ಮಂಗಳವಾರ, ಮಾರ್ಚ್ 9, 2021
18 °C
ಜಿಂದಾಲ್‌ಗೆ ಭೂಮಿ ಮಾರಾಟ ಸಲ್ಲದು

ಗುತ್ತಿಗೆ ಮುಂದುವರಿಸಿ ಆದೇಶ ಹೊರಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋರಣಗಲ್ಲು: ‘ಜಿಂದಾಲ್‌ಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದರೆ ಸಾಲದು. ಕೂಡಲೇ ಆ ಸಂಬಂಧ ಆದೇಶ ಹೊರಡಿಸಬೇಕು’  ಎಂದು ಜನಸಂಗ್ರಾಮ ಪರಿಷತ್‌ ಮುಖಂಡ ಎಸ್.ಆರ್.ಹಿರೇಮಠ ಆಗ್ರಹಿಸಿದರು.

ಜಿಂದಾಲ್‌ಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಬಾರದು ಎಂದು ಆಗ್ರಹಿಸಿ ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದಿಂದ ಹಮ್ಮಿಕೊಂಡಿದ್ದ ಪಾದಾಯಾತ್ರೆ  ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಮುಕ್ತಾಯಗೊಂಡ ನಂತರ ಮಾತನಾಡಿದ ಅವರು, ‘ಭೂಮಿಯನ್ನು ಮಾರಾಟ ಮಾಡದಿರುವ ನಿರ್ಧಾರ ಕೈಗೊಂಡಿರುವುದು ಜನಚಳವಳಿಗಳ ಶಕ್ತಿಗೆ ಸಾಕ್ಷಿಯಾಗಿದೆ. ಮಾರಾಟ ಮಾಡುವುದಿಲ್ಲ ಎಂದು ಬಾಯಿಮಾತಿನಲ್ಲಿ ಹೇಳಿದ್ದು ಸಂತೋಷ ತಂದಿದೆ. ಆದರೆ ಆದೇಶವಾಗಿ ಹೊರಬೀಳಬೇಕು’ ಎಂದು ಒತ್ತಾಯಿಸಿದರು. 

‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ‌ ಚಳವಳಿಯ ಐತಿಹಾಸಿಕ ದಿನ ಆಗಸ್ಟ್‌ 9ರಂದೇ ಪಾದಯಾತ್ರೆಯು ನಗರದಲ್ಲಿ ಮುಕ್ತಾಯವಾಗಿದೆ. ಸಾವಿರಾರು ಎಕರೆ ಭೂಮಿಯನ್ನು ಪಡೆದ ಜಿಂದಾಲ್‌ ರೈತರಿಗೆ ಅವರ ಮಕ್ಕಳಿಗೆ ಸರಿಯಾದ ಉದ್ಯೋಗ ನೀಡಬೇಕು. ಇದುವರೆಗೆ ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ ಎಂಬುದರ ಕುರಿತು ತನಿಖೆಯಾಗಬೇಕು’ ಎಂದು ಆಗ್ರಹಿಸಿದರು. 

‘ಜೀವ ಸಂಕುಲಕ್ಕೆ ಮಾರಕವಾದ ಎಪ್ಸಿಲಾನ್ ಡಾಂಬರು ಮತ್ತು‌ ಪೇಂಟ್ ಉತ್ಪಾದನಾ ಘಟಕಗಳನ್ನು ಮುಚ್ಚಬೇಕು. ಕುಮಾರಸ್ವಾಮಿ, ಪಾರ್ವತಿ‌ ದೇಗುಲದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು. ತುಂಗಭದ್ರಾ ಮತ್ತು ಅಲಮಟ್ಟಿ ಜಲಾಶಯದ ನೀರನ್ನು ಜಿಂದಾಲ್ ಅಕ್ರಮವಾಗಿ ಬಳಸದಂತೆ ತಡೆಗಟ್ಟಬೇಕು ಎಂಬ ಬೇಡಿಕೆಗಳಿಗೂ ಸರ್ಕಾರ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಜನಪರವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದರು.

ರೈತಸಂಘ, ಮಹಾತ್ಮಗಾಂಧಿ ವಿವಿಧೋದ್ದೇಶ ಸಹಕಾರ ಸಂಘ, ರೈತ ಕೃಷಿ ಕಾರ್ಮಿಕರ ಸಂಘ, ಚಾಗನೂರು–ಸಿರಿವಾರ ನೀರಾವರಿ ಭೂ ಹೋರಾಟ ಸಮಿತಿ ಹಾಗೂ ಇಸಿಪಿಎಲ್ ಕಾರ್ಖಾನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.

ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಶ್ರೀಶೈಲ ಆಲ್ದಳ್ಳಿ, ಸೋಮಶೇಖರ ಗೌಡ ಮತ್ತು ಮಾಧವರೆಡ್ಡಿ, ನಾಗರತ್ನಾ, ಬಿ.ನಾರಾಯಣಸ್ವಾಮಿ, ಎ.ದೇವದಾಸ್‌, ಗೋವಿಂದ, ಮಂಜುಳಾ, ಆರ್‌.ಸೋಮಶೇಖರ್‌. ಈ.ಹನುಮಂತಪ್ಪ, ಶಿವಾನಂದಯ್ಯ, ಮಹಾರುದ್ರಗೌಡ, ಟಿ.ಎ.ಶಿವಕುಮಾರ್‌, ರುದ್ರಗೌಡ ಮತ್ತು ಚಂದ್ರಪ್ಪ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು