ಬೆಂಬಿಡದೆ ಕಾಡುತ್ತಿರುವ ಬರಕ್ಕೆ ಜನ ಕಂಗಾಲು

7
ನೀರಿಲ್ಲದೆ ಬತ್ತಿ ಹೋಗಿರುವ ಬಹುತೇಕ ಜಲಮೂಲಗಳು; ಬಂಜರು ಭೂಮಿಯಂತೆ ಕಾಣುತ್ತಿರುವ ಜಮೀನುಗಳು

ಬೆಂಬಿಡದೆ ಕಾಡುತ್ತಿರುವ ಬರಕ್ಕೆ ಜನ ಕಂಗಾಲು

Published:
Updated:
Prajavani

ಹೊಸಪೇಟೆ: ಸತತ ಮೂರು ವರ್ಷಗಳಿಂದ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಜನರಿಗೆ, ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಿಂದಿನ ಸತತ ನಾಲ್ಕು ವರ್ಷಗಳಿಂದ ರೈತರು, ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಸಲವಾದರೂ ಉತ್ತಮ ಮಳೆಯಾಗಿ ಸಮಸ್ಯೆ ನೀಗಬಹುದು ಎಂದು ಆಸೆಗಣ್ಣಿನಿಂದ ನೋಡುತ್ತಿದ್ದರು. ಆದರೆ, ಮುನಿಸಿಕೊಂಡಿರುವ ಮಳೆರಾಯ ಮಾತ್ರ ರೈತರ ಮೇಲೆ ಕೃಪೆ ತೋರಿಸಿಲ್ಲ.

2018ರ ಜೂನ್‌ನಲ್ಲಿ ಜಿಲ್ಲೆಗೆ ಮುಂಗಾರು ಮಳೆ ಸಕಾಲಕ್ಕೆ ಕಾಲಿಟ್ಟಿತ್ತು. ಆದರೆ, ನಂತರದ ದಿನಗಳಲ್ಲಿ ಅದು ಸಂಪೂರ್ಣ ಕೈಕೊಟ್ಟಿದ್ದರಿಂದ ಬೆಳೆ ಮೇಲೇಳಲಿಲ್ಲ. ರಸಗೊಬ್ಬರ, ಬಿತ್ತನೆ ಬೀಜಕ್ಕಾಗಿ ರೈತರು ಹಾಕಿದ ಬಂಡವಾಳ ಕೂಡ ಕೈ ಸೇರಲಿಲ್ಲ. ಇದರಿಂದಾಗಿ ಅವರ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ. ಬಹುತೇಕರಿಗೆ ಕೃಷಿ ಬಿಟ್ಟರೆ ಅನ್ಯ ಕಾಯಕ ಗೊತ್ತಿಲ್ಲ. ಕೆಲವರು ಸಾಲದ ಮೇಲೆ ಸಾಲ ಪಡೆದುಕೊಂಡು ಹೇಗೋ ಬದುಕು ಸಾಗಿಸುತ್ತಿದ್ದರೆ, ಮತ್ತೆ ಕೆಲವರು ಅನಿವಾರ್ಯವಾಗಿ ಮಹಾನಗರಗಳಿಗೆ ವಲಸೆ ಹೋಗಿದ್ದಾರೆ.

ಈ ಹಿಂದಿನ ಮೂರು ವರ್ಷಗಳಲ್ಲಿ ಜಿಲ್ಲೆಯ ಕೆರೆ, ಕಟ್ಟೆಗಳಲ್ಲಿ ಅಲ್ಪ ಸ್ವಲ್ಪ ನೀರು ಕಾಣಿಸಿಕೊಂಡಿರುತ್ತಿತ್ತು. ಈ ಸಲ ಚಿತ್ರಣ ಸಂಪೂರ್ಣ ಬದಲಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ನೆಲ ಒದ್ದೆಯಾಗುವಷ್ಟು ಮಳೆಯಾಗದ ಕಾರಣ ಜಲಮೂಲಗಳು ನೀರಿಲ್ಲದೆ ಬಿಕೋ ಎನ್ನುತ್ತಿವೆ. ಯಾವುದು ಕೆರೆ, ಯಾವುದು ಬರಡು ಭೂಮಿ ಎಂಬ ವ್ಯತ್ಯಾಸ ಕೂಡ ಗುರುತಿಸಲಾಗದಂತಹ ಸನ್ನಿವೇಶ ನಿರ್ಮಾಣವಾಗಿದೆ.

ಹೊಸಪೇಟೆ ತಾಲ್ಲೂಕಿನ ಬೈಲುವದ್ದಿಗೇರಿ, ಇಂಗಳಗಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಿಗಳನ ಕೆರೆ, ಭೀಮನ ಕೆರೆ, ಬೆಣಕಲ್ಲು ಕೆರೆ, ಹನಸಿ, ದಶಮಾಪುರ, ಬ್ಯಾಲಹಾಳು, ಹೊಸಕೆರೆ, ಹೂವಿನಹಡಗಲಿ ತಾಲ್ಲೂಕಿನ ಹಿರೇಮಲ್ಲನಕೆರೆ, ದಾಸನಹಳ್ಳಿ, ಸಂಡೂರು ತಾಲ್ಲೂಕಿನ ಶಿವಪುರ ಕೆರೆ, ವಿಠಲಾಪುರ ಕೆರೆ, ಕೊರಚರ ಹಟ್ಟಿ ಕೆರೆ, ರಾಜಪುರ, ಲಕ್ಕಲಹಳ್ಳಿ ಕೆರೆ, ಕೂಡ್ಲಿಗಿ ತಾಲ್ಲೂಕಿನ ಹಿರೆಕೆರೆ, ಚೌಡಾಪುರ ಕೆರೆ, ಹುಲಿ ಕೆರೆ, ಕ್ಯಾಸನಕೇರಿ, ಕೊಟ್ಟೂರು ತಾಲ್ಲೂಕಿನ ಮಂದಾಪುರ ಕೆರೆ, ನಿಂಬಳಗೇರೆ ಕೆರೆ, ಲೊಟ್ಟನಕೆರೆ, ಉಜ್ಜಯಿನಿ ಕೆರೆ, ಕೊಟ್ಟೂರು ಕೆರೆ ನೀರಿಲ್ಲದೆ ಸಂಪೂರ್ಣ ಬತ್ತಿ ಹೋಗಿವೆ. 

ಕೆಲ ಕೆರೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರಿದ್ದು, ಅವುಗಳು ಕೂಡ ಬತ್ತುವ ಹಂತದಲ್ಲಿವೆ. ತಾಲ್ಲೂಕಿನ ಕಮಲಾಪುರ ಕೆರೆ, ಅಳ್ಳಿಕೆರೆ, ತುಂಗಭದ್ರಾ ಜಲಾಶಯದ ಕಾಲುವೆ ನೀರಿನಿಂದ ಭರ್ತಿಯಾಗಿವೆ ಹೊರತು ಮಳೆ ನೀರಿನಿಂದ ಅಲ್ಲ. 

ಜಿಲ್ಲೆಯ ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿಯ ಬಹುತೇಕ ಭಾಗಗಳು ಬರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ. ಹೊಸಪೇಟೆ ತಾಲ್ಲೂಕಿನ ಕಾರಿಗನೂರಿನಿಂದ ಭುವನಹಳ್ಳಿ ವರೆಗಿನ ಜಮೀನುಗಳು ಬಯಲಿನ ಸ್ವರೂಪ ಪಡೆದರೆ, ಹೊಸೂರಿನಿಂದ ಕಂಪ್ಲಿ, ಕುರುಗೋಡು, ಬಳ್ಳಾರಿ ವರೆಗೆ ತುಂಗಭದ್ರಾ ಕಾಲುವೆ ನೀರು ಹರಿದು ಹೋಗುವುದರಿಂದ ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ತುಂಗಭದ್ರಾ ಹಿನ್ನೀರಿನ ವ್ಯಾಪ್ತಿಗೆ ಬರುವ ಹಗರಿಬೊಮ್ಮನಹಳ್ಳಿಯ ಒಂದು ಪ್ರದೇಶ ಹಸಿರಾಗಿದೆ, ಮತ್ತೊಂದು ಭಾಗ ಬರಡಾಗಿದೆ.

ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರು, ಮೇವಿನ ಕೊರತೆ ಎದುರಾದರೆ, ಕೊಟ್ಟೂರಿನಲ್ಲಿ ಸಂಪೂರ್ಣ ಬರದ ಛಾಯೆ ಇದೆ. ಬಳ್ಳಾರಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಸಿರುಗುಪ್ಪದ ಕಾಲುವೆ ಭಾಗದ ರೈತರು ಎರಡನೇ ಬೆಳೆ ಬೆಳೆದಿದ್ದಾರೆ. ಇನ್ನೊಂದು ಭಾಗದ ರೈತರು ಸಮಸ್ಯೆಗೆ ಸಿಲುಕಿದ್ದಾರೆ. 

ಗುಳೆ ತಡೆಯಲು ’ಖಾತ್ರಿ’ಯಲ್ಲಿ ಕೆಲಸ:

ಈ ಸಲ ಜಿಲ್ಲೆಯ ಎಲ್ಲ ಹನ್ನೊಂದು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ನಂತರ ಗುಳೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದ್ದರಿಂದ ಎಲ್ಲೆಡೆ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಕೈಗೆತ್ತಿಕೊಂಡು ಕೆಲಸ ನೀಡಲಾಗಿದೆ.

ಕೆರೆಗಳ ಹೂಳೆತ್ತುವುದು, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೆಲಸವಿಲ್ಲದ ಕೈಗಳಿಗೆ ಕೆಲಸ ನೀಡಲಾಗಿದೆ. ಹೀಗಿದ್ದರೂ ಕೆಲ ಗ್ರಾಮ, ತಾಂಡಾಗಳಿಂದ ಜನ ಬೇರೆಡೆ ವಲಸೆ ಹೋಗಿದ್ದಾರೆ. ವಲಸೆ ತಡೆಯಲು ನಿಗದಿತ ದಿನಗಳಿಂದ ಹೆಚ್ಚು ದಿನ ಕೆಲಸ ಕೊಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಪರಿಹಾರದ ನಿರೀಕ್ಷೆಯಲ್ಲಿ:

ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ರೈತರು ಕೈ ಸುಟ್ಟುಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರು, ಸಂಪುಟ ಉಪ ಸಮಿತಿ, ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಗೆ ಭೇಟಿ ನೀಡಿ ಬರ ಪರಿಶೀಲನೆ ನಡೆಸಿವೆ. ಆದರೆ, ಇದುವರೆಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ.

‘ರೈತರು ಸಂಕಷ್ಟದಲ್ಲಿದ್ದಾಗ ಅವರಿಗೆ ಪರಿಹಾರ ಕೊಡಬೇಕು. ಅದು ಬಿಟ್ಟು ಸಮೀಕ್ಷೆ ಹೆಸರಿನಲ್ಲಿ ಕಾಲಹರಣ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಷ್ಟು ತಡ ಮಾಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಜೆ. ಕಾರ್ತಿಕ್‌. 

‘ಜಿಲ್ಲೆಯ ಕೆಲವು ರೈತರಿಗೆ ಹಿಂದಿನ ಸಾಲಿನ ಪರಿಹಾರ ಕೂಡ ಸಿಕ್ಕಿಲ್ಲ. ಹೀಗಾಗಿ ರೈತರಿಗೆ ಸರ್ಕಾರದಿಂದ ಸಕಾಲಕ್ಕೆ ನೆರವು ಸಿಗುತ್ತದೆ ಎಂಬ ಭರವಸೆ ಉಳಿದಿಲ್ಲ’ ಎಂದು ಹೇಳಿದರು.

ನೀರಿನ ಸದ್ಬಳಕೆಗಿಲ್ಲ ಯೋಜನೆ:

ಬರದ ನಡುವೆಯೂ ಈ ಸಲ ತುಂಗಭದ್ರಾ ಜಲಾಶಯ ಮೈದುಂಬಿ ಹರಿದಿದೆ. 200 ಟಿ.ಎಂ.ಸಿ. ಅಡಿಗಿಂತ ಹೆಚ್ಚು ನೀರು ನದಿಯಲ್ಲಿ ಹರಿದು ಹೋಗಿದೆ. ’ಸಮುದ್ರ ಪಾಲಾಗುವ ನೀರು ವ್ಯರ್ಥ ಹರಿದು ಹೋಗದಂತೆ ಯೋಜನೆ ರೂಪಿಸಿ, ಜಿಲ್ಲೆಯ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು’ ಎಂದು ಹಿಂದಿನ ಹಾಗೂ ಹಾಲಿ ಸರ್ಕಾರದ ಜನಪ್ರತಿನಿಧಿಗಳು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕೆಲಸ ಆಗಿಲ್ಲ. 

‘ಜಲಾಶಯದಿಂದ ದೂರದಲ್ಲಿರುವ ಕೆರೆಗಳನ್ನು ತುಂಬಿಸುವುದು ದೂರದ ವಿಚಾರ. ಅಣೆಕಟ್ಟೆಯ ಆಸುಪಾಸಿನ ಕೆರೆಗಳಿಗೆ ನೀರು ಹರಿಸುವ ಕೆಲಸವಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣ ಎನ್ನುತ್ತಾರೆ ರೈತ ಮುಖಂಡ ಬಸವರಾಜ. 

‘ಪ್ರತಿ ಸಲ ಬರ ಎದುರಾದಾಗ ತಾತ್ಕಾಲಿಕವಾಗಿ ಕುಡಿಯುವ ನೀರು, ಮೇವಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಆದರೆ, ಶಾಶ್ವತವಾಗಿ ಸಮಸ್ಯೆ ಬಗೆಹರಿಸಲು ಯೋಜನೆ ರೂಪಿಸುವುದಿಲ್ಲ. ಜನಪ್ರತಿನಿಧಿಗಳಿಗೆ ದೂರದೃಷ್ಟಿ ಇಲ್ಲದೆ ಇರುವುದನ್ನು ಇದು ತೋರಿಸುತ್ತದೆ’ ಎಂದು ಹೇಳಿದರು.

**

ಮಳೆ ಕೊರತೆ– ಬೆಳೆ ನಷ್ಟದ ವಿವರ

* ಮುಂಗಾರಿನಲ್ಲಿ ಶೇ 39ರಷ್ಟು ಮಳೆ ಕೊರತೆಯಾದರೆ, ಹಿಂಗಾರಿನಲ್ಲಿ ಶೇ 52ರಷ್ಟು ಮಳೆ ಕೊರತೆ

* ಮುಂಗಾರು ಹಂಗಾಮಿನಲ್ಲಿ 4,45,230 ಹೆಕ್ಟೇರ್‌ ಪೈಕಿ 4,30,614 ಹೆಕ್ಟೇರ್‌ನಲ್ಲಿ ಬಿತ್ತನೆ. 2,74,070 ಹೆಕ್ಟೇರ್‌ ನಷ್ಟ. ನಷ್ಟದ ಅಂದಾಜು ₹181.09 ಕೋಟಿ

* ಹಿಂಗಾರು ಹಂಗಾಮಿನಲ್ಲಿ 1,73,583 ಹೆಕ್ಟೇರ್‌ ಪೈಕಿ 73,284.91 ಹೆಕ್ಟೇರ್‌ನಲ್ಲಿ ಬಿತ್ತನೆ. 56,763.9 ಹೆಕ್ಟೇರ್‌ ನಷ್ಟ. ನಷ್ಟದ ಮೊತ್ತ ₹37.55 ಕೋಟಿ

* ಮುಂಗಾರು ಹಂಗಾಮಿನಲ್ಲಿ 32,083 ಹೆಕ್ಟೇರ್‌ ಪೈಕಿ 51,891 ಹೆಕ್ಟೇರ್‌ ತೋಟಗಾರಿಕೆ ಉತ್ಪನ್ನಗಳ ಬೀಜ ಬಿತ್ತನೆ. 8,336.11 ಹೆಕ್ಟೇರ್‌ ನಷ್ಟ. ನಷ್ಟದ ಮೊತ್ತ ₹5.98 ಕೋಟಿ

* ಹಿಂಗಾರು ಹಂಗಾಮಿನಲ್ಲಿ 4,483 ಹೆಕ್ಟೇರ್‌ ಪೈಕಿ 2,649 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳ ಬೀಜ ಬಿತ್ತನೆ. 818.44 ಹೆಕ್ಟೇರ್‌ ಪ್ರದೇಶ ನಷ್ಟವಾಗಿದ್ದು, ₹1.16 ಕೋಟಿ ನಷ್ಟ

**

ಹಣದ ಕೊರತೆಯಿಲ್ಲ. ಬರವನ್ನು ಜಿಲ್ಲಾ ಆಡಳಿತ ಸಮರ್ಥವಾಗಿ ಎದುರಿಸಲಿದೆ. ಈಗಾಗಲೇ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ನೀರು, ಮೇವಿಗೆ ವ್ಯವಸ್ಥೆ ಮಾಡಲಾಗಿದೆ
–ರಾಮಪ್ರಸಾದ್‌ ಮನೋಹರ್‌, ಜಿಲ್ಲಾಧಿಕಾರಿ

**

ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಬರ ಇದೆ. ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಸ್ಥಳೀಯ ರೈತರಿಗಾಗಿ ವಿಶೇಷ ಪ್ರೋತ್ಸಾಹದಾಯಕ ಯೋಜನೆ ಜಾರಿಗೆ ತರಬೇಕು.
–ಜೆ. ಕಾರ್ತಿಕ್‌, ಜಿಲ್ಲಾ ಅಧ್ಯಕ್ಷ, ರೈತ ಸಂಘ

**

ಸರ್ಕಾರದವರು ಸಾಲ ಮನ್ನಾ ಮಾಡೋದಕ್ಕಿಂತ ನೀರಾವರಿ ಯೋಜನೆ ಜಾರಿಗೆ ತರಬೇಕು. ಕೆರೆಗಳಿಗೆ ನೀರು ತುಂಬಿಸಿದ್ರ ಬತ್ತಿದ ಕೊಳವೆ ಬಾವಿಗೂ ಜೀವ ಬರ್ತಾವು. ಇದರಿಂದ ರೈತರು, ಕೂಲಿಕಾರರ ಬದುಕು ಹಸನಾಗತೈತಿ.
–ಕಂಠಿ ರಾಜಶೇಖರ, ರೈತ, ಇಟ್ಟಿಗಿ

**

ಖನಿಜ ನಿಧಿಯಲ್ಲಿರೋ ಸಾವಿರಾರು ಕೋಟಿ ಹಣ ನೀರಾವರಿ ಯೋಜನೆಗೆ ಬಳಸುವ ತೀರ್ಮಾನ ಕೈಗೊಳ್ಳಬೇಕು. ಪುಡಿಗಾಸು ಪರಿಹಾರ ನೀಡುವುದರಿಂದ ರೈತರು ಉದ್ದಾರ ಆಗಲ್ಲ. ಸೂಕ್ತ ಮಾರುಕಟ್ಟೆ, ಬೆಂಬಲ ಬೆಲೆ, ಬೀಜ, ಗೊಬ್ಬರಕ್ಕೆ ಸಬ್ಸಿಡಿ ನೀಡಬೇಕು.
– ಬಸಪ್ಪ ಗೌಡಣ್ಣನವರ, ರೈತ, ಹಿರೇಬನ್ನಿಮಟ್ಟಿ

**

ಸತತ ಬರಗಾಲದಿಂದಾಗಿ ರೈತರು ತತ್ತರಿಸಿದ್ದಾರೆ. ಆದ್ದರಿಂದ ಸಬ್ಸಿಡಿ ದರದಲ್ಲಿ ಬೀಜ ಮತ್ತು ರಾಸಾಯನಿಕ ಗೊಬ್ಬರ ಕೊಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಳಿದುಳಿದ ಬೆಳೆಯನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು. 
-ತಳವಾರ ಬಸವರಾಜ, ರೈತ, ಕುರದಗಡ್ಡಿ

**

ಬರಗಾಲದಿಂದ ರೈತರು ಚೇತರಿಸಿಕೊಳ್ಳುವ ಕುರಿತು ಯಾವುದೇ ಹೊಸ ಯೋಜನೆಗಳು ಇದುವರೆಗೂ  ಜಾರಿಗೆ ಬಂದಿಲ್ಲ. ಹೀಗಾಗಿ ಪ್ರತಿ ಸಲ ಬರ ಎದುರಾದಾಗ ರೈತರು ಸಮಸ್ಯೆ ಎದುರಿಸುತ್ತಾರೆ.
-ಎಂ.ಅರ್ಜುನಪ್ಪ, ನಾರಾಯಣದೇವರಕೆರೆ

**

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಕುಡಿಯುವ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಜನಪ್ರತಿನಿಧಿಗಳು ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದು, ಅಧಿಕಾರಿಗಳು ಯಾವುದೇ ಜವಾಬ್ದಾರಿ ಇಲ್ಲದೆ ನಿರ್ಲಕ್ಷ್ಯ ವಹಿಸಿದ್ದಾರೆ.
–ಗಣೇಶ್ ಅಂಗಡಿ, ಕೂಡ್ಲಿಗಿ

**

ತೀವ್ರ ಬರದಿಂದ ತಾಲ್ಲೂಕು ತತ್ತರಿಸಿದ್ದರೂ ಯಾವ ಮಂತ್ರಿಯೂ ಇತ್ತ ತಿರುಗಿ ನೋಡುತ್ತಿಲ್ಲ. ಮೇವು ನೀರು ಇಲ್ಲದೆ ಜಾನುವಾರುಗಳು ಪರಿತಪಿಸುತ್ತಿವೆ. ಇನ್ನೂ ಗೋಶಾಲೆ ತೆಗೆದಿಲ್ಲ.
–ಬಸಪ್ಪ, ಪೂಜಾರಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !