ಗುರುವಾರ , ನವೆಂಬರ್ 14, 2019
19 °C
ಡೆಕೊರೇಟರ್ಸ್‌ ಸಂಘದ ಅಧಿವೇಶನ ‘ವಿಜಯನಗರ ವೈಭವ’ದಲ್ಲಿ ಸಂಸದ ದೇವೇಂದ್ರಪ್ಪ ಭರವಸೆ

ಜಿಎಸ್‌ಟಿ ಭಾರ ತಗ್ಗಿಸಲು ಶ್ರಮಿಸುವೆ

Published:
Updated:
Prajavani

ಹೊಸಪೇಟೆ: ‘ಸರಕು ಮತ್ತು ಸೇವಾ ತೆರಿಗೆಯಿಂದ (ಜಿ.ಎಸ್‌.ಟಿ.) ಟೆಂಟ್‌ ಮತ್ತು ಡೆಕೊರೇಟರ್ಸ್‌ಗಳಿಗೆ ಸಮಸ್ಯೆ ಆಗುತ್ತಿದ್ದು, ಈ ವಿಚಾರದ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡಲಾಗುವುದು’ ಎಂದು ಸಂಸದ ವೈ. ದೇವೇಂದ್ರಪ್ಪ ಭರವಸೆ ನೀಡಿದರು.

ದಿ ನಾರ್ತ್‌ ಕರ್ನಾಟಕ ಟೆಂಟ್‌ ಮತ್ತು ಡೆಕೊರೇಟರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ನಿಂದ ನಗರದಲ್ಲಿ ಹಮ್ಮಿಕೊಂಡಿರುವ ‘ವಿಜಯನಗರ ವೈಭವ’ 16ನೇ ಮಹಾ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿ.ಎಸ್‌.ಟಿ. ಶೇಕಡಾವಾರು ಪ್ರಮಾಣದಲ್ಲಿ ಕಡಿಮೆ ಮಾಡಬೇಕು. ಈ ಉದ್ಯಮವನ್ನು ಸಣ್ಣ ಉದ್ದಿಮೆಯ ವ್ಯಾಪ್ತಿಗೆ ತರಬೇಕು ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಸಂಘದವರು ಇಟ್ಟಿದ್ದಾರೆ. ಅವುಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಸಂಘದ ಪ್ರಮುಖರನ್ನು ನವದೆಹಲಿಗೆ ಕರೆದೊಯ್ದು ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ನೇರವಾಗಿ ಚರ್ಚಿಸಲು ಅವಕಾಶ ಮಾಡಿಕೊಡುವೆ’ ಎಂದು ಹೇಳಿದರು.

‘ಯಾವ ವೃತ್ತಿ ಮೇಲಲ್ಲ, ಕೀಳಲ್ಲ. ಎಲ್ಲ ವೃತ್ತಿಗಳು ಸಮಾನ. ಅವುಗಳಿಗೆ ಅದರದೇ ಆದ ಮಹತ್ವ ಇದೆ. ಚಮ್ಮಾರ, ಕಮ್ಮಾರ, ಅಕ್ಕಸಾಲಿಗ, ಮಡಿವಾಳ ಸೇರಿದಂತೆ ಎಲ್ಲರ ಕೊಡುಗೆಯಿಂದ ಸಮಾಜ ಮುಂದುವರೆಯುತ್ತಿದೆ. ಶಾಮಿಯಾನ ಇಲ್ಲದೆ ಯಾವ ಕಾರ್ಯಕ್ರಮವೂ ನೆರವೇರುವುದಿಲ್ಲ. ಅವರ ಕೆಲಸ ಶ್ಲಾಘನಾರ್ಹವಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‍ಫೇರ್ ಆರ್ಗನೈಜೇಶನ್ ಪ್ರಧಾನ ಕಾರ್ಯದರ್ಶಿ ಕರ್ತಾರ್‌ ಸಿಂಗ್ ಕೋಚಾರ್ ಮಾತನಾಡಿ, ‘ನಮ್ಮ ಉದ್ಯಮದ ಮೇಲೆ ಶೇ 18ರಷ್ಟು ಜಿ.ಎಸ್‌.ಟಿ. ಹಾಕಿರುವುದರಿಂದ ಹೆಚ್ಚಿನ ಹೊರೆ ಬಿದ್ದಿದೆ. ಈ ಹಿಂದಿನ ಸರ್ಕಾರ ಶೇ 6ರಷ್ಟು ತೆರಿಗೆ ಹಾಕಿತ್ತು. ಈ ಕ್ಷೇತ್ರದಲ್ಲಿ ಹತ್ತು ಲಕ್ಷ ಜನ ಇದ್ದಾರೆ. ಎಲ್ಲರಿಗೂ ತೊಂದರೆ ಆಗಲಿದೆ. ಅಷ್ಟೇ ಅಲ್ಲ, ದೇಶದ 25 ಸಾವಿರ ಹಳ್ಳಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ’ ಎಂದು ಹೇಳಿದರು.

ಆರ್ಗನೈಜೇಶನ್‌ ಅಧ್ಯಕ್ಷ ಜಿ.ಪೂರ್ಣಚಂದ್ರರಾವ್ ಮಾತನಾಡಿ, ‘ಶಾಮಿಯಾನ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ಹಣ ಬರುವುದಿಲ್ಲ. ಆದರೆ, ಜಿ.ಎಸ್.ಟಿ. ಮಾತ್ರ ಸಮಯಕ್ಕೆ ಸರಿಯಾಗಿ ಭರಿಸಲೇಬೇಕು. ₹50 ಲಕ್ಷದ ವರೆಗೆ ವ್ಯವಹಾರ ಮಾಡುವ ಶಾಮಿಯಾನ ಮಾಲೀಕರಿಗೆ ಶೇ 6ರಷ್ಟು ಜಿ.ಎಸ್.ಟಿ. ಹಾಕಿದರೆ, ₹50 ಲಕ್ಷಕ್ಕಿಂತ ಮೇಲಿನವರಿಗೆ ಶೇ 18ರಷ್ಟು ತೆರಿಗೆ ವಿಧಿಸಿದ್ದಾರೆ. ಇದರಿಂದ ಹೆಚ್ಚಿನ ಹೊರೆ ಬೀಳುತ್ತಿದೆ. ಕೇಂದ್ರ ಕೂಡಲೇ ಅದನ್ನು ತಗ್ಗಿಸಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಡಕರಾಯ ದೇವಸ್ಥಾನದಿಂದ ನಾಗಪ್ಪನ ಕಟ್ಟೆಯ ವರೆಗೆ ಮೆರವಣಿಗೆ ನಡೆಯಿತು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಚಾರ್ಯ ಸ್ವಾಮೀಜಿ, ಧರ್ಮ ಗುರುಗಳಾದ ಕಾಜಿ ಸೈಯದ್ ಮುಸ್ತಾಫ್‌ ಅಹಮ್ಮದ್‌, ಪಾಸ್ಟರ್ ಜೆ.ಪೀಟರ್ ಜೇಮ್ಸ್, ಎನ್.ಕೆ.ಟಿ.ಡಿ.ಡಬ್ಲ್ಯೂ.ಎ. ಸಂಸ್ಥಾಪಕ ಉಪಾಧ್ಯಕ್ಷ ಮೊಹಮ್ಮದ್‌ ಅನೀಫ್ ತಾಜೀಮ್ ತಾರಕ್, ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲ್‍ಫೇರ್ ಆರ್ಗನೈಜೇಶನ್ ಉತ್ತರ ಕರ್ನಾಟಕದ ಅಧ್ಯಕ್ಷ ಕೆ.ನರಸಿಂಹಮೂರ್ತಿ ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಸೋಮಶೇಖರ ಇದ್ದರು.

 

ಪ್ರತಿಕ್ರಿಯಿಸಿ (+)