ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಸೀಮೆಯಲ್ಲಿ ಸಮೃದ್ಧ ಅಡಿಕೆ ಫಸಲು

ಹುಗಲೂರು ಗ್ರಾಮದ ಬಸಲಿಂಗನಗೌಡರ ಪ್ರಯೋಗಶೀಲ ಕೃಷಿ
Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಮಲೆನಾಡು, ಅರೆಮಲೆನಾಡಿನಲ್ಲಿ ಅಡಿಕೆ ಬೆಳೆಯುವುದು ಸಾಮಾನ್ಯ. ಆದರೆ, ಬೇಸಿಗೆಯಲ್ಲಿ 42 ಡಿಗ್ರಿಯ ಕೆಂಡದಂತಹ ಬಿಸಿಲಿರುವ ಬಯಲು ಸೀಮೆಯಲ್ಲಿ ಅಡಿಕೆ ಬೆಳೆದು ಇಲ್ಲಿನ ರೈತರೊಬ್ಬರು ಯಶಸ್ಸು ಕಂಡಿದ್ದಾರೆ.

ತಾಲ್ಲೂಕಿನ ಹುಗಲೂರು ಗ್ರಾಮದ ರೈತ ಮರೇಗೌಡ್ರ ಬಸಲಿಂಗನಗೌಡ ಅವರು ತಮ್ಮ ಅಲ್ಪ ಭೂಮಿಯನ್ನು ಪ್ರಯೋಗಶಾಲೆ ಮಾಡಿಕೊಂಡು ಅಡಿಕೆ ಸೇರಿದಂತೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೊದಲು ವೀಳ್ಯದ ಎಲೆ ಕೃಷಿ ಮಾಡಿ ಕೈ ಸುಟ್ಟಿಕೊಂಡಿದ್ದ ಇವರು, ಈಗ ಎಲೆಯ ನಷ್ಟವನ್ನು ಅಡಿಕೆಯಲ್ಲಿ ತುಂಬಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಊರಿಗೆ ಹತ್ತಿರವಿರುವ ತಮ್ಮ 2.17 ಎಕರೆ ಜಮೀನಿನಲ್ಲಿ ಒಂದು ಎಕರೆ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಉಳಿದ ಜಮೀನಿನಲ್ಲಿ ತೆಂಗು, ಮಾವು, ಸಪೋಟಾ, ಅಂಜೂರು ಹಾಗೂ ತರಕಾರಿ ಬೆಳೆಯುತ್ತಿದ್ದಾರೆ.

ಏಳು ವರ್ಷಗಳ ಹಿಂದೆ ತೀರ್ಥಹಳ್ಳಿ ಗೋಟೆ ತಳಿಯ 500 ಅಡಿಕೆ ಸಸಿಗಳನ್ನು ನಾಟಿ ಮಾಡಿ, ಮಕ್ಕಳಂತೆ ಪೋಷಿಸಿದ್ದಾರೆ. ಈ ಬೆಳೆಗೆ ಪೂರಕವಾದ ತಂಪು ಹವಾಗುಣವನ್ನು ಕೃತಕವಾಗಿ ಸೃಷ್ಟಿಸಿ, ಅನೇಕ ಸವಾಲುಗಳನ್ನು ಎದುರಿಸಿ ಬೆಳೆ ಸಂರಕ್ಷಣೆ ಮಾಡಿದ್ದಾರೆ.ಕಳೆದ ವರ್ಷ ಅಡಿಕೆಯ ಅಲ್ಪ ಫಸಲಿಗೆ ತೃಪ್ತಿ ಪಟ್ಟುಕೊಂಡಿದ್ದ ಗೌಡರು, ಈ ವರ್ಷ ಭರಪೂರ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಪ್ರಾರಂಭದಲ್ಲಿ ಇವರ ಅಡಿಕೆ ಕೃಷಿಯನ್ನು ಲೇವಡಿ ಮಾಡಿದವರೇ ಇಂದು ಸಮೃದ್ಧವಾಗಿ ಬೆಳೆದಿರುವ ಅಡಿಕೆ ತೋಟ ಕಂಡು ಅಚ್ಚರಿಪಡುತ್ತಿದ್ದಾರೆ.

ಹಿಂದಿನ ವರ್ಷ 13 ಕ್ವಿಂಟಲ್ ಅಡಿಕೆ ಬೆಳೆದು ₹60 ಸಾವಿರ ಆದಾಯ ಪಡೆದಿದ್ದರು. ಈ ವರ್ಷ 50 ಕ್ವಿಂಟಲ್ ಇಳುವರಿಯೊಂದಿಗೆ ₹2 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಕಚ್ಚಾ ಫಸಲನ್ನೇ ದಾವಣಗೆರೆ ಮಾರುಕಟ್ಟೆಗೆ ಕಳಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಇಲ್ಲಿಯೇ ಸಂಸ್ಕರಣೆ ಮಾಡಿ ಮಾರಾಟ ಮಾಡುವ ಆಲೋಚನೆಯಲ್ಲಿದ್ದಾರೆ.

ಇಲ್ಲಿನ ಉಷ್ಣ ವಾತಾವರಣದಲ್ಲಿ ಅಡಿಕೆ ಬೆಳೆಯಲು ಬಸಲಿಂಗನಗೌಡರು ಹರಸಾಹಸಪಟ್ಟಿದ್ದಾರೆ. ಬುಡಕ್ಕೆ ತಂಪು, ಸುಳಿಗೆ ಬಿಸಿಲು ಬೇಡುವ ಈ ಬೆಳೆಯನ್ನು ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಪ್ರತಿ ಗಿಡಕ್ಕೂ ತೆಂಗಿನ ಗರಿ, ಮರದ ತೊಗಟೆಯನ್ನು ಸುತ್ತವರಿದಿದ್ದಾರೆ. ಹೀರೆ ಬಳ್ಳಿಯನ್ನು ಹಬ್ಬಿಸಿ ಕೃತಕವಾಗಿ ತಂಪು ಹವಾಗುಣ ಸೃಷ್ಟಿಸಿದ್ದಾರೆ. ಸ್ವತಃ ಎರೆಹುಳು ಗೊಬ್ಬರ, ಜೀವಾಮೃತ ತಯಾರಿಸಿ ಗಿಡಗಳಿಗೆ ಪೋಷಕಾಂಶ ಒದಗಿಸಿದ್ದಾರೆ. 2015ರಲ್ಲಿ ಕೊಳವೆ ಬಾವಿ ಬರಿದಾದಾಗ ರೂಪಾಯಿಗೆ ಒಂದು ಕೊಡದಂತೆ ನೀರು ಖರೀದಿಸಿ ಗಿಡಗಳನ್ನು ಬದುಕಿಸಿಕೊಂಡಿದ್ದಾರೆ.

ಈ ಹಿಂದೆ ದಾವಣಗೆರೆ ಜಿಲ್ಲೆಯ ಅನಗೋಡಿನ ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಸ್ಟೋರ್ ಇನ್ ಚಾರ್ಜ್ ಆಗಿದ್ದ ಬಸಲಿಂಗನಗೌಡ, ಅಲ್ಲಿಯೇ ಅಡಿಕೆ ಕೃಷಿಯ ಅನುಭವ ಪಡೆದಿದ್ದರು. ಕೃಷಿ ಪ್ರೀತಿಯಿಂದ ಅವರು ಕೈತುಂಬಾ ಸಂಬಳ ಬರುವ ಕೆಲಸವನ್ನು ಬಿಟ್ಟು 2010ರಲ್ಲಿ ಸ್ವಗ್ರಾಮಕ್ಕೆ ಮರಳಿ ಕೃಷಿಯಲ್ಲಿ ತೊಡಗಿದ್ದಾರೆ. ಅವರಿಗೆ ಪತ್ನಿ ಪ್ರೇಮಲೀಲಾ, ತೋಟಗಾರಿಕೆ ಪದವಿ ಪಡೆದಿರುವ ಮಗ ಶಶಿಕುಮಾರ್ ಸಾಥ್ ನೀಡುತ್ತಿದ್ದಾರೆ. ಕೂಲಿ ಕಾರ್ಮಿಕರನ್ನು ಹೆಚ್ಚಾಗಿ ನೆಚ್ಚಿಕೊಳ್ಳದೇ ಮನೆ ಮಂದಿಯೇ ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT