ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40ಕ್ಕೂ ಅಧಿಕ ಗೂಡಂಗಡಿ ತೆರವು

ರಸ್ತೆ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದವರಿಗೆ ಬೇರೆಡೆ ಸ್ಥಳಾವಕಾಶದ ಭರವಸೆ
Last Updated 18 ನವೆಂಬರ್ 2018, 11:07 IST
ಅಕ್ಷರ ಗಾತ್ರ

ಹೊಸಪೇಟೆ: ನಗರಸಭೆ, ಸಂಚಾರ ಪೊಲೀಸ್‌ ಹಾಗೂ ತಾಲ್ಲೂಕು ಆಡಳಿತದಿಂದ ಭಾನುವಾರ ನಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ರಸ್ತೆ ಅತಿಕ್ರಮಿಸಿಕೊಂಡು ನಡೆಸುತ್ತಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು.

ಇಲ್ಲಿನ ತಾಲ್ಲೂಕು ಕಚೇರಿ, ಮೀರ್‌ ಆಲಂ ಚಿತ್ರ ಮಂದಿರ ಹಾಗೂ ಮಾರುಕಟ್ಟೆ ಬಳಿ ಮುಖ್ಯರಸ್ತೆ ಅತಿಕ್ರಮಣ ಮಾಡಿಕೊಂಡು ನಡೆಸುತ್ತಿದ್ದ 40ಕ್ಕೂ ಅಧಿಕ ಗೂಡಂಗಡಿಗಳನ್ನು ತೆರವು ಮಾಡಲಾಯಿತು.

ಈ ವೇಳೆ ತಾಲ್ಲೂಕು ಕಚೇರಿ ಬಳಿ ಗೂಡಂಗಡಿ ನಡೆಸುವವರು ಸಭೆ ಸೇರಿದರು. ಜೆ.ಡಿ.ಎಸ್‌. ಮುಖಂಡ ದೀಪಕ್‌ ಸಿಂಗ್‌ ಅಲ್ಲಿಗೆ ಬಂದು ಅವರ ಗೋಳು ಕೇಳಿದರು. ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಗರಸಭೆ ಪೌರಾಯುಕ್ತ ವಿ. ರಮೇಶ್‌ ಅವರೊಂದಿಗೆ ಚರ್ಚಿಸಿದರು.

‘ವಿಶ್ವ ಪಾರಂಪರಿಕ ತಾಣ ಹಂಪಿ ನಗರದಿಂದ ಸನಿಹದಲ್ಲೇ ಇದೆ. ನಿತ್ಯ ದೇಶ–ವಿದೇಶಗಳಿಂದ ನೂರಾರು ಜನ ಬರುತ್ತಾರೆ. ಬಸ್‌ ನಿಲ್ದಾಣ, ಮುಖ್ಯರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ರಸ್ತೆ ಅತಿಕ್ರಮಿಸಿಕೊಂಡು ಗೂಡಂಗಡಿಗಳನ್ನು ನಡೆಸಲಾಗುತ್ತಿತ್ತು. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿತ್ತು. ಸಾರ್ವಜನಿಕರಿಂದ ದೂರುಗಳು ಬಂದ ಕಾರಣ ಅವುಗಳನ್ನು ತೆರವುಗೊಳಿಸಲಾಗಿದೆ. ಎಲ್ಲರಿಗೂ ಬೇರೆಡೆ ವ್ಯಾಪಾರಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು’ ಎಂದು ಎಚ್‌. ವಿಶ್ವನಾಥ್‌ ಅವರು ಭರವಸೆ ನೀಡಿದ ನಂತರ ತೆರವಿಗೆ ವ್ಯಾಪಾರಿಗಳು ಸಹಕರಿಸಿದರು.

‘ಗೂಡಂಗಡಿಗಳು ಸ್ವಚ್ಛತೆಗೆ ಆದ್ಯತೆ ಕೊಡುತ್ತಿರಲಿಲ್ಲ. ತಾತ್ಕಾಲಿಕವಾಗಿ ವ್ಯಾಪಾರ ನಡೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಕೆಲವರು ಸ್ಲ್ಯಾಬ್‌ ಹಾಕಿದ್ದರಿಂದ ಚರಂಡಿ ಸ್ವಚ್ಛಗೊಳಿಸಲು ಆಗುತ್ತಿರಲಿಲ್ಲ. ತಾಲ್ಲೂಕು ಕಚೇರಿಯ ಕಾಂಪೌಂಡ್‌ ಸುತ್ತ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದರು. ರೋಟರಿ ವೃತ್ತದಲ್ಲಿ ಕೆಲವರು ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದರು. ವಾಹನ ದಟ್ಟಣೆ ಹಾಗೂ ಜನರಿಗೆ ಓಡಾಡಲು ಸಮಸ್ಯೆಯಾಗುತ್ತಿತ್ತು’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ಯಾರಿಗೂ ಕಿರಿಕಿರಿ ಕೊಡುವುದು ನಮ್ಮ ಉದ್ದೇಶವಲ್ಲ. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ. ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿರುವುದರಿಂದ ತೆರವು ಕೆಲಸ ಕೈಗೊಳ್ಳಲಾಗಿದೆ. ಬೇರೆಡೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ವಿ. ರಮೇಶ್‌ ತಿಳಿಸಿದರು.

ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಯ್ಯನಗೌಡ ಪಾಟೀಲ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT