ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೊಂದು..ಶಾಸಕರಿಗೊಂದು ನ್ಯಾಯ!

ಹಾಳಾದ ರಸ್ತೆಗಳ ದುರಸ್ತಿಗೆ ಹಿಂದೇಟು; ಶಾಸಕರ ಮನೆ ಸುತ್ತ ಭರದ ಅಭಿವೃದ್ಧಿ ಕೆಲಸ
Last Updated 20 ಜನವರಿ 2019, 20:00 IST
ಅಕ್ಷರ ಗಾತ್ರ

ಹೊಸಪೇಟೆ: ಜನರಿಗೊಂದು ನ್ಯಾಯವಾದರೆ, ಅವರನ್ನು ಪ್ರತಿನಿಧಿಸುವ ಶಾಸಕರಿಗೊಂದು ನ್ಯಾಯ..! ಇದು ನಗರದಲ್ಲಿ ಯಾರಾದರೂ ಒಮ್ಮೆ ಸುತಾಡಿ ನೋಡಿದರೆ ಎಂತಹವರಿಗೂ ಅನಿಸದೇ ಇರದು.

24X7 ಕುಡಿಯುವ ನೀರು, ಒಳಚರಂಡಿ ಕಾಮಗಾರಿಗಾಗಿ ನಗರದ ಬಹುತೇಕ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದೆ. ಈ ಪೈಕಿ ಅನಂತಶಯನಗುಡಿ ರಸ್ತೆಯಲ್ಲಿ ಗುಂಡಿಗಳನ್ನು ಮುಚ್ಚಿರುವುದು ಹೊರತುಪಡಿಸಿದರೆ ಬೇರೆ ಯಾವ ರಸ್ತೆಗಳು ದುರಸ್ತಿ ಕಂಡಿಲ್ಲ. ಇದರಿಂದ ಇಡೀ ನಗರದಲ್ಲಿ ದೂಳು ವ್ಯಾಪಿಸಿಕೊಂಡಿದೆ. ಜನ ಹಾಗೂ ವಾಹನ ಸಂಚಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಮೂರ್ನಾಲ್ಕು ತಿಂಗಳಿಂದ ಇದೇ ಪರಿಸ್ಥಿತಿ ಇದೆ. ಅನೇಕ ಸ್ವಯಂ ಸೇವಾ ಸಂಸ್ಥೆಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿವೆ. ನಗರಕ್ಕೆ ‘ದೂಳುಪೇಟೆ’ ಹೆಸರಿಡಬೇಕೆಂದು ಅಣಕವಾಡಿವೆ. ಹೀಗಿದ್ದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ. ಆದರೆ, ನಗರದ ವರ್ತುಲ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಸಕ ಆನಂದ್‌ ಸಿಂಗ್‌ ಅವರಿಗೆ ಸೇರಿದ ಮನೆಯ ಪರಿಸರದಲ್ಲಿ ಭರದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ಅವರ ಮನೆಗೆ ಹೊಂದಿಕೊಂಡಂತೆ ಇದ್ದ ರಾಜಕಾಲುವೆಗಳ ಮಾರ್ಗ ಬದಲಿಸಲಾಗಿದೆ. ಮಣ್ಣು ಸುರಿದು ನೆಲ ಸಮತಟ್ಟುಗೊಳಿಸಲಾಗಿದೆ. ಕಾಂಪೌಂಡ್‌ ನಿರ್ಮಿಸಿ ಗ್ರಿಲ್‌ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲು ನಗರಸಭೆ ಯೋಜನೆ ರೂಪಿಸಿದೆ. ಅದಕ್ಕಾಗಿಯೇ ₹2 ಕೋಟಿ ಹಣ ಮೀಸಲಿಟ್ಟಿದೆ.

ಈ ಹಿಂದೆ ಹೊಲಸಿನಿಂದ ಗಬ್ಬು ನಾರುತ್ತಿದ್ದ ಪ್ರದೇಶವೀಗ ಹೊಸ ರೂಪ ಪಡೆಯುತ್ತಿದೆ. ಆದರೆ, ಶಾಸಕರ ಮನೆ ಎದುರು, ಅದರ ಸುತ್ತಲಿನ ಪರಿಸರಕ್ಕೆ ಹೊಸ ಮೆರಗು ನೀಡುತ್ತಿರುವ ನಗರಸಭೆಗೆ ನಗರದಲ್ಲಿರುವ ಜ್ವಲಂತ ಸಮಸ್ಯೆಗಳು ಕಾಣಿಸುತ್ತಿಲ್ಲವೇಕೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

‘ದೂಳಿನಿಂದ ಇಡೀ ನಗರದ ಜನ ಕಂಗಾಲಾಗಿದ್ದಾರೆ. ರಸ್ತೆ ದುರಸ್ತಿಗೊಳಿಸಿ, ದೂಳಿಗೆ ಮುಕ್ತಿ ಹಾಡಬೇಕಾದ ನಗರಸಭೆಗೆ ಜನಕ್ಕಿಂತ ಶಾಸಕರೊಬ್ಬರ ಹಿತವೇ ಮುಖ್ಯವಾಗಿದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ.

‘ನಗರಸಭೆಯ ಸದಸ್ಯರು, ಅಧಿಕಾರಿಗಳಿಗೆ ಸ್ವಂತ ಯೋಚನೆ ಮಾಡುವ ಶಕ್ತಿಯಿಲ್ಲ. ಶಾಸಕರು ಹೇಳಿದ ಮಾತು ಕೇಳುತ್ತಾರೆ. ಕನಿಷ್ಠ ತಿಳಿವಳಿಕೆಯೇ ಇಲ್ಲ. ಜನಪರ ಯೋಚನೆ ಕೂಡ ಮಾಡುವುದಿಲ್ಲ. ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಅಧಿಕಾರಿಗಳು ಶಿಫಾರಸ್ಸಿನ ಮೇಲೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾರೆ. ಚುನಾಯಿತ ಪ್ರತಿನಿಧಿಗಳು ಏನು ಹೇಳುತ್ತಾರೆ ಅದನ್ನು ಚಾಚುತಪ್ಪದೇ ಪಾಲಿಸುತ್ತಾರೆ. ಕಾನೂನು ಬದ್ಧವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಈ ವಿಷಯದಲ್ಲಿ ಅಸಹಾಯಕರಾಗಿದ್ದಾರೆ’ ಎಂದರು.

ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತ ಕೆ.ಎಂ. ಸಂತೋಷ್‌ ಕುಮಾರ್‌ ಪ್ರತಿಕ್ರಿಯಿಸಿ, ‘ಶಾಸಕರು, ನಗರಸಭೆ ಸದಸ್ಯರ ಮನೆ ಎದುರು ರಸ್ತೆ, ವಿದ್ಯುದ್ದೀಪ, ಚರಂಡಿ ಎಲ್ಲವೂ ಸರಿಯಾಗಿ ಇರುತ್ತದೆ. ಜನ ಹೇಗಿದ್ದರೇನು ಎಂಬ ಧೋರಣೆ ಅವರಲ್ಲಿದೆ. ಪ್ರಭಾವಿಗಳ ಮನೆ ಸುತ್ತಮುತ್ತ ಏನಾದರೂ ಅವ್ಯವಸ್ಥೆಯಾದರೆ ತಕ್ಷಣವೇ ಸರಿಪಡಿಸುವ ಅಧಿಕಾರಿಗಳು, ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT