ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿಯಿಂದ ಸಮಾಜದ ಮುಖ್ಯವಾಹಿನಿಗೆ

Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಕಂಪ್ಲಿ: ಆಕಸ್ಮಿಕವಾಗಿ ದೇವದಾಸಿ ಪದ್ಧತಿಗೆ ಒಳಗಾಗಿದ್ದ ಮಹಿಳೆಯೊಬ್ಬರು ದೀರ್ಘಕಾಲದ ನಂತರ ಸಮಾಜದಲ್ಲಿ ಆದರ್ಶ ಬದುಕು ರೂಪಿಸಿಕೊಂಡು ಮಾದರಿಯಾಗಿದ್ದಾರೆ.

ಪಟ್ಟಣದ ಅಂಬೇಡ್ಕರ್‌ ನಗರದ ನಿವಾಸಿ ಎಚ್‌. ಗಂಗಮ್ಮ ಅನಿರೀಕ್ಷಿತವಾಗಿ ದೇವದಾಸಿ ಪದ್ಧತಿಯ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದರು. ಅವರ ಅರಿವಿಗೆ ಬರುತ್ತಿದ್ದಂತೆ ಅದಕ್ಕೆ ತಿಲಾಂಜಲಿ ಹಾಡಿದರು. ಅದಾಗಲೇ ಅವರಿಗೆ ಇಬ್ಬರು ಗಂಡು, ಒಬ್ಬ ಹೆಣ್ಣು ಮಗಳು ಜನಿಸಿದ್ದರು. ಹೆರಿಗೆ ವೇಳೆ ಮಗಳು ಮೃತಪಟ್ಟಳು. ನಂತರ ಮಗ ವಿರೂಪಣ್ಣ ಸಿಡಿಲಿಗೆ ಬಲಿಯಾದರು. ಉಳಿದ ಒಬ್ಬ ಮಗ ಎಚ್‌. ರೇಣುಕಪ್ಪ ಅವರನ್ನು ಜತನದಿಂದ ಆರೈಕೆ ಮಾಡಿ ಶಾಲೆಗೆ ಕಳಿಸಿದರು.ಹೀಗೆ ಸಂಕಷ್ಟದ ಜೀವನ ನಡೆಸುತ್ತಿದ್ದಾಗ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ 1982ರಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ಅದರಲ್ಲಿ ಗಂಗಮ್ಮ ಅವರನ್ನು ಗುರುತಿಸಿತು.

ನಂತರ ದೇವದಾಸಿ ನಿಗಮದವರು ಪಟ್ಟಣದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗೆ ಸಾಲ ಸೌಲಭ್ಯಕ್ಕಾಗಿ ಶಿಫಾರಸು ಮಾಡಿದರು. ಬ್ಯಾಂಕ್‌ನವರು 2013ರಲ್ಲಿ ₹20ಸಾವಿರ ಸಾಲ ಮಂಜೂರು ಮಾಡಿದಾಗ ಡಬ್ಬಿ ಅಂಗಡಿ ಆರಂಭಿಸಿದರು. ಒಂದು ವರ್ಷದಲ್ಲಿ ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡಿದ್ದರಿಂದ ಮತ್ತೆ ₹25 ಸಾವಿರ ಸಾಲ ಮಂಜೂರು ಮಾಡಿದರು. ಆ ವೇಳೆಗೆ ಮಗ ರೇಣುಕಪ್ಪ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ. ಅಂಗಡಿ ಮತ್ತು ಮಗನ ಕೂಲಿ ಕೆಲಸದಿಂದ ಬಂದ ಹಣ ಉಳಿತಾಯ ಮಾಡಿ ಬ್ಯಾಂಕ್‌ನಲ್ಲಿ ₹50 ಸಾವಿರ ಠೇವಣಿ ಇಟ್ಟರು. ಆಗ ಬ್ಯಾಂಕಿನವರು ₹1 ಲಕ್ಷ ಸಾಲ ಮಂಜೂರು ಮಾಡಿದ್ದರಿಂದ ಮಗನ ಆಸೆಯಂತೆ ಎರಡು ತಿಂಗಳ ಹಿಂದೆ ಗಂಗಮ್ಮ ₹1.20 ಲಕ್ಷದಲ್ಲಿ ಸಿಮೆಂಟ್‌ ಕಾಂಕ್ರಿಟ್‌ ಮಿಕ್ಸರ್‌ ಮಷಿನ್‌ ಖರೀದಿಸಿದರು.

ಮಷಿನ್‌ಗೆ ದಿನಕ್ಕೆ ₹500 ರಿಂದ ₹700 ಬಾಡಿಗೆ ಇದೆ. ಇತ್ತ ಕಟ್ಟಡ ಕಾರ್ಮಿಕನಾಗಿದ್ದ ಮಗ ಇಂದು ಕಟ್ಟಡ ನಿರ್ಮಾಣದ ಮೇಸ್ತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಗಂಗಮ್ಮ ಜತೆಗೆ ಅವರ ಕುಟುಂಬದ ಬದುಕಿನಲ್ಲಿ ದೊಡ್ಡ ಪಲ್ಲಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT