ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದರ್‌–ಬಾಹರ್‌ ಶುರು

ಚುನಾವಣೆಯ ಹೊಸ್ತಿಲಿನಲ್ಲಿ ಮುಖಂಡರಿಂದ ಪಕ್ಷದಿಂದ ಪಕ್ಷಕ್ಕೆ ಜಿಗಿತ
Last Updated 21 ಮಾರ್ಚ್ 2019, 14:37 IST
ಅಕ್ಷರ ಗಾತ್ರ

ಹೊಸಪೇಟೆ: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಈ ಮಧ್ಯೆ ಮುಖಂಡರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುತ್ತಿದ್ದು, ಜಿಲ್ಲೆಯಲ್ಲಿ ಪಕ್ಷಾಂತರದ ಅಂದರ್‌–ಬಾಹರ್‌ ಶುರುವಾಗಿದೆ.

ಎರಡು ದಿನಗಳ ಹಿಂದೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಬಿಜೆಪಿ ಸೇರಿದ್ದಾರೆ. ‘ಕೆಲವೇ ದಿನಗಳಲ್ಲಿ ನಾಗೇಂದ್ರ ಕೂಡ ಕಮಲದ ತೆಕ್ಕೆಗೆ ಬರಲಿದ್ದಾರೆ’ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಹೊಸ ಬಾಂಬ್‌ ಸಿಡಿಸಿದ್ದಾರೆ. ಹೀಗಾಗಿ ದಿನೇ ದಿನೇ ನಡೆಯುತ್ತಿರುವ ಹೊಸ ಬೆಳವಣಿಗೆಗಳಿಂದ ಚುನಾವಣಾ ಕಣ ತೀವ್ರ ಕುತೂಹಲ ಮೂಡಿಸಿದೆ.

ಇನ್ನೊಂದೆಡೆ ನವೆಂಬರ್‌ನಲ್ಲಿ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಪಕ್ಷದಿಂದ ಬಂಡಾಯವೆಂದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಮನೋರೋಗ ತಜ್ಞ ಡಾ. ಟಿ.ಆರ್‌.ಶ್ರೀನಿವಾಸ್‌ ಅವರು ಬುಧವಾರ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಸೇರಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ.ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ನಂತರ, ಶ್ರೀನಿವಾಸ್‌ ಅವರು ತಮ್ಮ ಬೆಂಬಲಿಗರೊಂದಿಗೆ ‘ಕೈ’ ಹಿಡಿದು ಚುನಾವಣೆಯ ಹೊಸ್ತಿಲಿನಲ್ಲಿ ಆ ಪಕ್ಷಕ್ಕೆ ಬಲ ತಂದುಕೊಟ್ಟಿದ್ದಾರೆ. ಅನೇಕ ವರ್ಷ ಬಿಜೆಪಿಯಲ್ಲಿದ್ದ ಶ್ರೀನಿವಾಸ್‌ ಅವರು ವೈದ್ಯರಾಗಿ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿರುವ ಅವರು ಸಜ್ಜನ ರಾಜಕಾರಣಿ ಎಂದೇ ಜನರ ಮಧ್ಯೆ ಗುರುತಿಸಿಕೊಂಡಿದ್ದಾರೆ.

‘ಇನ್ನು ಕೆಲ ಬಿಜೆಪಿ ಮುಖಂಡರು ಪಕ್ಷ ತೊರೆಯುವ ಚಿಂತನೆಯಲ್ಲಿದ್ದು, ಶೀಘ್ರವೇ ಕಾಂಗ್ರೆಸ್‌ ತೆಕ್ಕೆಗೆ ಬರಲಿದ್ದಾರೆ. ಉಪಚುನಾವಣೆಗಿಂತ ಹೆಚ್ಚಿನ ಮತಗಳ ಅಂತರದಿಂದ ಉಗ್ರಪ್ಪನವರು ಗೆಲ್ಲುವುದು ಖಚಿತ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಹೈದರಾಬಾದ್‌ ಕರ್ನಾಟಕದ ಕಾಂಗ್ರೆಸ್‌ ಐ.ಟಿ. ವಿಭಾಗದ ಉಸ್ತುವಾರಿ ನಿಂಬಗಲ್‌ ರಾಮಕೃಷ್ಣ.

ಸಭೆ:ಚುನಾವಣೆ ಗೆಲ್ಲಲ್ಲು ಅನುಸರಿಸಬೇಕಾದ ರಣತಂತ್ರಗಳ ಕುರಿತು ಚರ್ಚಿಸಲು ಇದೇ 24ರಂದು ಸಂಡೂರಿನಲ್ಲಿ ಕಾಂಗ್ರೆಸ್‌ ಸಭೆ ಕರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಸಂಸದರಾದ ನಾಸೀರ್‌ ಹುಸೇನ್‌, ವಿ.ಎಸ್‌. ಉಗ್ರಪ್ಪ, ಪಕ್ಷದ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸುವರು.

ಪಕ್ಷ ತೊರೆಯುತ್ತಾರೆ ಎಂಬ ಮಾತು ಕೇಳಿ ಬರುತ್ತಿರುವ ಶಾಸಕ ಬಿ. ನಾಗೇಂದ್ರ ಆ ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಇಲ್ಲವೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಜೈಲು ಸೇರಿದ್ದಾರೆ. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆದಿರುವ ಶಾಸಕ ಆನಂದ್‌ ಸಿಂಗ್‌ ಚೇತರಿಸಿಕೊಳ್ಳುತ್ತಿದ್ದು, ಅವರು ಭಾಗವಹಿಸುವುದು ಇನ್ನಷ್ಟೇ ಖಚಿತವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT