ಗುರುವಾರ , ಡಿಸೆಂಬರ್ 5, 2019
18 °C
2,000 ಎಕರೆಯಲ್ಲಿ ಒಣಗಿ ಹೋದ ಬೆಳೆ; ಮತ್ತೆ ಬಿತ್ತನೆಗೆ ಸಿದ್ಧತೆ

ಕೈಕೊಟ್ಟ ಮಳೆ; ರೈತ ಕಂಗಾಲು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Deccan Herald

ಹೊಸಪೇಟೆ: ಸಮರ್ಪಕವಾಗಿ ಮಳೆಯಾಗದ ಕಾರಣ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ಸಂಪೂರ್ಣ ಒಣಗಿ ಹೋಗಿದೆ.

ತಾಲ್ಲೂಕಿನ ರಾಜಪುರ, ಕಲ್ಲಹಳ್ಳಿ, ಜಂಬುನಾಥಹಳ್ಳಿ, ಕಣಿವೆರಾಯನಗುಡಿ ಭಾಗದಲ್ಲೇ ಸಾವಿರ ಎಕರೆಗೂ ಹೆಚ್ಚಿನ ಬೆಳೆ ಒಣಗಿ ಹೋಗಿದೆ. ಕಾರಿಗನೂರು, ಪಾಪಿನಾಯಕನಹಳ್ಳಿ, ಬೈಲುವದ್ದಿಗೇರಿ, ಗುಂಡ್ಲವದ್ದಿಗೇರಿ, ಕಾಕುಬಾಳು, ಭುವನಹಳ್ಳಿ, ಧರ್ಮಸಾಗರದಲ್ಲೂ ಇದೇ ಸ್ಥಿತಿ ಇದೆ. ಈ ಭಾಗದ ರೈತರು ಮಳೆಯನ್ನೇ ಆಶ್ರಯಿಸಿ ಬೆಳೆ ಬೆಳೆಯುತ್ತಾರೆ. ಆದರೆ, ವರುಣ ಕೈಕೊಟ್ಟಿರುವುದರಿಂದ ಬೆಳೆ ಹಾಳಾಗಿ, ಅನ್ನದಾತ ಕಂಗಾಲಾಗಿದ್ದಾನೆ.

ರಾಜಪುರ, ಕಲ್ಲಹಳ್ಳಿ, ಜಂಬುನಾಥಹಳ್ಳಿ ಹಾಗೂ ಕಣಿವೆರಾಯನಗುಡಿ ಗ್ರಾಮದ ರೈತರು ತಮ್ಮ ಹೊಲದಲ್ಲಿನ ಒಣಗಿ ಹೋದ ಬೆಳೆಯನ್ನು ಕಟಾವು ಮಾಡಿ, ಹೊಸ ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಗ್ರಾಮಗಳ ಹೊಲಗಳಲ್ಲಿ ಮಂಗಳವಾರ ಸುತ್ತಾಡಿದಾಗ ಬಹುತೇಕ ರೈತರು ಒಣಗಿ ಹೋದ ಬೆಳೆಯನ್ನು ಕಿತ್ತು ಹಾಕುತ್ತಿದ್ದ ದೃಶ್ಯ ಕಂಡು ಬಂತು.

ಈ ಕುರಿತು ರಾಜಪುರದ ಗುಜ್ಜಲ್‌ ಕರಿಹನುಮ ಅವರೊಂದಿಗೆ ‘ಪ್ರಜಾವಾಣಿ’ ಮಾತಿಗಿಳಿದಾಗ ಅವರು ಈ ರೀತಿ ಗೋಳು ತೋಡಿಕೊಂಡರು. ‘ಮೇ ಎರಡನೇ ವಾರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಆರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಜೋಳ ಬಿತ್ತನೆ ಮಾಡಿದ್ದೆ. ಆದರೆ, ಎರಡು ತಿಂಗಳಿಂದ ಹನಿ ಮಳೆಯೂ ಇಲ್ಲ. ಈಗ ಮಳೆ ಬಂದರೂ ಬೆಳೆ ಉಳಿಯುವುದಿಲ್ಲ. ಆದಕಾರಣ ಅದನ್ನು ಕಿತ್ತು ಹಾಕಿ, ಭೂಮಿ ಹದ ಮಾಡಿ ಹೊಸ ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ವಿವರಿಸಿದರು.

‘ಬೀಜ, ಗೊಬ್ಬರ, ರಾಸಾಯನಿಕಕ್ಕೆ ಪ್ರತಿ ಎಕರೆಗೆ ₹20ರಿಂದ ₹25 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದೆ. ಆದರೆ, ಎಲ್ಲವೂ ಮಣ್ಣು ಪಾಲಾಗಿದೆ. ನಮ್ಮೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಗೋಳು ಇದೇ ಆಗಿದೆ. ಸರ್ಕಾರ ಪರಿಹಾರ ಕೊಟ್ಟು ನೆರವಿಗೆ ಬರಬೇಕು’ ಎಂದು ಕೋರಿದರು.

‘ಈ ಭಾಗದಲ್ಲಿ ಎಲ್ಲ ರೈತರು ಮಳೆಯನ್ನೇ ಆಶ್ರಯಿಸಿ ಬೆಳೆ ಬೆಳೆಯುತ್ತಾರೆ. ಮಳೆ ಕೈಕೊಟ್ಟರೆ ದೇವರೇ ಕಾಪಾಡಬೇಕು. ಅಂತರ್ಜಲ ಮಟ್ಟವೂ ಭಾರಿ ಕುಸಿದಿದೆ. ಹಿಂದೆ ಬೋರ್‌ ಹಾಕಿಸಿದರೆ 120 ಅಡಿಗಳಿಗೆ ನೀರು ಬರುತ್ತಿತ್ತು. ಈಗ 400 ಅಡಿಗೂ ನೀರು ಬರುತ್ತಿಲ್ಲ’ ಎಂದು ಆರ್.ಜೆ. ನಾಗೇಂದ್ರಪ್ಪ, ಕಟಗಿ ಮಾರುತಿ, ಮರಡಿ ರಘು ಗೋಳು ತೋಡಿಕೊಂಡರು.

‘ತಾಲ್ಲೂಕಿನಾದ್ಯಂತ ಸರ್ವೇ ಕೆಲಸ ನಡೆಯುತ್ತಿದೆ. ಈಗಾಗಲೇ ಸಾವಿರ ಎಕರೆಗೂ ಅಧಿಕ ಬೆಳೆ ಹಾಳಾಗಿದೆ. ಬರುವ ದಿನಗಳಲ್ಲಿ ರೈತರು ಬರ ನಿರೋಧಕ ಬೆಳೆಗಳಾದ ನವಣೆ, ಸಜ್ಜೆ, ಹುರುಳಿಯನ್ನು ಬಿತ್ತನೆ ಮಾಡಬೇಕು. ಸ್ವಲ್ಪ ಮಳೆಯಾದರೂ ಬೆಳೆ ಚೆನ್ನಾಗಿ ಬರುತ್ತದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ವಾಮದೇವ ‘ಪ್ರಜಾವಾಣಿ’ಗೆ ತಿಳಿಸಿದರು.

 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು