ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ, ಮನಗಳಲ್ಲಿ ಬೆನಕನ ಜಪ

ಶ್ರದ್ಧಾ, ಭಕ್ತಿಯೊಂದಿಗೆ ಬೆಳಿಗ್ಗೆ ಗಣಪನ ಪ್ರತಿಷ್ಠಾಪನೆ, ಸಂಜೆ ವಿಸರ್ಜನೆ
Last Updated 3 ಸೆಪ್ಟೆಂಬರ್ 2019, 9:48 IST
ಅಕ್ಷರ ಗಾತ್ರ

ಹೊಸಪೇಟೆ: ಗಣೇಶ ಚತುರ್ಥಿ ಪ್ರಯುಕ್ತ ಸೋಮವಾರ ನಗರ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಶ್ರದ್ಧಾ, ಭಕ್ತಿಯಿಂದ ಗೌರಿ, ಗಣೇಶನ ಪ್ರತಿಷ್ಠಾಪಿಸಿ ಜನ ಪೂಜೆ ಮಾಡಿದರು.

ಗೌರಿ, ಗಣಪನ ಪ್ರತಿಷ್ಠಾಪನೆಗೆ ಮನೆಗಳಲ್ಲಿ ವಿಶೇಷ ರೀತಿಯಲ್ಲಿ ಮಂಟಪ ಮಾಡಿ, ಅದನ್ನು ಹೂ, ತೋರಣ, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಮಡಿ ಪೂಜೆ ಮಾಡಿ, ಕುಟುಂಬ ಸದಸ್ಯರೆಲ್ಲ ಮಾರುಕಟ್ಟೆಗೆ ಹೋಗಿ ಅವರಿಗಿಷ್ಟವಾದ ಗಣಪನ ಮೂರ್ತಿ ಖರೀದಿಸಿ, ಜಯಘೋಷ ಹಾಕುತ್ತ ಮನೆ ಕಡೆಗೆ ಹೆಜ್ಜೆ ಹಾಕಿದರು.

ಕೆಲವರು ಬರಿಗಾಲಲ್ಲಿ ತಲೆ ಮೇಲೆ ಗಣಪನನ್ನು ಹೊತ್ತು ಸಾಗಿದರೆ, ಕೆಲವರು ದ್ವಿಚಕ್ರ ವಾಹನ, ಆಟೊ, ಕಾರುಗಳಲ್ಲಿ ಹೋದರು. ಗಣೇಶ ಮಂಡಳಿಯವರು ಟ್ರ್ಯಾಕ್ಟರ್‌, ಲಾರಿಗಳಲ್ಲಿ ದೊಡ್ಡ ಗಣಪನನ್ನು ತೆಗೆದುಕೊಂಡು ಹೋದರು. ಎಲ್ಲರೂ ಹಣೆಗೆ ತಿಲಕ, ಕೇಸರಿ ವರ್ಣದ ರುಮಾಲು ಹಾಕಿಕೊಂಡಿದ್ದರು. ಭಗವಾ ಧ್ವಜಗಳು ರಾರಾಜಿಸುತ್ತಿದ್ದವು. ‘ಗಣಪತಿ ಬೊಪ್ಪ ಮೊರಿಯಾ’ ಎಂದು ಜಯಘೋಷ ಹಾಕಿದರು. ಹೀಗೆ ನಗರದ ಪ್ರಮುಖ ರಸ್ತೆಗಳಲೆಲ್ಲ ಗಣಪನ ಆಕ್ರಮಿಸಿಕೊಂಡಿದ್ದ. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಇಡೀ ನಗರ ಗಣೇಶಮಯವಾಗಿತ್ತು.

ಗೌರಿ, ಗಣೇಶನಿಗೆ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿ, ಮನೆ ಮಂದಿಯೆಲ್ಲ ಹಬ್ಬದೂಟ ಮಾಡಿದರು. ಇನ್ನು ಗಣೇಶ ಮಂಡಳಿಯವರು ಗಣೇಶ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸುವವರೆಗೆ ಮಧ್ಯಾಹ್ನ ದಾಟಿತ್ತು. ವಿವಿಧ ಕಡೆಗಳಿಂದ ಜನ ಬಂದು ದೇವರ ದರ್ಶನ ಪಡೆದುಕೊಂಡರು.

ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ಜನ ಗಣಪನ ಮೂರ್ತಿ ಹಿಡಿದುಕೊಂಡು ತುಂಗಭದ್ರಾ ಜಲಾಶಯದ ಮೇಲ್ಮಟ್ಟದ ಕಾಲುವೆ, ಕೆಳಮಟ್ಟದ ಕಾಲುವೆಗಳ ಕಡೆ ಹೆಜ್ಜೆ ಹಾಕಿದರು. ಮನೆಯಿಂದ ಕಾಲುವೆಗೆ ಹೋಗುವವರೆಗೆ ಗಣಪನಿಗೆ ಜೈಕಾರ ಹಾಕುತ್ತ ಸಾಗಿದರು. ಕೆಲವರು ವಾಹನಗಳಲ್ಲಿ ಧ್ವನಿವರ್ಧಕ ಅಳವಡಿಸಿದ್ದರು. ಸಂಗೀತಕ್ಕೆ ಹೆಜ್ಜೆ ಹಾಕುತ್ತ ತೆರಳಿದರು. ಕಾಲುವೆ ಬಳಿ ಕೊನೆಯದಾಗಿ ಪೂಜೆ ನೆರವೇರಿಸಿ, ಭಕ್ತಿ ಭಾವದಿಂದ ಗಣಪನ ಮೂರ್ತಿಗಳ ವಿಸರ್ಜನೆ ಮಾಡಿದರು. ಸಂಜೆ ಆರಂಭವಾದ ವಿಸರ್ಜನೆ ಪ್ರಕ್ರಿಯೆ, ತಡರಾತ್ರಿ ವರೆಗೆ ಮುಂದುವರೆದಿತ್ತು.

ಕಾಲುವೆಯ ಸುತ್ತಮುತ್ತ ನಗರಸಭೆಯಿಂದ ವಿದ್ಯುದ್ದೀಪ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪೊಲೀಸರು, ಗೃಹರಕ್ಷಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸ್ಥಳದಲ್ಲಿದ್ದರು. ರಾತ್ರಿಯಿಡೀ ಪೊಲೀಸರು ಗಸ್ತು ತಿರುಗುವುದು ಕಂಡು ಬಂತು. ಮೊದಲ ದಿನ ಮನೆಗಳಲ್ಲಿ ಕೂರಿಸಿದ್ದ ಗಣಪನ ಮೂರ್ತಿಗಳನ್ನು ಹೆಚ್ಚಾಗಿ ವಿಸರ್ಜಿಸಲಾಯಿತು. ಮೂರನೇ ಹಾಗೂ ಐದನೇ ದಿನ ಗಣೇಶ ಮಂಡಳಿಯವರು ಮೂರ್ತಿಗಳ ವಿಸರ್ಜನೆ ಮಾಡುವರು.

ತಾಲ್ಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿ, ಸಂಕ್ಲಾಪುರ, ಕಾರಿಗನೂರು, ಪಾಪಿನಾಯಕನಹಳ್ಳಿ, ನಾಗೇನಹಳ್ಳಿ, ಬಸವನದುರ್ಗ ಸೇರಿದಂತೆ ಹಲವೆಡೆ ಗಣೇಶ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT