ಏಳುಕೇರಿ ದಸರಾ ಹಬ್ಬದ ಸುತ್ತಮುತ್ತ

7

ಏಳುಕೇರಿ ದಸರಾ ಹಬ್ಬದ ಸುತ್ತಮುತ್ತ

Published:
Updated:
Deccan Herald

ಹೊಸಪೇಟೆ: ನಗರ ಹಾಗೂ ತಾಲ್ಲೂಕಿನ ಕಮಲಾಪುರದ ಏಳು ಕೇರಿಗಳಲ್ಲಿ ಆಚರಿಸಲಾಗುವ ನಾಡಹಬ್ಬ ದಸರೆಗೆ ಅದರದೇ ಆದ ವಿಶೇಷ ಮಹತ್ವ ಇದೆ.

ದುರ್ಗಾದೇವಿಯ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ದಸರಾ ಹಬ್ಬ ಆಚರಿಸುವ ಪದ್ಧತಿ ದೇಶದ ಬಹುತೇಕ ಭಾಗಗಳಲ್ಲಿ ಇರುವುದನ್ನು ಕಾಣುತ್ತೇವೆ. ಆದರೆ, ಏಳುಕೇರಿಗಳಲ್ಲಿನ ಆಚರಣೆ ಸಂಪೂರ್ಣ ಬೇರೆಯದು. ಈ ಎಲ್ಲ ಕೇರಿಗಳಲ್ಲಿ ದುರ್ಗಾದೇವಿ ಬದಲಾಗಿ ಸ್ಥಳೀಯ ದೇವತೆಗಳನ್ನು ಪೂಜಿಸುವುದು ವಿಶೇಷ.

ನಗರದ ಮ್ಯಾಸಕೇರಿಯಲ್ಲಿ ಹುಲಿಗೆಮ್ಮ, ಉಕ್ಕಡಕೇರಿಯಲ್ಲಿ ಕೊಂಗಮ್ಮ, ಚಿತ್ರಕೇರಿಯಲ್ಲಿ ಜಲದುರ್ಗಮ್ಮ, ಬಾಣದಕೇರಿಯಲ್ಲಿ ಬಳ್ಳಾರಿ ದುರ್ಗಮ್ಮ, ತಳವಾರಕೇರಿಯಲ್ಲಿ ನಿಜಲಿಂಗಮ್ಮ, ಜಂಬನಹಳ್ಳಿ ಕೇರಿಯಲ್ಲಿ ರಾಂಪುರ ದುರ್ಗಮ್ಮ, ಬಂಡಿಕೇರಿಯಲ್ಲಿ ತಾಯಮ್ಮ ಹಾಗೂ ಮರಿಯಮ್ಮ ದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಅದೇ ರೀತಿ ತಾಲ್ಲೂಕಿನ ಕಮಲಾಪುರ ಪಟ್ಟಣದ ಚಾವಡಿಕೇರಿಯಲ್ಲಿ ಉಚ್ಚಯ ದೇವರನ್ನು ಪೂಜಿಸಿದರೆ, ಮನ್ಮಥಕೇರಿಯಲ್ಲಿ ನರೇಗಲ್ಲಮ್ಮ, ಗೋನಾಳ ಕೇರಿಯಲ್ಲಿ ನಿಜಲಿಂಗಮ್ಮ, ಬಂಡೆಕೇರಿಯಲ್ಲಿ ಹುಲಿಗೆಮ್ಮ, ತಿಮ್ಮನಾಥಕೇರಿಯಲ್ಲಿ ತಾಯಮ್ಮ, ಹರಿಜನಕೇರಿಯಲ್ಲಿ ಗಾಳೆಮ್ಮನಿಗೆ ಪೂಜಿಸಲಾಗುತ್ತದೆ. ಹಿರೇಕೇರಿಯಿಂದ ಯಾವುದೇ ಪಲ್ಲಕ್ಕಿ ಹೊರಡುವುದಿಲ್ಲ. ಸ್ಥಳೀಯರು ನೇರವಾಗಿ ಧರ್ಮದಗುಡ್ಡಕ್ಕೆ ಹೋಗಿ ಬನ್ನಿ ಮುಡಿಯುತ್ತಾರೆ.

ನವರಾತ್ರಿ ಸಂದರ್ಭದಲ್ಲಿ ಎಲ್ಲ ಕೇರಿಗಳಿಗೆ ವಿದ್ಯುದ್ದೀಪಗಳ ಅಲಂಕಾರ ಮಾಡಲಾಗುತ್ತದೆ. ಜನ ಶ್ರದ್ಧಾ, ಭಕ್ತಿಯಿಂದ ದೇವತೆಗೆಳಿಗೆ ಪೂಜೆ ಸಲ್ಲಿಸುತ್ತಾರೆ. ನವರಾತ್ರಿಯಲ್ಲಿ ಎಲ್ಲ ದೇವತೆಗಳು ಊರು ಸುತ್ತುವುದು (ಕೇರಿ ಸುತ್ತುವುದು) ಇನ್ನೊಂದು ವಿಶೇಷ. ಕೇರಿಯ ಎಲ್ಲ ಮನೆಗಳಿಗೆ ಪಲ್ಲಕ್ಕಿಯಲ್ಲಿ ದೇವತೆಗಳನ್ನು ಕೊಂಡೊಯ್ದು, ಜನರಿಗೆ ಅವರಿದ್ದ ಸ್ಥಳದಲ್ಲೇ ಪೂಜೆ, ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. 

ಆಯುಧ ಪೂಜೆಯ ದಿನ ಎಲ್ಲ ದೇವತೆಗಳು ನಗರದ ರಾಮಾ ಟಾಕೀಸ್‌ ಬಳಿ ಸಮಾಗಮವಾಗುತ್ತವೆ. ಅಲ್ಲಿ ವಿಶೇಷ ಪೂಜೆ ನೆರವೇರಿಸಿ ಬೀಳ್ಕೊಡಲಾಗುತ್ತದೆ. ಅನಂತರ ಎಲ್ಲ ದೇವತೆಗಳನ್ನು ಬಸವನದುರ್ಗ ಸಮೀಪದ ಧರ್ಮದಗುಡ್ಡದ ಮೇಲಿನ ಚನ್ನಬಸವಣ್ಣ ದೇಗುಲಕ್ಕೆ ಶ್ರದ್ಧಾ, ಭಕ್ತಿಯಿಂದ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಸಂಜೆ ಬನ್ನಿ ಮುಡಿದು ಪುನಃ ದೇವತೆಗಳನ್ನು ಊರಿಗೆ ತೆಗೆದುಕೊಂಡು ಬರಲಾಗುತ್ತದೆ. ಊರ ಹೊರಗಿನಿಂದ ಆಯಾ ಕೇರಿಗಳಿಗೆ ಮೆರವಣಿಗೆಯಲ್ಲಿ ಸಡಗರ, ಸಂಭ್ರಮದೊಂದಿಗೆ ಕರೆದೊಯ್ಯಲಾಗುತ್ತದೆ. ಭಜನೆ, ಡೊಳ್ಳು ಕುಣಿತ, ಕೋಲಾಟ, ಸಾಹಸ ಪ್ರದರ್ಶನ ಪ್ರಮುಖ ಆಕರ್ಷಣೆ ಆಗಿರುತ್ತದೆ.

ಧರ್ಮದ ಗುಡ್ಡದಲ್ಲಿ ಎಲ್ಲ ದೇವತೆಗಳು ಒಂದೆಡೆ ಸೇರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಏಳು ಕೇರಿ ಸೇರಿದಂತೆ ವಿವಿಧ ಕಡೆಗಳಿಂದ ಸಹಸ್ರಾರು ಜನ ಸೇರುತ್ತಾರೆ.

‘ವಿಜಯನಗರ ಸಾಮ್ರಾಜ್ಯದ ಭಾಗವಾಗಿರುವ ಆನೆಗುಂದಿ, ಹಂಪಿ ಜತೆಗೆ ಕಮಲಾಪುರ, ಹೊಸಪೇಟೆ ಏಳುಕೇರಿಗಳ ಜನರೊಂದಿಗೆ ಈಗಲೂ ಅವಿನಾಭಾವ ನಂಟಿದೆ. ಹಂಪಿ, ಆನೆಗುಂದಿ, ಮಾಲ್ಯವಂತದಲ್ಲಿ ನಡೆಯುವ ಜಾತ್ರೆಯಲ್ಲಿ ಐದು ಜನ ನಾಯಕರು ತೇರು ಎಳೆದು ಚಾಲನೆ ಕೊಡುವುದು ವಿಶೇಷ’ ಎನ್ನುತ್ತಾರೆ ಪತ್ರಕರ್ತ ಶಿವಕುಮಾರ ಮಾಳಗಿ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !