ಹಲ್ಲೆ ನಡೆಸಿ ಪತಿಯ ಕೊಂದ ಅಬಕಾರಿ ಅಧಿಕಾರಿಗಳು: ಆರೋಪ; ಐವರ ವಿರುದ್ಧ ಪತ್ನಿ ದೂರು

ಸೋಮವಾರ, ಏಪ್ರಿಲ್ 22, 2019
33 °C

ಹಲ್ಲೆ ನಡೆಸಿ ಪತಿಯ ಕೊಂದ ಅಬಕಾರಿ ಅಧಿಕಾರಿಗಳು: ಆರೋಪ; ಐವರ ವಿರುದ್ಧ ಪತ್ನಿ ದೂರು

Published:
Updated:

ಬಳ್ಳಾರಿ: ‘ಮದ್ಯ ಮಾರಾಟ ಮಾಡದೇ ಇದ್ದರೂ, ಹಾಗೆಂದು ಆರೋಪಿಸಿ ನನ್ನ ಪತಿಯನ್ನು ವಾಹನದಲ್ಲಿ ಬಲವಂತವಾಗಿ ಕುಳ್ಳಿರಿಸಿಕೊಂಡು ಹೋದ ಅಬಕಾರಿ ಪೊಲೀಸರು, ಅವರ ಮೇಲೆ ಹಲ್ಲೆ ನಡೆಸಿ, ವಾಹನದಿಂದ ಕೆಳಕ್ಕೆ ನೂಕಿ ಕೊಂದಿದ್ದಾರೆ’ ಎಂದು ತಾಲ್ಲೂಕಿನ ಹಲಕುಂದಿ ಗ್ರಾಮದ ಗೃಹಿಣಿ ಕಮಲಾಬಾಯಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

‘ಗುರುವಾರ ಸಂಜೆ 6 ಗಂಟೆಯ ವೇಳೆಯಲ್ಲಿ ಗ್ರಾಮದ ನಮ್ಮ ಮನೆ ಬಳಿಗೆ ಬಂದ ಪೊಲೀಸರು, ನನ್ನ ಮತ್ತು ನನ್ನ ಮಕ್ಕಳ ಮುಂದೆಯೇ ಪತಿಯ ಜಾತಿನಿಂದನೆ ಮಾಡಿ, ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ಎಳೆದೊಯ್ದರು. ಬಿಡಿಸಿಕೊಳ್ಳಲು ಹೋದ ನನಗೆ ಮತ್ತು ನನ್ನ ಮಗಳಿಗೂ ಲಾಠಿಯಿಂದ ಹೊಡೆದರು. ನಂತರ ಅಂಬೇಡ್ಕರ್‌ ಕಾಲೊನಿಯ ರೈಲ್ವೆ ಗೇಟ್‌ ಬಳಿ ವಾಹನ ನಿಲ್ಲಿಸಿ ಪತಿಯನ್ನು ಹೊರಕ್ಕೆ ದಬ್ಬಿದರು. ಆಗ ಪತಿ ಪ್ರಜ್ಞಾಹೀನರಾಗಿದ್ದು, ತಲೆಯ ಹಿಂಬದಿಯಿಂದ ರಕ್ತಸೋರುತ್ತಿತ್ತು’ ಎಂದು ಆರೋಪಿಸಿದ್ದಾರೆ.

‘ಪತಿಯನ್ನು ವಿಮ್ಸ್‌ ಆಸ್ಪತ್ರೆಗೆ ಕರೆತಂದಾಗ, ವೈದ್ಯರು, ಪತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಈ ದುರ್ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

ಪ್ರತಿಭಟನೆ: ಘಟನೆ ಬಳಿಕ, ಕಮಲಾಬಾಯಿ ಮತ್ತು ಸಂಬಂಧಿಕರು, ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲು ಅವಕಾಶ ಕೊಡದೆ ಪ್ರತಿಭಟನೆ ನಡೆಸಿದರು. ರಾತ್ರಿ 10.30 ಗಂಟೆಯಾದರೂ ದೂರು ದಾಖಲಾಗಿರಲಿಲ್ಲ.

ಎ.ಸಿ.ಭೇಟಿ: ಶವಾಗಾರಕ್ಕೆ ಶುಕ್ರವಾರ ಭೇಟಿ ನೀಡಿದ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ಕಮಲಾಬಾಯಿ ಅವರಿಗೆ ಸಾಂತ್ವನ ಹೇಳಿದರು. ಅವರ ಕುಟುಂಬಕ್ಕೆ ₨ 4 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗುವುದು. ಅವರ ಮನೆಯ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲಾಗುವುದು. ಅದಾಗದಿದ್ದರೆ, ಕಮಲಾಬಾಯಿಯವರಿಗೆ ಅವರು ಬದುಕಿರುವವರೆಗೂ ಮಾಸಿಕ ₨7.5 ಸಾವಿರ ಪಿಂಚಣಿ ನೀಡುವುದಾಗಿ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯನ್ನು ವಾಪಸು ಪಡೆದರು.

* ತನಿಖೆ ಆರಂಭವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ, ಸಾವು ಹೇಗಾಯಿತೆಂಬುದು ಗೊತ್ತಾಗಲಿದೆ. ಆರೋಪಿ ಅಧಿಕಾರಿಗಳು ಯಾರು ಎಂಬುದನ್ನು ಶೀಘ್ರ ಪತ್ತೆ ಮಾಡುತ್ತೇವೆ.

–ಎಸ್ಪಿ ಲಕ್ಷ್ಮಣ ಬ ನಿಂಬರಗಿ 

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !