ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕರ ಗೆಲ್ಲಿಸೋದು ಜನರ ಕರ್ತವ್ಯ: ಎಸ್‌.ಆರ್‌. ಹಿರೇಮಠ

Last Updated 17 ಏಪ್ರಿಲ್ 2019, 12:41 IST
ಅಕ್ಷರ ಗಾತ್ರ

ಹೊಸಪೇಟೆ: ‘ಚುನಾವಣೆಯಲ್ಲಿ ಪ್ರಾಮಾಣಿಕರನ್ನು ಗೆಲ್ಲಿಸುವುದು ಜನರ ಆದ್ಯ ಕರ್ತವ್ಯವಾಗಿದೆ. ಭ್ರಷ್ಟರನ್ನು ಗೆಲ್ಲಿಸಿ, ಭ್ರಷ್ಟಾಚಾರದ ಭಾಗವಾಗಬಾರದು’ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಸಲಹೆ ಮಾಡಿದರು.

ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಎಸ್‌.ಯು.ಸಿ.ಐ. ಅಭ್ಯರ್ಥಿ ಎ. ದೇವದಾಸ್‌ ಪರ ಮತಯಾಚಿಸಿ ಮಾತನಾಡಿದರು.

‘ದೇವದಾಸ್‌ ಅವರು ಕಳೆದ 30 ವರ್ಷಗಳಿಂದ ದುಡಿಯುವ ವರ್ಗದವರು, ದಮನಿತರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಒಂದೇ ಒಂದು ಸಣ್ಣ ಕಪ್ಪು ಚುಕ್ಕೆಯಿಲ್ಲದೆ ಅವರು ಪ್ರಾಮಾಣಿಕರಾಗಿ ಬದುಕುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇಂತಹವರು ಸಂಸತ್ತಿಗೆ ಆರಿಸಿ ಹೋದರೆ ಜನಸಾಮಾನ್ಯರ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲಲು ಸಾಧ್ಯವಾಗುತ್ತದೆ. ಹಾಗಾಗಿ ಮತದಾರರು ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ನಮ್ಮ ದೇಶದಲ್ಲಿ ಬಹಳ ಜನ ಶಿಕ್ಷಣ, ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಮಹಿಳೆಯರು, ಮಕ್ಕಳ ಪರಿಸ್ಥಿತಿಯಂತೂ ಬಹಳ ಗಂಭೀರ ಸ್ವರೂಪದ್ದಾಗಿದೆ. ನೆರೆಯ ದೇಶಗಳಾದ ಶ್ರೀಲಂಕಾ, ನೇಪಾಳದಲ್ಲಿ ನಮಗಿಂತ ಉತ್ತಮ ಸ್ಥಿತಿಯಿದೆ. ‘ಬೇಟಿ ಬಚಾವೋ ಬೇಟಿ ಪಡಾವೋ’ ಹೇಳಿಕೆಗಷ್ಟೇ ಸೀಮಿತವಾಗಿದೆ’ ಎಂದು ಟೀಕಿಸಿದರು.

‘ಅಚ್ಛೆ ದಿನ್‌‘, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’, ‘ಖಾಯೆಂಗೆ, ನ ಖಾನೆ ದೂಂಗಾ’ ಎಂದು ಮೋದಿಯವರು ಭರವಸೆ ನೀಡಿದ್ದರು. ಇಲ್ಲಿಯವರೆಗೆ ಬಡವರಿಗೆ, ರೈತರಿಗೆ ಒಳ್ಳೆಯ ದಿನಗಳು ಬಂದಿಲ್ಲ. ಸ್ವಾಮಿನಾಥನ್‌ ವರದಿ ಕೂಡ ಜಾರಿಗೆ ತಂದಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಲು ಸಾಧ್ಯವಾಗಿಲ್ಲ. ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ನೋಡುತ್ತಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಕೆಲವರನ್ನು ಗುರಿಯಾಗಿಸಲಾಗುತ್ತಿದೆ. ಅದರಲ್ಲೂ ಅಲ್ಪಸಂಖ್ಯಾತರ ವಿರುದ್ಧ ಗುಂಪು ದಾಳಿಗಳು ಹೆಚ್ಚಾಗಿವೆ. ರಫೇಲ್‌ ಯುದ್ಧ ವಿಮಾನ ಒಪ್ಪಂದದಲ್ಲಿ ₹30 ಸಾವಿರ ಕೋಟಿ ಹಗರಣವಾಗಿದೆ’ ಎಂದು ಹೇಳಿದರು.

‘ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಮು ಸಾಮರಸ್ಯ ಹಾಳಾಗಿದೆ. ಸಂವಿಧಾನದ ಬೆನ್ನೆಲುಬು ಮುರಿಯುವ ಕೆಲಸ ನಡೆಯುತ್ತಿದೆ. ಚೌಕಿದಾರ್‌ ಎಂದು ಮೋದಿ ಹೇಳಿಕೊಳ್ಳುತ್ತಾರೆ. ಆದರೆ, ಅವರ ಕಣ್ಣೆದುರಲ್ಲೇ ರಫೇಲ್‌ ಹಗರಣ ನಡೆದಿದೆ. ದಿವಾಳಿಯಾಗಿರುವ ಅನಿಲ್‌ ಅಂಬಾನಿ ಅವರಿಗೆ ₹30 ಸಾವಿರ ಕೋಟಿ ಲಾಭ ಮಾಡಿಕೊಟ್ಟಿದ್ದಾರೆ. ಅವರ ಪಕ್ಷದ ಮುಖಂಡರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣಗಳಿವೆ. ಹೀಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೇ’ ಎಂದು ಪ್ರಶ್ನಿಸಿದರು.

ಎ. ದೇವದಾಸ್‌ ಮಾತನಾಡಿ, ‘ದೇಶದಲ್ಲಿ ಬದಲಾವಣೆ ಬರಬೇಕೆಂದರೆ ಪ್ರಾಮಾಣಿಕರು, ಉತ್ತಮರನ್ನು ಜನ ಗೆಲ್ಲಿಸಬೇಕು. ಚುನಾವಣೆ ಸಂದರ್ಭದಲ್ಲಿ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು’ ಎಂದು ಹೇಳಿದರು.

ಮುಖಂಡರಾದ ಕೆ. ಸೋಮಶೇಖರ್‌, ನಾಗಲಕ್ಷ್ಮಿ, ಟಿ.ಎಂ. ಶಿವಕುಮಾರ, ಎಂ.ಎನ್‌. ಮಂಜುಳಾ, ರಾಧಾಕೃಷ್ಣ ಉಪಾಧ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT