ಬರಡು ಬೆಂಗಾಡು ಹಸಿರಾಗಿಸಿದ ಭಗೀರಥ

ಮಂಗಳವಾರ, ಜೂನ್ 25, 2019
29 °C
ಮೆಕ್ಯಾನಿಕಲ್‌ ಎಂಜಿನಿಯರ್‌ ಪರಿಸರದ ಗೀಳು ಹಚ್ಚಿಸಿಕೊಂಡ ಕಥೆಯಿದು

ಬರಡು ಬೆಂಗಾಡು ಹಸಿರಾಗಿಸಿದ ಭಗೀರಥ

Published:
Updated:
Prajavani

ಹೊಸಪೇಟೆ: ಅದು ಬರೀ ಕಲ್ಲುಗಳಿಂದ ಕೂಡಿರುವ ಬರಡು ಬೆಂಗಾಡು ಪ್ರದೇಶ. ಕುರುಚಲು ಹುಲ್ಲು ಸಹ ಅಲ್ಲಿ ಬೆಳೆಯುವುದಿಲ್ಲ. ಆದರೆ, ಆ ಬೆಂಗಾಡು ಈಗ ಹಸಿರಾಗಿದೆ.

ಅದನ್ನು ಸಾಧ್ಯವಾಗುವಂತೆ ಮಾಡಿದವರು ಪರಿಸರ ಪ್ರೇಮಿ ಪಂಪಯ್ಯ ಮಳೇಮಠ. ಯಾವುದೇ ಫಲಾಪೇಕ್ಷೆಯಿಲ್ಲದೆ ತುಂಗಭದ್ರಾ ಮಂಡಳಿಯ ಭೂಮಿಯಲ್ಲಿ ಗಿಡ, ಮರಗಳನ್ನು ಬೆಳೆಸಿ, ಬರಡು ಭೂಮಿಗೆ ಹಸಿರಿನ ಹೊದಿಕೆ ತೋಡಿಸುವ ಕೆಲಸ ಮಾಡಿದ್ದಾರೆ.

ತಾಲ್ಲೂಕಿನ ಕಮಲಾಪುರದಿಂದ ನಾಲ್ಕು ಕಿ.ಮೀ. ಕ್ರಮಿಸಿದರೆ ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆಗೆ (ಎಚ್‌.ಎಲ್‌.ಸಿ.) ಹೊಂದಿಕೊಂಡಂತೆ ಕಿರುದಾರಿಯೊಂದು ನಲ್ಲಾಪುರಕ್ಕೆ ಹೋಗುತ್ತದೆ. ಆ ಮಾರ್ಗದಲ್ಲಿ ಹೋಗುವಾಗ ಸುತ್ತಲೂ ಬಯಲು ಕಾಣುತ್ತದೆ. ಅದರ ನಡುವೆ ಹಸಿರಿನ ನಡುಗಡ್ಡೆಯಂತೆ ಭಾಸವಾಗುವ ಕಿರು ಅರಣ್ಯ ಗೋಚರಿಸುತ್ತದೆ. ಅದುವೇ ಪಂಪಯ್ಯನವರು ಬೆಳೆಸಿದ ಅರಣ್ಯ.

ತುಂಗಭದ್ರಾ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800ಕ್ಕೂ ಹೆಚ್ಚು ಕಾಡು ಗಿಡ, ಮರಗಳನ್ನು ಬೆಳೆಸಿದ್ದಾರೆ. ಐದು ವರ್ಷದ ಹಿಂದೆ ನೆಟ್ಟಿದ್ದ ಗಿಡಗಳು ಈಗ ಬೃಹಾದಾಕಾರವಾಗಿ ಬೆಳೆದು, ಹಸಿರು ಹೊದ್ದು ನಿಂತಿವೆ. ಬೇವು, ಆಲ, ಅರಳಿ, ಬಸರಿ, ನೇರಳೆ, ಶಿವಣಿ, ಹಲಸು, ನೆಲ್ಲಿಕಾಯಿ, ಸಿಹಿ ಹುಣಸೆ, ಆಕಾಶ ಮಲ್ಲಿಗೆ ಅವುಗಳಲ್ಲಿ ಸೇರಿವೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದಿರುವುದು ಬಿಟ್ಟರೆ, ಅವುಗಳಿಗೆ ಗೊಬ್ಬರ, ಸ್ಪ್ರಿಂಕ್ಲರ್‌, ಹನಿ ನೀರಾವರಿ ವ್ಯವಸ್ಥೆಯನ್ನು ಖುದ್ದಾಗಿ ಅವರೇ ಕೈಯಿಂದ ಹಣ ಭರಿಸಿ ಮಾಡಿದ್ದಾರೆ. ಅಲ್ಲದೇ ಹಗಲಿರುಳು ಅವರೇ ದುಡಿದಿದ್ದಾರೆ.

ಈ ಮೂರುವರೆ ಎಕರೆ ಜಾಗಕ್ಕೆ ಹೊಂದಿಕೊಂಡಂತೆ ಪಂಪಯ್ಯನವರಿಗೆ ಸೇರಿದ ಒಂದು ಎಕರೆ ತೋಟವಿದೆ. ಅದರ ಸುತ್ತಲೂ ಕಾಡು ಗಿಡಗಳನ್ನು ಬೆಳೆಸಿದ್ದಾರೆ. ಮಧ್ಯದಲ್ಲಿ ಮಾವು, ಸಪೋಟ, ಸೀತಾಫಲ, ಪಪ್ಪಾಯಿ, ಬಾಳೆ, ನುಗ್ಗೇಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳಿಗೆ ಮೀಸಲಿಟ್ಟಿದ್ದಾರೆ.

ತೋಟದಲ್ಲಿ ಬೋರ್‌ ಹಾಕಿಸಿಕೊಂಡು ಅವುಗಳಿಗೆ ನೀರುಣಿಸುತ್ತಿದ್ದಾರೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಕಾರಣಕ್ಕಾಗಿ ಕೃಷಿ ಇಲಾಖೆಯ ನೆರವಿನೊಂದಿಗೆ ಮಧ್ಯಮ ಗಾತ್ರದ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದಾರೆ. ತೋಟ, ಅರಣ್ಯಕ್ಕೆ ನೀರಿನ ವ್ಯವಸ್ಥೆ ಮಾಡಿಕೊಂಡಿರುವುದಲ್ಲದೇ ಸುತ್ತಮುತ್ತಲಿನ ಜಮೀನಿನವರು ಆ ಹೊಂಡದಲ್ಲಿ ಸಂಗ್ರಹವಾಗುವ ನೀರಿನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಕೃಷಿ ಹೊಂಡದಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಪಕ್ಷಿಗಳ ನೀರಿನ ದಾಹ ತಣಿಸಲು ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ಕಾಳಿಗೂ ವ್ಯವಸ್ಥೆ ಮಾಡಿದ್ದಾರೆ. 70ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳ ನೆಲೆಬೀಡಾಗಿ ಬದಲಾಗಿದೆ. ನೀರು ಹಾಗೂ ಆಹಾರ ಯಥೇಚ್ಛವಾಗಿ ಸಿಗುವುದರಿಂದ ಅನೇಕ ಪಕ್ಷಿಗಳು ಮೊಟ್ಟೆ ಇಟ್ಟು, ಮರಿಗಳನ್ನು ಬೆಳೆಸುತ್ತಿವೆ. ಹವ್ಯಾಸಿ ಛಾಯಾಗ್ರಾಹಕರು, ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ.

ಸ್ವತಃ ಪಂಪಯ್ಯನವರಿಗೆ ವನ್ಯಜೀವಿ, ಕಾಡು, ಪರಿಸರ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಇದೆ. ಹೀಗಾಗಿಯೇ ಅವರು ಪಕ್ಷಿಗಳ ಛಾಯಾಗ್ರಹಣಕ್ಕಾಗಿ ಅವರ ತೋಟದಲ್ಲಿ ಬಂಕರ್‌ ನಿರ್ಮಿಸಿದ್ದಾರೆ. ಅದರಲ್ಲಿ ಕುಳಿತುಕೊಂಡು ಫೋಟೋಗ್ರಫಿ ಮಾಡಬಹುದು. ದೇಶ–ವಿದೇಶಗಳಿಂದ ಜನ ಅಲ್ಲಿಗೆ ಬಂದು ಫೋಟೋಗ್ರಫಿ ಮಾಡುತ್ತಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಶಾಲಾ ಮಕ್ಕಳು ಪ್ರವಾಸಕ್ಕಾಗಿ ಬರುತ್ತಿದ್ದಾರೆ. ಕಿರಿದಾದ ಪರದೆ ಅಳವಡಿಸಿ, ಪ್ರಾಜೆಕ್ಟರ್‌ ಮೂಲಕ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಅಂದಹಾಗೆ, ಪಂಪಯ್ಯನವರು ಡಿಪ್ಲೋಮಾ ಮೆಕ್ಯಾನಿಕಲ್‌ ಎಂಜಿನಿಯರ್‌. ಕೆಲಕಾಲ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸಿದ ಅವರು, 1994ರಲ್ಲಿ ದರೋಜಿ ಕರಡಿಧಾಮ ಆರಂಭವಾದ ಬಳಿಕ ಅಲ್ಲಿಗೆ ಅವರ ಓಡಾಟ ಹೆಚ್ಚಾಯಿತು. ವನ್ಯಜೀವಿ ತಜ್ಞರು, ಪರಿಸರ ಪ್ರೇಮಿಗಳ ಸಂಪರ್ಕಕ್ಕೆ ಬಂದರು. ನಂತರ ವನ್ಯಜೀವಿ ಮಾರ್ಗದರ್ಶಿಯಾಗಿ ಕೆಲಸ ಮಾಡಲು ಆರಂಭಿಸಿದರು. ಈಗಲೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅದರ ನಡುವೆಯೇ ಅರಣ್ಯ ಬೆಳೆಸಿದ್ದಾರೆ.

‘ಪರಿಸರ ಉಳಿಸಿದರೆ ನಮಗೆ ಉಳಿಗಾಲ. ಅದನ್ನು ಪ್ರತಿಯೊಬ್ಬರೂ ಉಳಿಸಿ, ಬೆಳೆಸಬೇಕು. ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಅರಣ್ಯ ಬೆಳೆಸಿದ್ದೇನೆ. ಆರಂಭದಲ್ಲಿ ಸಾಕಷ್ಟು ಸವಾಲುಗಳು ಎದುರಾದವು. ಆದರೆ, ಈಗ ಎಲ್ಲೆಡೆ ಹಸಿರಾಗಿರುವುದು ನೋಡಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಅನೇಕ ಪಕ್ಷಿಗಳು, ವನ್ಯಜೀವಿಗಳಿಗೆ ನೀರು, ಆಹಾರ ಸಿಗುವ ತಾಣವಾಗಿ ಬದಲಾಗಿದೆ. ಪ್ರತಿಯೊಬ್ಬರೂ ಅವರ ಕೈಲಾದಷ್ಟು ಪರಿಸರಕ್ಕೆ ಕೊಡುಗೆ ಕೊಟ್ಟರೆ ಮುಂದಿನ ತಲೆಮಾರು ನೆಮ್ಮದಿಯಿಂದ ಇರಬಹುದು’ ಎನ್ನುತ್ತಾರೆ ಪಂಪಯ್ಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !