ಹಂಪಿ ಉತ್ಸವ: ದರ್ಶನ್‌ ನೋಡಿ ಹುಚ್ಚೆದ್ದು ಕುಣಿದ ಜನ

ಮಂಗಳವಾರ, ಮಾರ್ಚ್ 19, 2019
28 °C
ಸಂಪೂರ್ಣ ಭದ್ರತಾ ವೈಫಲ್ಯ; ವೇದಿಕೆ–ಗಣ್ಯರ ಗ್ಯಾಲರಿ ನುಗ್ಗಿದ ಯುವಕರು; ಜನ ಅಸಮಾಧಾನ

ಹಂಪಿ ಉತ್ಸವ: ದರ್ಶನ್‌ ನೋಡಿ ಹುಚ್ಚೆದ್ದು ಕುಣಿದ ಜನ

Published:
Updated:

ಹೊಸಪೇಟೆ: ಶನಿವಾರ ರಾತ್ರಿ ಹಂಪಿ ಉತ್ಸವದ ಪ್ರಧಾನ ವೇದಿಕೆಯಲ್ಲಿ ನಟ ದರ್ಶನ್‌ ಬರುತ್ತಿದ್ದಂತೆ ಜನ ಹುಚ್ಚೆದು ಕುಣಿದರು.

ಎರಡು ಕೈಮುಗಿದು ದರ್ಶನ್‌ ವೇದಿಕೆಗೆ ಬರುತ್ತಿದ್ದಂತೆ ಯುವಕರ ಸಂಭ್ರಮದ ಮೇರೆ ಮೀರಿತ್ತು. ಯುವಕರು ಶಿಳ್ಳೆ, ಕೇಕೆ ಹೊಡೆದರು.

ಯುವಕನೊಬ್ಬ ಪೊಲೀಸರನ್ನು ಬೇಧಿಸಿ, ವೇದಿಕೆ ಏರಿ ದರ್ಶನ್‌ ಅವರನ್ನು ಅಭಿನಂದಿಸಿದ. ಇನ್ನು ವೇದಿಕೆಯ ಎರಡು ಬದಿಯ ಮಂಟಪಗಳನ್ನು ಏರಿ ಜನ ಕುಳಿತರು. ಗಣ್ಯರು, ಮಾಧ್ಯಮದವರ ಗ್ಯಾಲರಿಗೆ ನುಗ್ಗಿ ಮೊಬೈಲ್‌ನಲ್ಲಿ ದರ್ಶನ್‌ ಅವರ ಚಿತ್ರವನ್ನು ಸೆರೆ ಹಿಡಿದರು. ವೇದಿಕೆಗೆ ಹೊಂದಿಕೊಂಡಂತಿರುವ ಸುತ್ತಮುತ್ತಲಿನ ಸ್ಥಳದಲ್ಲಿ ಕಿಕ್ಕಿರಿದು ಯುವಕರು ನೆರೆದಿದ್ದರು. ಕೇಕೆ ಹಾಕುತ್ತಿದ್ದರು. ಕಿರುಚಾಟ ಮುಗಿಲು ಮುಟ್ಟಿತ್ತು. ಸಚಿವರಾದ ಈ. ತುಕಾರಾಂ, ಡಿ.ಕೆ. ಶಿವಕುಮಾರ ಮಾಡಿದ ಮನವಿಗೆ ಯುವಕರು ಸ್ಪಂದಿಸಲಿಲ್ಲ. ನಂತರ ಶಿವಕುಮಾರ ಅವರು ಮಾತನಾಡಲು ಮುಂದಾದಾಗ ಕೂಡ ಯುವಕರು ಕೇಕೆ ಹಾಕುತ್ತಿದ್ದರು. ಸುಮ್ಮನಿರುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. 

‘ನೀವು ಇದೇ ರೀತಿ ಗಲಾಟೆ ಮಾಡಿದರೆ ದರ್ಶನ್‌ ಅವರನ್ನು ಇಲ್ಲಿಂದ ಕಳುಹಿಸಿಕೊಡುತ್ತೇನೆ. ಯುವಕರು ತಾಳ್ಮೆಯಿಂದ ಕೂರಬೇಕು. ಕಿರುಚುವುದು ಮುಗಿಸಬೇಕು. ಕೂಡಲೇ ಮಂಟಪಗಳಿಂದ ಕೆಳಗಿಳಿಯಬೇಕು’ ಎಂದು ಕೋರಿದರು. ಅದಕ್ಕೂ ಯುವಕರು ಜಗ್ಗದಿದ್ದಾಗ ಪೊಲೀಸರು ಬೆತ್ತದ ರುಚಿ ತೋರಿಸಿ ಅವರನ್ನು ಅಲ್ಲಿಂದ ತೆರವು ಮಾಡಿದರು. ಅತಿ ಗಣ್ಯರ ಗ್ಯಾಲರಿಯಲ್ಲಿ ಕುಳಿತಿದ್ದ ಜನರನ್ನು ಸ್ವತಃ ಜಿಲ್ಲಾಧಿಕಾರಿ ರಾಮಪ್ರಸಾದ್‌ ಬಂದು ತೆರವುಗೊಳಿಸಿದರು. ಆದರೆ, ಅಲ್ಲಿಯೇ ಇದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ಮೌನವಾಗಿ ನೋಡುತ್ತ ನಿಂತಿದ್ದರು. ಪೊಲೀಸ್‌ ಭದ್ರತಾ ವೈಫಲ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಸರ್ಕಾರದ ಉತ್ಸವವಲ್ಲ. ಜನರ ಉತ್ಸವ. ಸಂಸದ ವಿ.ಎಸ್‌. ಉಗ್ರಪ್ಪನವರ ಇಚ್ಛಾಶಕ್ತಿಯಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.

ಬಳಿಕ ಮಾತನಾಡಿದ ದರ್ಶನ್‌, ‘ಎಲ್ಲ ಗುರು, ಹಿರಿಯರು, ಇಲ್ಲಿ ಬಂದಿರುವವರಿಗೆ ಚಿಕ್ಕ ಕಲಾವಿದನ ನಮಸ್ಕಾರ. ನಾನು ಶೂಟಿಂಗ್‌ಗೆ ಹೋಗಬೇಕಿತ್ತು. ಆದರೆ, ಸಚಿವ ಶಿವಕುಮಾರ ಅವರು ಬರುವಂತೆ ಹೇಳಿದ್ದರು. ಬಂದು ಇಷ್ಟೊಂದು ಜನರನ್ನು ನೋಡಿ ಖುಷಿಯಾಗಿದೆ. ಬರದಿದ್ದರೆ ಇಂತಹ ಅಪರೂಪದ ಸಂದರ್ಭ ಕಣ್ತುಂಬಿಕೊಳ್ಳಲು ಆಗುತ್ತಿರಲಿಲ್ಲ’ ಎಂದರು.

‘ಪ್ರತಿಯೊಂದು ಊರಿನಲ್ಲಿ ಅದರದೇ ಆದ ಸಂಭ್ರಮ,  ಉತ್ಸವ ಇರುತ್ತದೆ. ಅಪರೂಪದ ಸ್ಮಾರಕಗಳು ಹಂಪಿಯಲ್ಲಿವೆ. ನೂರು ಶತಮಾನ ಹೋದರೂ ಕಲ್ಲಲ್ಲಿ ಇಂತಹ ಸ್ಮಾರಕಗಳನ್ನು ಕಟ್ಟಲು ಆಗುವುದಿಲ್ಲ. ಅವುಗಳನ್ನು ದಯವಿಟ್ಟು ಹಾಳುಗೆಡವಬೇಡಿ. ನಿಮ್ಮ ಪ್ರೇಮ ನಿವೇದನೆ ಅವುಗಳ ಮೇಲೆ ಪ್ರೇಮಿಗಳು ಬರೆಯಬಾರದು. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡುವುದು ನಮ್ಮ ಕರ್ತವ್ಯ. ದಯವಿಟ್ಟು ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಿರಿ’ ಎಂದು ಮಾತು ಮುಗಿಸಿದರು. 

ಶಾಸಕ ಮುನಿರತ್ನ, ‘ನಟ ದರ್ಶನ್‌ ಅವರು ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದಾರೆ. ಅದು ಪರಭಾಷಾ ಚಿತ್ರಗಳಿಗೆ ಸರಿಸಾಟಿಯಾಗಿ ನಿಲ್ಲುವ ಭರವಸೆ ಇದೆ. ಏಕೆಂದರೆ ದರ್ಶನ್‌ ಅದರಲ್ಲಿ ಅತ್ಯುತ್ತಮ ನಟನೆ ಮಾಡಿದ್ದಾರೆ. ಕೃಷ್ಣದೇವರಾಯ ಸಿನಿಮಾ ಮಾಡುವಂತೆ ಉಗ್ರಪ್ಪನವರು ನನಗೆ ಸಲಹೆ ಮಾಡಿದ್ದಾರೆ. ಅದನ್ನು ಖಂಡಿತವಾಗಿ ಮಾಡುತ್ತೇನೆ. ದರ್ಶನ್‌ ಅದರಲ್ಲಿ ನಟಿಸುತ್ತಾರೆ’ ಎಂದು ಹೇಳಿದಾಗ ಮತ್ತೆ ಯುವಕರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !