ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈವಿಧ್ಯತೆಯೇ ಭಾರತದ ಸೌಂದರ್ಯ’

Last Updated 26 ಜುಲೈ 2019, 13:26 IST
ಅಕ್ಷರ ಗಾತ್ರ

ಹೊಸಪೇಟೆ: ‘ಭಾರತದ ವೈವಿಧ್ಯತೆಯೇ ಅದರ ಸೌಂದರ್ಯ. ಅದನ್ನು ಉಳಿಸಿಕೊಂಡೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಬೇಕಿದೆ’ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್‌. ಸಿದ್ದೇಗೌಡ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠ ಹಾಗೂ ಕಲಬುರ್ಗಿಯ ಪಾಲಿ ಇನ್‌ಸ್ಟಿಟ್ಯೂಟ್‌ ಸಹಭಾಗಿತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ‘ಬುದ್ಧ ಮತ್ತು ಆತನ ಧಮ್ಮ‘ ಕೃತಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಭಾಷೆ ಮತ್ತು ಬದುಕು, ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮನ್ನು ಯಾವ ರೀತಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುತ್ತಿದೆಯೋ ಅದೇ ರೀತಿ ಕಲೆ, ಸಂಸ್ಕೃತಿ, ಪರಂಪರೆಗಳು ನಮ್ಮನ್ನು ತೆಗೆದುಕೊಂಡು ಹೋಗಬೇಕು’ ಎಂದು ಹೇಳಿದರು.

‘ಭಾಷೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ. ಅಗೋಚರ ಶಕ್ತಿಗೆ ಸರಿಯಾದ ಮಾರ್ಗವೇ ಭಾಷೆ. ಭಾಷೆಯನ್ನು ಏಕಮುಖ ದೃಷ್ಟಿಯಿಂದ ನೋಡದೇ ದೇಶದ ಸಂಸ್ಕೃತಿ, ಕಲೆ, ಶಿಕ್ಷಣ, ಧರ್ಮ, ರಾಜಕೀಯ ನೆಲೆಗಟ್ಟಿನಲ್ಲಿ ನೋಡಬೇಕು. ಈ ನಿಟ್ಟಿನಲ್ಲಿ ಪಾಲಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ‘ಧಮ್ಮ ಮತ್ತು ಧರ್ಮ ಬೇರೆ. ಬುದ್ಧ ತೋರಿಸಿದ್ದು ಧಮ್ಮವಾದರೆ, ಬೇರೆಯವರು ತೋರಿಸಿದ್ದು ಧರ್ಮ. ಧಮ್ಮ ಕೃತಿಯು ಸಮಕಾಲೀನ ಪರಿಸ್ಥಿತಿ ಜೊತೆಗೆ ಚರಿತ್ರೆ ಅರ್ಥೈಸಿಕೊಳ್ಳಲು ಕೆಲವು ಮಾರ್ಗಗಳನ್ನು ತೋರಿಸಿಕೊಟ್ಟಿದೆ’ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ.ರಮೇಶ ಮಾತನಾಡಿ, ‘ಶಾಂತಿ, ಸಹೋದರತ್ವ ಮತ್ತು ಸಮ ಸಮಾಜ ನಿರ್ಮಾಣದ ಮೂಲಕ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ತೋರಿಸಿದ ಮಹಾನ್‌ ದಾರ್ಶನಿಕ ಗೌತಮ ಬುದ್ಧ’ ಎಂದು ಹೇಳಿದರು.
ಪ್ರಸಾರಾಂಗ ಸಲಹಾ ಸಮಿತಿ ಸದಸ್ಯ ಪ್ರೊ. ಸಿದ್ದಣ್ಣ ಬಿ. ಉತ್ನಾಳ್‌, ಅಬಕಾರಿ ಇಲಾಖೆಯ ನಿವೃತ್ತ ಸೂಪರಿಟೆಂಡೆಂಟ್‌ ಕೆ.ವಿ. ಲಕ್ಷ್ಮಿನಾರಾಯಣಪ್ಪ, ಕುಲಸಚಿವ ಎ. ಸುಬ್ಬಣ್ಣ ರೈ,ಶಾಸನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಅಮರೇಶ್ ಯತಗಲ್, ದಲಿತ ಅಧ್ಯಯನ ಪೀಠದ ಸಂಚಾಲಕ ಪ್ರೊ.ವೆಂಕಟಗಿರಿ ದಳವಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT