ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ಕಾಂಗ್ರೆಸ್‌ ನಗರಸಭೆ ಸದಸ್ಯೆಗೆ ಅನರ್ಹತೆಯ ತೂಗುಗತ್ತಿ

Last Updated 15 ಮಾರ್ಚ್ 2022, 8:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ 7ನೇ ವಾರ್ಡಿನ ಕಾಂಗ್ರೆಸ್‌ ನಗರಸಭೆ ಸದಸ್ಯೆ ವಿ. ಕನಕಮ್ಮ ಅವರ ಮೇಲೆ ಸದಸ್ಯತ್ವ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ.

ಈ ವರ್ಷದ ಜನವರಿ 21ರಂದು ನಡೆದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಕನಕಮ್ಮ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿ ನಿಲ್ಲಿಸಿತ್ತು. ಈ ಸಂಬಂಧ ಪಕ್ಷವು ಕನಕಮ್ಮ ಸೇರಿದಂತೆ ತನ್ನ ಪಕ್ಷದ ಎಲ್ಲ 12 ಜನ ಸದಸ್ಯರಿಗೆ ವಿಪ್‌ ಹೊರಡಿಸಿತ್ತು. ಆದರೆ, ಕನಕಮ್ಮ ಅವರು ಚುನಾವಣೆಗೆ ಗೈರಾಗಿದ್ದರು. ನಾಮಪತ್ರ ಸಲ್ಲಿಕೆ ಅವಧಿ ಪೂರ್ಣಗೊಂಡ ನಂತರ ಬಂದಿದ್ದರು. ಇದರಿಂದಾಗಿ ಬಿಜೆಪಿಯ ಸುಂಕಮ್ಮ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

‘ವಿಪರೀತ ಜ್ವರ ಇದ್ದದ್ದರಿಂದ ನಾಮಪತ್ರ ಸಲ್ಲಿಕೆಗೆ ಬರಲು ಸಾಧ್ಯವಾಗಿರಲಿಲ್ಲ’ ಎಂದು ಕನಕಮ್ಮ ತಿಳಿಸಿದ್ದರು. ಆದರೆ, ಕಾಂಗ್ರೆಸ್‌ ಪಕ್ಷ ಅವರ ವಾದವನ್ನು ತಳ್ಳಿ ಹಾಕಿತ್ತು. ಬಳಿಕ ಪಕ್ಷದ ಕಾರ್ಯಕರ್ತರು ಅವರ ಮನೆ ಮುಂದೆ ಪ್ರತಿಭಟನೆ ನಡೆಸಿ, ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಸಂಬಂಧ ಕಾಂಗ್ರೆಸ್‌ ಪಕ್ಷದ ವೀಕ್ಷಕ ಆರ್‌. ಮಂಜುನಾಥ ಅವರು ಕನಕಮ್ಮ ಅವರಿಗೆ ಕಾರಣ ಕೇಳಿ ನೋಟಿಸ್‌ ಕೂಡ ನೀಡಿದ್ದರು. ಈಗ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹಿಸಿ ಪಕ್ಷವು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಪತ್ರ ಬರೆದಿದೆ.

‘ಕನಕಮ್ಮ ಅವರು ಹಣದಾಸೆಗೆ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಅವರು ಗೆದ್ದು ಬಂದ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ವಿಪ್‌ ಉಲ್ಲಂಘಿದ್ದು, ಅವರ ಸದಸ್ಯತ್ವ ಅನರ್ಹಗೊಳಿಸಬೇಕು’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿನಾಯಕ ಶೆಟ್ಟರ್‌ ಆಗ್ರಹಿಸಿದ್ದಾರೆ. ಕನಕಮ್ಮ ಅವರು ಕಾರಣ ಏನೇ ನೀಡಿದ್ದರೂ ಅವರು ವಿಪ್‌ ಉಲ್ಲಂಘಿಸಿರುವುದರಿಂದ ಅವರಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.

ಕೆಪಿಸಿಸಿ ಗಂಭೀರ

ಕನಕಮ್ಮ ಅವರ ವಿಷಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಬಹಳ ಗಂಭೀರವಾಗಿದೆ ಎಂದು ಗೊತ್ತಾಗಿದೆ. ಕನಕಮ್ಮ ಅವರನ್ನು ಸುಮ್ಮನೆ ಬಿಟ್ಟರೆ ಬೇರೆಯವರು ಇದೇ ರೀತಿ ನಡೆದುಕೊಂಡು ಪಕ್ಷಕ್ಕೆ ಮುಳುವಾಗಬಹುದು. ಕಠಿಣ ಕ್ರಮ ಜರುಗಿಸಿದರೆ ಭವಿಷ್ಯದಲ್ಲಿ ಬೇರೆ ಯಾರೂ ಇಂತಹ ಕೆಲಸಕ್ಕೆ ಕೈಹಾಕುವುದಿಲ್ಲ. ಕಾನೂನು ಪ್ರಕಾರ, ಅವರ ಅನರ್ಹತೆ ರದ್ದುಗೊಳಿಸುವ ಸಂಬಂಧ ಎಲ್ಲ ಪ್ರಕ್ರಿಯೆಯನ್ನು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಮಾಡಬೇಕೆಂದು ಸೂಚನೆ ಬಂದಿದೆ ಎಂದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಪೌರಾಯುಕ್ತರಿಗೆ ಪತ್ರ ಬರೆಯಲಾಗಿದೆ.

ಈ ಸಂಬಂಧ ಕನಕಮ್ಮ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT