ಬುಧವಾರ, ನವೆಂಬರ್ 20, 2019
21 °C
ಅ. 21ರಂದು ಮತ ಚಲಾವಣೆ

ವಿಜಯನಗರ ಕ್ಷೇತ್ರ ಉಪಚುನಾವಣೆ | ಸೆ.23ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

Published:
Updated:

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಸೋಮವಾರದಿಂದ (ಸೆ.23) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ನಗರದ ಸಂಡೂರು ರಸ್ತೆಯ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸ ಬಯಸುವವರು ನಾಮಪತ್ರ ಸಲ್ಲಿಕೆ ಮಾಡಬಹುದು.

ಸೆ. 30ರ ವರೆಗೆ ನಾಮಪತ್ರ ಸಲ್ಲಿಸಲು ಕಾಲಾವಕಾಶ ಇರುವುದರಿಂದ ಮೊದಲ ದಿನ ನಾಮಪತ್ರ ಸಲ್ಲಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ನಾಮಪತ್ರ ಹಿಂಪಡೆಯಲು ಅ. 3 ಕೊನೆಯ ದಿನಾಂಕವಾಗಿದೆ. 21ರಂದು ಚುನಾವಣೆ ನಡೆಯಲಿದ್ದು, 24ಕ್ಕೆ ಫಲಿತಾಂಶ ಹೊರಬರಲಿದೆ.

ಚುನಾವಣೆಯಲ್ಲಿ ಅಕ್ರಮ ತಡೆಗೆ ತಾಲ್ಲೂಕಿನ ಐದು ಕಡೆಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಟಿ.ಬಿ. ಡ್ಯಾಂ ವೃತ್ತ, ಹರಿಹರ ರಸ್ತೆಯ ನ್ಯಾಷನಲ್‌ ಕಾಲೇಜು, ಸಂಡೂರು ರಸ್ತೆಯ ಎಲ್‌.ಎಫ್‌.ಎಸ್‌. ಕಾಲೇಜು, ಇಂಗಳಗಿ ಕ್ರಾಸ್‌ ಹಾಗೂ ಬುಕ್ಕಸಾಗರ ಬಳಿ ಚೆಕ್‌ಪೋಸ್ಟ್‌ಗಳು ಸೋಮವಾರ ತಲೆ ಎತ್ತಲಿವೆ.

’ಹಿಂದಿನ ಚುನಾವಣೆಗಿಂತ ಈ ಸಲ ಒಂದು ಹೆಚ್ಚುವರಿ ಚೆಕ್‌ಪೋಸ್ಟ್‌ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಸೋಮವಾರ ಸಂಜೆಯೊಳಗೆ ಚೆಕ್‌ ಪೋಸ್ಟ್‌ ನಿರ್ಮಿಸಿ, ಎಲ್ಲ ವಾಹನಗಳ ತಪಾಸಣೆ ನಡೆಸಲಾಗುವುದು. ಚುನಾವಣಾ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಶ್ರಮಿಸುವರು‘ ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

’ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯ ಮತದಾರರ ಪಟ್ಟಿ ಪ್ರಕಾರ ಚುನಾವಣೆ ನಡೆಯಲಿದೆ. ವಿಜಯನಗರ ಕ್ಷೇತ್ರದಲ್ಲಿ ಒಟ್ಟು 2,32,276 ಜನ ಮತದಾರರಿದ್ದಾರೆ‘ ಎಂದು ವಿವರಿಸಿದರು. 

ಪ್ರತಿಕ್ರಿಯಿಸಿ (+)