ಗಣಪ ಅಲ್ಲಲ್ಲ... ಜಲಚರಗಳ ಆಹಾರ

7

ಗಣಪ ಅಲ್ಲಲ್ಲ... ಜಲಚರಗಳ ಆಹಾರ

Published:
Updated:
Deccan Herald

ಹೊಸಪೇಟೆ: ನಗರದಲ್ಲಿ ಈ ಸಲ ಗಣೇಶ ಉತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುತ್ತಿರುವುದರ ಜತೆಗೆ ಜಲಚರಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪ್ರತಿಮೆಗಳನ್ನು ತಯಾರಿಸಿ, ಪ್ರತಿಷ್ಠಾಪಿಸಿರುವುದು ವಿಶೇಷ.

ಮಣ್ಣಿನ ಪ್ರತಿಮೆಗಳನ್ನು ಕಾಲುವೆ, ನದಿಯಲ್ಲಿ ವಿಸರ್ಜನೆ ಮಾಡಿದರೆ ಅದರಿಂದ ಜಲಚರಗಳಿಗೆ ಸಮಸ್ಯೆ ಉಂಟಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಾಗುವುದಿಲ್ಲ. ಈ ಕಾರಣಕ್ಕಾಗಿಯೇ ನಗರದ ಆಕಾಶವಾಣಿ ಬಡಾವಣೆ ಮತ್ತು ಈಶ್ವರ ನಗರದ ಯುವಕರು ಹೊಸ ಉಪಾಯ ಕಂಡುಕೊಂಡಿದ್ದಾರೆ.

ಬೇಳೆ–ಕಾಳುಗಳಿಂದ ಪ್ರತಿಮೆಗಳನ್ನು ತಯಾರಿಸಿ, ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿಮೆ ವಿಸರ್ಜನೆ ಮಾಡಿದರೆ ಅದರಲ್ಲಿನ ಕಾಳುಗಳನ್ನು ಮೀನು, ಆಮೆ ಸೇರಿದಂತೆ ಇತರೆ ಜಲಚರಗಳು ತಿನ್ನಬಹುದು. ಜತೆಗೆ ಕಾಲುವೆ, ನದಿ ಪಾತ್ರ ಕೂಡ ಸ್ವಚ್ಛವಾಗಿರುತ್ತದೆ. ಯಾವುದೂ ವ್ಯರ್ಥವಾಗುವುದಿಲ್ಲ ಎನ್ನುವುದು ಅವರ ವಾದ.

ಜಂಬೂ ಗಜಾನನ ಯುವಕರ ಸಂಘದಿಂದ ಈಶ್ವರ ನಗರದ ಬನ್ನಿಕಾಳಮ್ಮ ದೇಗುಲದ ಬಳಿ ಪ್ರತಿಷ್ಠಾಪಿಸಿರುವ ಆರು ಅಡಿ ಎತ್ತರದ ಗಜಾನನಿಗೆ ಬೇಳೆ, ಕಾಳುಗಳಿಂದಲೇ ರೂಪ ಕೊಟ್ಟಿದ್ದಾರೆ. ಗಣೇಶನ ಕಿರೀಟ ಹಾಗೂ ಆಭರಣಗಳಿಗೆ ಬಿಳಿ ಎಳ್ಳು ಉಪಯೋಗಿಸಿ ಅಲಂಕಾರ ಮಾಡಿದ್ದಾರೆ. ಅದಕ್ಕಾಗಿ ಎರಡೂ ವರೆ ಕೆ.ಜಿ. ಎಳ್ಳು ಬಳಸಿದ್ದಾರೆ. ಕಣ್ಣಿಗೆ, ಸಣ್ಣ ಗುರೆಳ್ಳು (100 ಗ್ರಾಂ), ಹೊಟ್ಟೆಗೆ ತೊಗರಿ ಬೇಳೆ (7 ಕೆ.ಜಿ.), ನವಣಕ್ಕಿ (8 ಕೆ.ಜಿ.) ಬಳಸಿದ್ದಾರೆ. ಪ್ರತಿಮೆಯ ಒಳಭಾಗದಲ್ಲಿ ಬಿದಿರು ಹಾಗೂ ಬಟ್ಟೆ ಬಳಸಿದ್ದಾರೆ. ಸಂಘದ ನಾಗರಾಜ, ಅಭಿಷೇಕ, ಉಮೇಶ, ಶಿವಯ್ಯ ಅವರ ಶ್ರಮದಿಂದ ಇದು ಸಾಧ್ಯವಾಗಿದೆ. ಅಂದಹಾಗೆ ಪ್ರತಿಮೆ ತಯಾರಿಕೆಗೆ ಒಟ್ಟು ₨14 ಸಾವಿರ ಖರ್ಚು ಬಂದಿದೆ.

‘ಪರಿಸರ ಸ್ನೇಹಿ ಗಣಪನ ಪ್ರತಿಮೆಯನ್ನೇ ಪ್ರತಿಷ್ಠಾಪಿಸಬೇಕೆಂದು ಸರ್ಕಾರ ತಾಕೀತು ಮಾಡಿತ್ತು. ನಾವು ಒಂದು ಹೆಜ್ಜೆ ಮುಂದೆ ಹೋಗಿ ಸಂಪೂರ್ಣ ಬೇಳೆ ಕಾಳುಗಳಿಂದ ತಯಾರಿಸಿದ ವಕ್ರದಂತನನ್ನು ಕೂರಿಸಿದ್ದೇವೆ. ನೀರಿನಲ್ಲಿ ವಿಸರ್ಜನೆ ಮಾಡಿದರೆ ಸಂಪೂರ್ಣ ಕರಗಿ ಹೋಗುತ್ತದೆ. ಜಲಚರಗಳು ಅವುಗಳನ್ನು ತಿನ್ನಬಹುದು’ ಎಂದು ನಾಗರಾಜ ವಿವರಿಸಿದರು.

ಹೆಸರು ಬೇಳೆ, ಸೋಯಾಬಿನ್‌ ಗಣಪ

ಏಕತಾ ಯುವಕ ಸಮಿತಿಯಿಂದ ಆಕಾಶವಾಣಿ ಬಡಾವಣೆಯಲ್ಲಿ ಅದೇ ತೆರನಾದ ಪ್ರಯೋಗ ಮಾಡಲಾಗಿದೆ. ಹೆಸರು ಬೇಳೆ, ಸೋಯಾಬಿನ್‌ ಬಳಸಿಕೊಂಡು ಪ್ರತಿಮೆಗೆ ರೂಪ ಕೊಡಲಾಗಿದೆ. ಆನೆ ದಂತ ಹಾಗೂ ಜನಿವಾರಕ್ಕೆ ಸಬ್ಬಕ್ಕಿಯಿಂದ ಅಲಂಕರಿಸಲಾಗಿದೆ. ಏಳು ಸಾವಿರ ವೆಚ್ಚವಾಗಿದೆ.

‘ಹಬ್ಬ ಸಂಭ್ರಮದಿಂದ ಆಚರಿಸಬೇಕು. ಆದರೆ, ಅದರಿಂದ ಜಲ ಹಾಗೂ ವಾಯು ಮಾಲಿನ್ಯ ಹಾಳಾಗಬಾರದು. ಪ್ರತಿಮೆ ವಿಸರ್ಜನೆ ಮಾಡಿದರೆ ಜಲಚರಗಳಿಗೆ ಆಹಾರವಾಗುತ್ತದೆ. ಜತೆಗೆ ಮೆರವಣಿಗೆ ವೇಳೆ ಪಟಾಕಿ ಸಿಡಿಸದಿರಲು ತೀರ್ಮಾನಿಸಿದ್ದೇವೆ’ ಎಂದು ಸಮಿತಿ ಅಧ್ಯಕ್ಷ ದೇವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

ವಿನಾಯಕ ಪ್ರತಿಮೆಯ ಎಡಬದಿಯಲ್ಲಿ ಭಾರತ ನಕಾಶೆ ಮಾಡಿ, ಅದರಲ್ಲಿ ರೈತ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳನ್ನು ಅಂಟಿಸಲಾಗಿದೆ. ಬಲಬದಿಯಲ್ಲಿ 1976ರಲ್ಲಿ ಬಿಡುಗಡೆಗೊಳಿಸಿದ ಒಂದು ರೂಪಾಯಿಯ ನಾಣ್ಯವಿದೆ. ಆ ನಾಣ್ಯದಲ್ಲಿ ಭತ್ತದ ತೆನೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !