ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಟ್ಟಿ ಪ್ರದೇಶ, ಗದ್ದೆಯಲ್ಲಿ ಪ್ರತ್ಯಕ್ಷ, ಡ್ರೋಣ್‌ ಕ್ಯಾಮೆರಾಗೆ ಕಾಣದ ಚಿರತೆ!

Last Updated 20 ಡಿಸೆಂಬರ್ 2018, 13:35 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಮೂರು ವರ್ಷದ ಬಾಲಕನನ್ನು ಬಲಿ ಪಡೆದ ಚಿರತೆ 10 ದಿನಗಳಿಂದ ಬೋನಿಗೂ ಬೀಳದೆ ಕಣ್ಣಾ ಮುಚ್ಚಾಲೆಯಾಡುತ್ತಿದೆ. ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸೋಮಲಾಪುರ–ಹಳೇ ದರೋಜಿ ಎರದಮಟ್ಟಿ ಪ್ರದೇಶದಲ್ಲಿ ಡ್ರೋಣ್‌ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆಸಿದರು. ಆದರೆ ಕ್ಯಾಮೆರಾಕ್ಕೆ ಸೆರೆಯಾಗದ ಚಿರತೆ ಜನರ ಕಣ್ಣಿಗೆ ಕಾಣಿಸಿಕೊಂಡಿದೆ!

ಗುರುವಾರ ಮಧ್ಯಾಹ್ನ 12.30ಕ್ಕೆ ಹಳೇದರೋಜಿ ಮಾದಾಪುರ ರಸ್ತೆಯ ದಾಳಿಂಬೆ ತೋಟದ ಎರದಮಟ್ಟಿಯಲ್ಲಿ ಚಿರತೆ ಕಾಣಿಸಿತು. ‘ಸುಮಾರು 20 ನಿಮಿಷ ಬಂಡೆ ಮೇಲೆ ಕುಳಿತಿದ್ದ ಚಿರತೆ ನಂತರ ಮಾದಾಪುರ ರಸ್ತೆ ಕಡೆ ತೆರಳಿತು’ ಎಂದು ಪ್ರತ್ಯಕ್ಷದರ್ಶಿ ಯಲ್ಲಾಪುರ ರಂಜಾನ್‌ಸಾಬ್‌ ತಿಳಿಸಿದರು.

ನಂತರ ಮಧ್ಯಾಹ್ನ 1.30ಕ್ಕೆ ಮಟ್ಟಿ ಪೂರ್ವ ದಿಕ್ಕಿನ ಗದ್ದೆಯಲ್ಲಿದ್ದ ಮಾವಿನಗಿಡದಲ್ಲಿ ಚಿರತೆ ಕಾಣಿಸಿತು. ಅದನ್ನು ಕಂಡ ಟ್ರಾಕ್ಟರ್‌ಬಾಷಾಸಾಬ್‌ ಹಳೇದರೋಜಿ ಗ್ರಾಮಸ್ಥರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅಧಿಕಾರಿಗಳು ಬರುವುದರೊಳಗೆ ಚಿರತೆ ನಾಪತ್ತೆಯಾಗಿತ್ತು.

‘ನಾಲ್ಕೈದು ದಿನಗಳಿಂದ ಹಗಲು ವೇಳೆ ಚಿರತೆ ಕಾಣಿಸಿಕೊಳ್ಳುತ್ತಿದ್ದರಿಂದ ಗುರುವಾರ ಸುಮಾರು 250ಎಕರೆ ಪ್ರದೇಶ ಹೊಂದಿರುವ ಎರದಮಟ್ಟಿಯಲ್ಲಿ ಡ್ರೋಣ್‌ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಆದರೂ ಚಿರತೆ ಕಂಡು ಬರಲಲ್ಲಿ. ಸೋಮಲಾಪುರ, ದೇವಲಾಪುರ, ಹಳೇದರೋಜಿ ಭಾಗದಲ್ಲಿ ಚಿರತೆ ಚಲನವಲನ ಗಮನಿಸಿ ಏಳು ಬೋನುಗಳನ್ನು ಇಡಲಾಗಿದೆ. ಮೂರು ಬೋನುಗಳ ಸ್ಥಳ ಬದಲಾವಣೆ ಮಾಡಲಾಗಿದೆ. ಜತೆಗೆ ಮೂರು ಡಿಜಿಟಲ್‌ ಟ್ರ್ಯಾಪ್‌ ಕ್ಯಾಮೆರಾ ಆಯ್ದ ಕಡೆ ನಿತ್ಯ ಅಳವಡಿಸಲಾಗುತ್ತಿದೆ. ಅಗತ್ಯಬಿದ್ದರೆ ಇನ್ನಷ್ಟು ಬೋನುಗಳನ್ನು ತರಿಸಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ಟಿ. ಭಾಸ್ಕರ ವಿವರಿಸಿದರು.

‘ಸೋಮಲಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಎರದಮಟ್ಟಿ ಪ್ರದೇಶದಲ್ಲಿ ಅರಣ್ಯ ಇಲಾಖೆ 35ಸಿಬ್ಬಂದಿ 75ಗ್ರಾಮಸ್ಥರು ಸೇರಿ ಮೂರು ತಂಡದಲ್ಲಿ ಬುಧವಾರ ಸಂಜೆ ಕೋಬಿಂಗ್‌ ಆಪರೇಷನ್‌ ಕೈಗೊಂಡಿದ್ದೆವು. ಈ ವೇಳೆ ಹಳೇದರೋಜಿ ಮಟ್ಟಿ ಸುಂಕ್ಲಮ್ಮ ದೇವಸ್ಥಾನ ಬಳಿ ಚಿರತೆ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಮಟ್ಟಿ ಪ್ರದೇಶದ ಉತ್ತರ ದಿಕ್ಕಿನಲ್ಲಿ ಓಡಿ ಹೋಯಿತು. ಎರಡು ದಿನದಲ್ಲಿ ಮತ್ತೆ ಕೋಬಿಂಗ್‌ ಕಾರ್ಯಾಚರಣೆ ನಡೆಸಿ ಚಿರತೆಯನ್ನು ದರೋಜಿ ಕರಡಿಧಾಮದ ಕಡೆ ಓಡಿಸಲು ಪ್ರಯತ್ನಿಸಲಾಗುವುದು’ ಎಂದರು.

‘ಕೆಲ ದಿನಗಳ ಹಿಂದೆ ಸಿಹಿ ಅಂಚಿನ ಮೋರಿಯ ಬಳಿಯ ರೈತ ಪಿ.ಎಸ್. ಲಿಂಗಪ್ಪ ಅವರ ದಾಳಿಂಬೆ ತೋಟದ ಹತ್ತಿರ ಚಿರತೆ ಮರಿ ನೋಡಿದ್ದೆ. ಈ ಕಾರಣದಿಂದ ಚಿರತೆ ಇಲ್ಲಿಯೇ ಸಂಚರಿಸುತ್ತಿದೆ’ ಎಂದು ವಿ. ಮಲ್ಲಿಕಾರ್ಜುನ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿಗೆ ಡ್ರೋಣ್ ಕ್ಯಾಮರಾ ಜತೆಗೆ ರಾತ್ರಿ ವೇಳೆ ಅಗತ್ಯವಿರುವ ದೂರ ದೃಷ್ಟಿಯ ವಿಜನ್ ಕ್ಯಾಮೆರಾ ಸೇರಿದಂತೆ ಅಗತ್ಯ ಸಲಕರಣೆಗಳನ್ನು ನೀಡಿ ಚಿರತೆ ಸೆರೆ ಹಿಡಿದು ಜನರ ಭಯ ದೂರ ಮಾಡಬೇಕು’ ಎಂದು ಸೋಮಲಾಪುರ, ಹಳೇ ದರೋಜಿ, ಮೆಟ್ರಿ ಗ್ರಾಮಸ್ಥರು ಆಗ್ರಹಿಸಿದರು.

ಡ್ರೋಣ್ ಆಪರೇಟರ್ ರಕ್ಷಿತ್‌ರಾಜ್, ಉಪ ವಲಯ ಅರಣ್ಯಾಧಿಕಾರಿ ಎಸ್. ದೇವರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT