ಪರಿಸರ ನಿರ್ಮಾಣದ ಗುರಿ ನಮ್ಮದು ಮತ್ತು ನಾವು ಅದನ್ನು ಸಾಧಿಸಿಯೇ ತೀರುತ್ತೇವೆ’ ಎಂದು ಕಾಲೇಜಿನ ಎನ್.ಎಸ್.ಎಸ್. ಸಂಘಟಕರಾದ ಪ್ರೊ. ಗುರುದೇವ ಎನ್. ಹೇಳುತ್ತಾರೆ.

ಇದಲ್ಲದೇ ಕಾಲೇಜಿನ ವಿವಿಧ ಡಿಪಾರ್ಟ್ ಮೆಂಟ್ ಗಳು ಸಹ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಮನೋಶಾಸ್ತ್ರ ವಿಭಾಗವು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ಹೂವನ್ನು ನೀಡಿ ಸ್ವಾಗತಿಸುವ ಬದಲು ಬೀಜಗಳನ್ನು ಅಥವಾ ಪುಟ್ಟ ಸಸಿಗಳನ್ನು ನೀಡಿ ಸ್ವಾಗತಿಸುತ್ತದೆ. ಈ ಮೂಲಕ ಪರಿಸರ ಅಳಿಸುವ ಬದಲು ಉಳಿಸಿ ಎನ್ನುವ ಸಂದೇಶವನ್ನು ನೀಡುತ್ತದೆ.  ಪರಿಸರ ಸ್ನೇಹೀ ನಡೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಈ ಎಲ್ಲ ಕೆಲಸಗಳ ಹಿಂದಿರುವ ಉದ್ದೇಶ  ಎಂದು ಗುರುದತ್‌ ವಿವರಿಸುತ್ತಾರೆ. ಊರಿಗೊಂದು ಬರ್ತ್‌ಡೇವನ ಇದ್ದರೆ ಚಂದ ಅಲ್ಲವೇ ?

ಶ್ರೀಲಕ್ಷ್ಮಿ ಘಾಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT