ಬಿಸಿಲು ಮರೆಸಿದ ಪ್ರಚಾರದ ಹುಮ್ಮಸ್ಸು

ಬುಧವಾರ, ಮೇ 22, 2019
24 °C
ಪ್ರಚಾರದಲ್ಲಿ ತರುಣ ಕಾರ್ಯಕರ್ತರನ್ನು ಮೀರಿಸಿ ಹೆಜ್ಜೆ ಹಾಕಿದ ದೇವೇಂದ್ರಪ್ಪ

ಬಿಸಿಲು ಮರೆಸಿದ ಪ್ರಚಾರದ ಹುಮ್ಮಸ್ಸು

Published:
Updated:
Prajavani

ಹೊಸಪೇಟೆ: ಸಮಯ ಬರೋಬ್ಬರಿ ಬೆಳಿಗ್ಗೆ ಎಂಟು ಗಂಟೆ. ಯುವಕರು, ಮಹಿಳಾ ಕಾರ್ಯಕರ್ತರು ಪಕ್ಷದ ಧ್ವಜ ಕೈಯಲ್ಲಿ ಹಿಡಿದುಕೊಂಡು ಸಿದ್ಧರಾಗಿ ನಿಂತಿದ್ದರು. ಧ್ವನಿವರ್ಧಕದಲ್ಲಿ ಮೋದಿ ಗುಣಗಾನ ಮಾಡುವ ಹಾಡಿನ ಸದ್ದು, ಜಯಘೋಷಗಳು ಮೊಳಗುತ್ತಿದ್ದವು. ಬಳ್ಳಾರಿ ಲೋಕಸಭೆ ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪನವರು ಬರುತ್ತಿದ್ದಂತೆ ಬಾಜಾ, ಭಜಂತ್ರಿ ಸದ್ದು ಮಾಡತೊಡಗಿದವು. ಪಟಾಕಿ ಸದ್ದಿನಿಂದ ಎಲ್ಲರ ಗಮನ ಸ್ವಲ್ಪ ಹೊತ್ತು ಆ ಕಡೆ ತಿರುಗಿತು.

ಲೋಕಸಭೆ ಚುನಾವಣೆ ನಿಮಿತ್ತ ವೈ. ದೇವೇಂದ್ರಪ್ಪನವರು ಗುರುವಾರ ನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬಳ್ಳಾರಿ ರಸ್ತೆಯ ಆಜಾದ್‌ ನಗರದ ಯಲ್ಲಮ್ಮದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಪ್ರಚಾರ ಶುರು ಮಾಡಿದರು. ಅವರೊಂದಿಗೆ ‘ಪ್ರಜಾವಾಣಿ’ ಕೂಡ ಹೆಜ್ಜೆ ಹಾಕಿತು.

ತಮ್ಮ ಬಡಾವಣೆಗೆ ನಾಯಕ ಬರುವ ವಿಷಯ ತಿಳಿದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅವರನ್ನು ಬರಮಾಡಿಕೊಳ್ಳಲು ಮುಂಚಿತವಾಗಿಯೇ ಸೇರಿದ್ದರು. ದೇವೇಂದ್ರಪ್ಪನವರು ಬರುತ್ತಿದ್ದಂತೆ ಅವರ ಪರ ಘೋಷಣೆಗಳನ್ನು ಕೂಗಿದರು. ನಂತರ ಅವರಿಗೆ ಹೂಮಾಲೆ ಹಾಕಿ ಬರಮಾಡಿಕೊಂಡರು. ಬಳಿಕ ಅವರೊಂದಿಗೆ ಹೆಜ್ಜೆ ಹಾಕಿದರು.

ರಸ್ತೆಯ ಎರಡೂ ಬದಿಯಲ್ಲಿ ನಿಂತವರಿಗೆ ದೇವೇಂದ್ರಪ್ಪನವರು ಕೈಮುಗಿದರು. ಕಟ್ಟಡದ ಮೇಲೆ ನಿಂತವರತ್ತ ಕೈತೂರಿ ಗೆಲುವಿನ ಸಂಕೇತ ತೋರಿಸಿದರು. ಮಳಿಗೆ, ಚಹಾದಂಗಡಿ ಹಾಗೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದವರ ಬಳಿ ಹೋಗಿ, ಅವರ ಕೈಕುಲುಕಿ, ಅವರ ಕೈಗೆ ಕರಪತ್ರ ಕೊಟ್ಟು, ‘ಈ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಬೇಕು’ ಎಂದು ಮನವಿ ಮಾಡಿದರು.

ಪ್ರಚಾರದ ನಡುವೆ ಅಲ್ಲಲ್ಲಿ ಕೆಲ ಯುವಕರು ದೇವೇಂದ್ರಪ್ಪನವರ ಬಳಿ ಬಂದು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಇದು ಪ್ರಚಾರದುದ್ದಕ್ಕೂ ಮುಂದುವರೆದಿತ್ತು. ಬಿರು ಬಿಸಿಲಿನಲ್ಲಿ ಎಷ್ಟೇ ಜನ ಬಂದರೂ ಅವರೊಂದಿಗೆ ನಗುತ್ತ ಸೆಲ್ಫಿಗೆ ಪೋಸ್‌ ಕೊಟ್ಟರು. ತಾಳ್ಮೆಯಿಂದ ಅವರೊಂದಿಗೆ ಕೆಲಹೊತ್ತು ಮಾತನಾಡಿ, ಬೆಂಬಲಿಸುವಂತೆ ಕೋರಿದರು. ‘ಮೈ ಭೀ ಚೌಕಿದಾರ್‌’, ‘ಮತ್ತೊಮ್ಮೆ ಮೋದಿ’ ಎಂಬ ಬರಹವುಳ್ಳ ಟಿ– ಶರ್ಟ್‌ಗಳನ್ನು ಧರಿಸಿದ್ದ ಯುವಕರು ಅವರೊಂದಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

9.15ಕ್ಕೆ ಆಜಾದ್‌ ನಗರದಲ್ಲಿ ಪ್ರಚಾರ ಕೈಗೊಂಡು ನಂತರ ಅಲ್ಲಿಯೇ ಇದ್ದ ಜೆ.ಪಿ.ನಗರದತ್ತ ಮುಖ ಮಾಡಿದರು. ಅಲ್ಲಿ ಉದ್ಯಮಿ ಭೂಪಾಳ ರಾಘವೇಂದ್ರ ಶೆಟ್ಟಿ ಅವರ ಮನೆಗೆ ಹೋಗಿ ಕೆಲಹೊತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು. ನೀರು ಕುಡಿದು ದಣಿವಾರಿಸಿಕೊಂಡರು. ಅದಾದ ಬಳಿಕ ಪ್ರಚಾರ ಮುಂದುವರೆಸಿದ ಅವರು, ಮಾರ್ಗ ಮಧ್ಯದಲ್ಲಿ ಇನ್ನೊಬ್ಬ ಮುಖಂಡ ರವಿ ಅವರ ಮನೆಗೆ ಭೇಟಿ ನೀಡಿ, ಚಹಾ ಕುಡಿದರು.

ಅಲ್ಲಿಂದ ಅರವಿಂದ ನಗರ, ಬಳ್ಳಾರಿ ವೃತ್ತದಲ್ಲಿ ಕಾಲ್ನಡಿಗೆಯಲ್ಲಿ ಓಡಾಡಿ ಮತಯಾಚಿಸಿದರು. ನಂತರ ನೇರವಾಗಿ ಸಿದ್ಧಲಿಂಗಪ್ಪ ಚೌಕಿ ಪ್ರವೇಶಿಸಿದ ಅವರು, ಬಿರುಸಿನಿಂದ ಓಡಾಡಿ ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಸಮಯ 11 ಗಂಟೆಯಾಗಿತ್ತು. ಅಲ್ಲಿ ಪಕ್ಷದ ಕಾರ್ಯಕರ್ತ ಕೆ.ಸಿ.ಎನ್‌. ನಾಗರಾಜ ಅವರ ಮನೆಗೆ ತೆರಳಿ, ಪಾನಕ ಸೇವಿಸಿದರು.

ಇದಾದ ಬಳಿಕ ಮಧ್ಯಾಹ್ನ 12 ಗಂಟೆಗೆ ಅಮರಾವತಿಗೆ ತೆರಳಿ, ಅಲ್ಲಿನ ಐ.ಎಸ್‌.ಆರ್‌. ಕಾರ್ಖಾನೆ ಪ್ರದೇಶದ ಸುತ್ತಮುತ್ತ ಓಡಾಡಿ ಮತ ಯಾಚಿಸಿದರು. ಅಲ್ಲಿ ಅವರಿಗೆ ಬಿಜೆಪಿ ಮುಖಂಡ ಶ್ರೀನಿವಾಸ್‌ ರೆಡ್ಡಿ, ಬಸವರಾಜ ನಾಲತ್ವಾಡ ಸಾಥ್‌ ನೀಡಿದರು. ನಂತರ ನ್ಯಾಯಾಲಯ ಸಂಕೀರ್ಣಕ್ಕೆ ಬಂದು, ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರೊಂದಿಗೆ ಚರ್ಚಿಸಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಬಳಿಕ ಮಧ್ಯಾಹ್ನ 1.30ಕ್ಕೆ ಸಾಯಿಬಾಬಾ ವೃತ್ತದ ಬಳಿಯಿರುವ ಶಾಂತಿಸಾಗರ ಹೋಟೆಲ್‌ಗೆ ತೆರಳಿ ಮಧ್ಯಾಹ್ನದ ಊಟ ಮಾಡಿದರು. ಹಣ್ಣಿನ ಜ್ಯೂಸ್‌, ರೊಟ್ಟಿ, ಅನ್ನ ಊಟ ಮಾಡಿದರು. ವಿವಿಧ ಕಡೆಗಳಿಂದ ಬಂದಿದ್ದ ಮುಖಂಡರು, ಕಾರ್ಯಕರ್ತರೊಂದಿಗೆ ಅಲ್ಲಿಯೇ ಮಾತನಾಡಿದರು. ಒಂದು ಗಂಟೆ ಅಲ್ಲಿಯೇ ಕಳೆದರು. ನಂತರ ನೇರವಾಗಿ ಚಿತ್ತವಾಡ್ಗಿಗೆ ಪಯಣ ಬೆಳೆಸಿದರು. ಅಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಬಿಜೆಪಿ ಮುಖಂಡರು ಗುರುತಿಸಿದ್ದ ಕೆಲವರ ಮನೆಗಳಿಗೆ ಹೋಗಿ, ಅವರೊಂದಿಗೆ ಕೆಲಹೊತ್ತು ಕುಳಿತು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಕೋರಿದರು.

ಬಿಳಿ ಪೈಜಾಮ, ಕೇಸರಿ ವರ್ಣದ ಜುಬ್ಬಾ ಧರಿಸಿದ್ದ ದೇವೇಂದ್ರಪ್ಪನವರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಪ್ರಚಾರವನ್ನು ಹುಮ್ಮಸ್ಸಿನಿಂದ ಕೈಗೊಂಡರು. ಬೆಳಿಗ್ಗೆ ಆರಂಭಿಸಿದ ಪ್ರಚಾರ ಕಾರ್ಯಕ್ರಮ ಸಂಜೆ 4ರ ನಂತರವೂ ಮುಂದುವರಿದಿತ್ತು. ಆದರೆ, ಅವರ ಮುಖದಲ್ಲಿ ದಣಿವು ಕಂಡು ಬರಲಿಲ್ಲ. ಆದರೆ, ಅವರ ಜತೆಗಿದ್ದವರು ದಣಿದಂತೆ ಕಂಡು ಬಂತು.

‘ಜಿಲ್ಲೆಯ ಎಲ್ಲ ಮತದಾರರನ್ನು ತಲುಪಿ ಮತ ಕೇಳಿದ್ದೇನೆ. ಎಲ್ಲೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯ ಜನ ನನ್ನನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುತ್ತಾರೆ ಎಂಬ ಭರವಸೆ ಇದೆ. ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ರಾಜ್ಯದ ಕೆಲ ಪ್ರಮುಖ ಮುಖಂಡರು ಜಿಲ್ಲೆಗೆ ಭೇಟಿ ನೀಡಿ ಸಮಾವೇಶಗಳಲ್ಲಿ ಪಾಲ್ಗೊಳ್ಳುವರು. ಅದರ ಬಳಿಕ ಸಂಪೂರ್ಣವಾಗಿ ಬಿಜೆಪಿ ಪರವಾದ ಅಲೆ ಸುನಾಮಿಯಾಗಿ ಬದಲಾಗಲಿದೆ’ ಎಂದು ದೇವೇಂದ್ರಪ್ಪನವರು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !