ಮಂಗಳವಾರ, ಸೆಪ್ಟೆಂಬರ್ 17, 2019
25 °C

‘ಶಿಕ್ಷಕರ ತರಬೇತಿ ಸಂಸ್ಥೆ ಮುಚ್ಚಿದರೆ ಹೋರಾಟ’

Published:
Updated:

ಹೊಸಪೇಟೆ: ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು (ಟಿ.ಟಿ.ಇ.) ಮುಚ್ಚಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಖಂಡನಾರ್ಹ ಎಂದು ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎ.ಐ.ಡಿ.ವೈ.ಒ.) ತಿಳಿಸಿದೆ.

‘ಇಲಾಖೆಯ ನಿರ್ಧಾರವು ಪ್ರಜಾತಂತ್ರಿಕ, ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿದೆ’ ಎಂದು ಸಂಘಟನೆಯ ಕಾರ್ಯದರ್ಶಿ ಎಚ್‌. ಎರ್ರಿಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಧಾರವಾಡ, ಕಲಬುರ್ಗಿ, ಮೈಸೂರು, ರಾಯಚೂರು ಜಿಲ್ಲೆಯ ಸಿಂಧನೂರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಲ್ಲಿರುವ ಸಂಸ್ಥೆಗಳನ್ನು ಮುಚ್ಚಲು ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ವಿವಿಧ ಜಿಲ್ಲೆಗಳಲ್ಲಿ ಸೇವಾ ಪೂರ್ವ ತರಬೇತಿ ನೀಡುತ್ತಿದ್ದ ಸಂಸ್ಥೆಗಳನ್ನೂ ತಾತ್ಕಾಲಿಕವಾಗಿ ಮುಚ್ಚಲು ಹೊರಟಿರುವುದು ಸರಿಯಲ್ಲ. ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಡುವುದರ ಬದಲು ಅದನ್ನು ಬಲಹೀನ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

‘ರಾಜ್ಯದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಡಿ.ಎಡ್. ಪೂರ್ಣಗೊಳಿಸಿದ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ನೇಮಕಾತಿಗಳೇ ಇಲ್ಲದ ಕಾರಣ ಈ ತರಬೇತಿ ಸಂಸ್ಥೆಗಳಿಗೆ ಪ್ರಶಿಕ್ಷಣಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಸಂಸ್ಥೆಗಳನ್ನು ಮುಚ್ಚಲು ಹೊರಟಿರುವುದು ವಿಪರ್ಯಾಸ’ ಎಂದಿದ್ದಾರೆ.

‘ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳ ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

Post Comments (+)