ಎಲ್ಲರ ಅಚ್ಚುಮೆಚ್ಚಿನ ‘ಸಖಿ’

ಮಂಗಳವಾರ, ಮಾರ್ಚ್ 26, 2019
22 °C
ಯುವಜನ, ಮಹಿಳೆಯರ ಶ್ರೇಯಸ್ಸಿಗೆ ದುಡಿಯುತ್ತಿರುವ ಸಂಸ್ಥೆಗೆ ಪ್ರಶಸ್ತಿ

ಎಲ್ಲರ ಅಚ್ಚುಮೆಚ್ಚಿನ ‘ಸಖಿ’

Published:
Updated:
Prajavani

ಹೊಸಪೇಟೆ: ಕೂಲಿ ಕಾರ್ಮಿಕರ ಮಕ್ಕಳು ಶಾಲೆಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ. ಅವರು ಓದಿ ಉನ್ನತ ಸ್ಥಾನಕ್ಕೆ ಹೋಗಲು ಎಲ್ಲ ರೀತಿಯ ನೆರವು ಕೊಡುತ್ತಾಳೆ. ಇದು ಎಲ್ಲರ ಅಚ್ಚುಮೆಚ್ಚಿನ ‘ಸಖಿ’ ಮಾಡುತ್ತಿರುವ ಕೆಲಸ.

ಹೌದು, ಇದು ಇಲ್ಲಿನ ಅರವಿಂದ ನಗರದ ‘ಸಖಿ’ ಸಂಸ್ಥೆ ಕುರಿತ ಪೀಠಿಕೆ. ಕೂಲಿ ಕಾರ್ಮಿಕರು, ಕೊಳೆಗೇರಿ ವಾಸಿಗಳು, ದೇವದಾಸಿಯರು, ಗ್ರಾಮೀಣ ಭಾಗದ ಬಡ ರೈತರ ಮಕ್ಕಳಿಗೆ ಶಿಕ್ಷಣ ಕೊಟ್ಟು, ಅವರನ್ನು ಮುಖ್ಯವಾಹಿನಿಗೆ ತರಲು ಅವಿರತವಾಗಿ ಶ್ರಮಿಸುತ್ತಿದೆ ‘ಸಖಿ’ ಸಂಸ್ಥೆ. 

ವಿವಿಧ ಕಾರಣಗಳಿಗಾಗಿ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಗುರುತಿಸಿ, ಪುನಃ ಅವರನ್ನು ಶಾಲೆಗೆ ಸೇರಿಸುವ ಕೆಲಸ ಮಾಡುತ್ತಿದೆ. ಬಡವರ ಮಕ್ಕಳಿಗೆ ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿ ವರೆಗೆ ವ್ಯಾಸಂಗ ಮಾಡಲು ಅಗತ್ಯ ನೆರವು ಕಲ್ಪಿಸುತ್ತಿದೆ.

ಶಾಲಾ–ಕಾಲೇಜಿನ ಶುಲ್ಕ ಭರಿಸುವುದು, ಕಂಪ್ಯೂಟರ್‌ ಜ್ಞಾನ, ಇಂಗ್ಲಿಷ್‌ ಸಂವಹನ ಕಲೆ, ವೃತ್ತಿಪರ ಕೋರ್ಸ್‌ಗಳಿಗೆ ಸಿದ್ಧತೆ, ಮನೆಪಾಠ, ಜೀವನ ಕೌಶಲ ಮಾರ್ಗದರ್ಶನ ಶಿಬಿರಗಳ ಮೂಲಕ ಮಕ್ಕಳಿಗೆ ತರಬೇತಿ ನೀಡಿ, ಆಧುನಿಕ ಪ್ರಪಂಚದ ಸ್ಪರ್ಧೆಗೆ ಅಣಿಗೊಳಿಸುತ್ತಿದೆ.

ತಾಲ್ಲೂಕಿನ ಆರು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 3,255 ಮಹಿಳೆಯರಿಗೆ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಪಿಂಚಣಿ ಯೋಜನೆ, ಸರ್ಕಾರದ ಸವಲತ್ತುಗಳ ಕುರಿತಂತೆ ಅರಿವು ಮೂಡಿಸುತ್ತಿದೆ. 500 ದೇವದಾಸಿ ಕುಟುಂಬದವರಿಗೆ ಸರ್ಕಾರದ ಸೌಲಭ್ಯಗಳನ್ನು ಸಿಗುವಂತೆ ಮಾಡಿದೆ. ಅವರ ಮಕ್ಕಳಿಗೆ ಐ.ಎ.ಎಸ್‌., ಕೆ.ಎ.ಎಸ್‌. ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳಿಸುತ್ತಿದೆ.

2007ರಲ್ಲಿ ಆರಂಭವಾದ ಸಂಸ್ಥೆಯ ಚಟುವಟಿಕೆಗಳು ದಶದಿಕ್ಕಿಗೆ ಪಸರಿಸಿವೆ. ಸಂಸ್ಥಾಪಕ ನಿರ್ದೇಶಕಿ ಎಂ. ಭಾಗ್ಯಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ 32 ಜನ ಹಗಲಿರುಳು ಬೆವರು ಹರಿಸಿ, ಸಂಸ್ಥೆಯನ್ನು ಬೆಳೆಸಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಿಂದ ಅವರ ಚಟುವಟಿಕೆ ಕೃಷಿ ಸೇರಿದಂತೆ ಅನ್ಯ ಕ್ಷೇತ್ರಕ್ಕೂ ವಿಸ್ತರಣೆಗೊಂಡಿದೆ. ಅದನ್ನು ಭಾಗ್ಯಲಕ್ಷ್ಮಿ ಅವರೇ ವಿವರಿಸಿದ್ದಾರೆ.

‘ರೈತರ ನೆರವಿನೊಂದಿಗೆ ಸಮಗ್ರ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಅದಕ್ಕೆ ‘ಕಣಜ’ ಎಂದು ಹೆಸರಿಡಲಾಗಿದೆ. ಪರಿಸರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮ ಬೆಳೆಸಲು ‘ಫ್ರೆಂಡ್ಸ್‌ ಹಂಪಿ ಸಾಥಿ’ ಸಂಘ ಕಟ್ಟಿಕೊಂಡಿದ್ದೇವೆ. ‘ಯುವಧ್ವನಿ’ ಮೂಲಕ ಯುವಕರ ಹಕ್ಕುಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಅದರಲ್ಲಿ 539 ಯುವಕ/ಯುವತಿಯರು ಇದ್ದಾರೆ. ‘ರಂಗಸಖಿ’ ಕಲಾತಂಡ ನಾಟಕಗಳ ಮೂಲಕ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಅದರಲ್ಲಿ 26 ಜನ ಸಕ್ರಿಯರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಹೀಗೆ ‘ಸಖಿ’ಯ ವಿವಿಧ ಸಮಾಜಮುಖಿ ಕೆಲಸವನ್ನು ಗುರುತಿಸಿ, ಸರ್ಕಾರವು ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !