ಗುರುವಾರ , ಏಪ್ರಿಲ್ 15, 2021
29 °C
ವಿಜಯನಗರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಚಂದ್ರಶೇಖರ್‌ ಶಾಸ್ತ್ರಿ ಹೇಳಿಕೆ

ಸಮಾನತೆ ಶರಣರ ಆತ್ಮದಲ್ಲಿಯೇ ಅಡಗಿತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಸಂಪದದಲ್ಲಿ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಮಾತನಾಡಿದರು

ಹೊಸಪೇಟೆ: ‘ವಚನಗಳು ಶರಣರ ಅನುಭವದಿಂದ ರಚನೆಯಾಗಿವೆ. ಅವರು ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿರಲಿಲ್ಲ. ನಿತ್ಯ ಕಾಯಕ ಮಾಡುತ್ತಲೇ ಉತ್ಕೃಷ್ಟವಾದ ವಚನಗಳನ್ನು ರಚಿಸಿ, ಸಮಾಜಕ್ಕೆ ಹೊಸ ದಿಕ್ಕು ತೋರಿಸಿದ್ದರು’ ಎಂದು ವಿಜಯನಗರ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಚಂದ್ರಶೇಖರ್‌ ಶಾಸ್ತ್ರಿ ತಿಳಿಸಿದರು.

ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಸೋಮವಾರ ರಾತ್ರಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಸಂಪದ–1,142 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ಮಾದಾರ ಚೆನ್ನಯ್ಯ, ಸೂಳೆ ಸಂಕವ್ವ, ಡೋಹರ ಕಕ್ಕಯ್ಯ ಅವರು ಸಮಾಜದಲ್ಲಿ ಅತ್ಯಂತ ಕೆಳಸ್ತರದಲ್ಲಿ ಇದ್ದರು. ಬಸವಣ್ಣನವರು ಅವರಿಗೆ ಧಾರ್ಮಿಕ ಸಂಸ್ಕಾರ ನೀಡಿ, ಗೌರವದ ಬದುಕು ಕಲ್ಪಿಸಿಕೊಟ್ಟಿದ್ದರು. ಅವರು ಪೂರ್ವಜರಿಂದ ಬಂದ ಕಾಯಕವನ್ನು ಮುಂದುವರಿಸುತ್ತಲೇ ವಚನಗಳನ್ನು ರಚಿಸಿ, ಮಹಾಜ್ಞಾನಿಗಳು ಎನಿಸಿಕೊಂಡರು’ ಎಂದರು.

‘ಶರಣರು ಅವರಿಗಾಗಿ, ಅವರ ಕುಟುಂಬಕ್ಕಾಗಿ ಬದುಕಲಿಲ್ಲ. ಅವರು ಸಮಾಜದ ಒಳಿತಿಗಾಗಿ ಬದುಕಿದ್ದರು. ಸಮಾನತೆ ಎಂಬುವುದು ಅವರ ಆತ್ಮದಲ್ಲಿಯೇ ಇತ್ತು. ವೇದ, ಆಗಮಗಳು ಸಂಸ್ಕೃತ ಭಾಷೆಯಲ್ಲಿದ್ದವು. ಅವುಗಳು ಜನಸಾಮಾನ್ಯರಿಗೆ ಅರ್ಥವಾಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿದರು. ಸಮಾಜದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದ್ದರು’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಪ್ರತಿಯೊಬ್ಬರೂ ಅಧಿಕಾರದ ಆಲೋಚನೆ ಮಾಡುತ್ತಿದ್ದಾರೆ. ಅವರ ಕರ್ತವ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಸಮುದಾಯದ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ. ಇದರಿಂದಾಗಿ ಸಮಾಜದಲ್ಲಿ ಸಾಮರಸ್ಯ, ಭಾವೈಕ್ಯತೆ ಮೂಡುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು. 

ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ದೇಶಿಕರು, ಕೊಟ್ಟೂರು ಸ್ವಾಮಿ ಕಲ್ಯಾಣ ಕೇಂದ್ರದ ತಾಲ್ಲೂಕು ಅಂಗ ಸಂಸ್ಥೆಗಳ ಕಾರ್ಯದರ್ಶಿ ಕೆ. ಮಹಾಂತೇಶ, ಖಜಾಂಚಿ ವಿಜಯ ಎಂ. ಸಿಂಧಗಿ, ಸಿ.ಎಸ್‌. ಶರಣಯ್ಯ, ಕೆ.ಕೆ. ಮಂಜುನಾಥ ಇದ್ದರು. ಜಯಣ್ಣ ಅಕ್ಕಸಾಲಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವೆಂಕಟೇಶ ಚಿತ್ರಗಾರ ತಬಲ ಸಾಥ್‌ ನೀಡಿದರೆ, ಪೂಜಾ ವಚನಗಳನ್ನು ಹಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು