ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಒಕ್ಕಲುತನದಿಂದ ಹೊರದಬ್ಬುವ ಹುನ್ನಾರ: ರಾಜ್ಯ ರೈತ ಸಂಘ

25ರಂದು ರಾಷ್ಟ್ರೀಯ ಹೆದ್ದಾರಿ 50 ಬಂದ್‌
Last Updated 23 ಸೆಪ್ಟೆಂಬರ್ 2020, 7:45 IST
ಅಕ್ಷರ ಗಾತ್ರ

ಹೊಸಪೇಟೆ: ‘ಸುಗ್ರೀವಾಜ್ಞೆಗಳ ಮೂಲಕ ಭೂಸುಧಾರಣೆ, ಭೂಸ್ವಾಧೀನದಂತಹ ಮಹತ್ವದ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರನ್ನು ಒಕ್ಕಲುತನದಿಂದ ಹೊರದಬ್ಬುವ ಹುನ್ನಾರ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕ್ರಮ ಖಂಡಿಸಿ ಸೆ. 25ರಂದು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಬಂದ್‌ ಮಾಡಲು ತೀರ್ಮಾನಿಸಲಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ತಿಳಿಸಿದರು.

‘ಅಂದು ಬೆಳಿಗ್ಗೆ 8ಕ್ಕೆ ತುಂಗಭದ್ರಾ ಜಲಾಶಯ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಗಣೇಶ ಗುಡಿ ಬಳಿ ಎಲ್ಲ ರೈತರು ಸೇರಬೇಕು. ಆ ದಿನ ಇಡೀ ರಾಜ್ಯದಾದ್ಯಂತ ಹೆದ್ದಾರಿ ಬಂದ್‌ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಬಂದ್‌ ಯಶಸ್ವಿಯಾಗಿ ನಡೆಸುವುದರ ಮೂಲಕ ಸರ್ಕಾರವನ್ನು ಎಚ್ಚರಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೋರಿದರು.

‘ಕೊರೊನಾದಿಂದ ಜನ ಸಂಕಷ್ಟದಲ್ಲಿದ್ದಾರೆ. ಆದರೆ, ಇದರ ನಡುವೆ ರಾಜ್ಯ, ಕೇಂದ್ರ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ತರಾತುರಿಯಲ್ಲಿ ಜಾರಿಗೆ ತರುತ್ತಿವೆ. ಅದರ ಬಗ್ಗೆ ರೈತರಿಗೆ ಸರಿಯಾದ ತಿಳಿವಳಿಕೆ ಮೂಡಿಸಿಲ್ಲ. ಚರ್ಚೆಗಳು ಆಗಿಲ್ಲ. ಎಲ್ಲರನ್ನೂ ಕತ್ತಲಲ್ಲಿ ಇಟ್ಟು ಕಾಯ್ದೆ ಜಾರಿಗೆ ತರಲಾಗಿದೆ. ಇದು ಸರ್ವಾಧಿಕಾರ ಧೋರಣೆಯಲ್ಲದೆ ಮತ್ತೇನೂ?’ ಎಂದು ಪ್ರಶ್ನಿಸಿದರು.

‘ಭೂಸ್ವಾಧೀನ, ಭೂಸುಧಾರಣೆ, ಎಪಿಎಂಸಿ, ವಿದ್ಯುತ್‌ ಶಕ್ತಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆಗಳು ಜನಸಾಮಾನ್ಯರಿಗೆ ಮಾರಕ. ಬಂಡವಾಳಷಾಹಿಗಳು, ಕಾರ್ಪೊರೇಟ್‌ ಜಗತ್ತಿನವರಿಗೆ ಅನುಕೂಲ ಮಾಡಿಕೊಡಲು ಮೋದಿ ಸರ್ಕಾರ ಈ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಆದರೆ, ಈ ಕಾಯ್ದೆಗಳು ರೈತರಿಗೆ ಮರಣ ಶಾಸನ. ಕಾಯ್ದೆ ಹಿಂಪಡೆಯುವುದಕ್ಕೆ ಆಗ್ರಹಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆ ಯಶಸ್ಸು ಕಂಡಿದೆ. ಈಗಲೂ ಅಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದೆ. ಹೆದ್ದಾರಿ ಬಂದ್‌ ನಂತರ, 28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಪಿ. ನಾರಾಯಣ ರೆಡ್ಡಿ ಮಾತನಾಡಿ, ‘ಜನ, ರೈತರನ್ನು ಅಂಧಕಾರದಲ್ಲಿ ಇಟ್ಟು ಕಾನೂನು ಜಾರಿಗೆ ತರುತ್ತಿರುವುದು ಸರಿಯಲ್ಲ. ಯಾವುದೇ ಕಾಯ್ದೆ ಜಾರಿಗೆ ತಂದರೆ ಅದು ಎಲ್ಲರಿಗೂ ಒಳ್ಳೆಯದಾಗಬೇಕು. ಎಲ್ಲರೂ ಒಪ್ಪುವಂತಹದ್ದಾಗಿರಬೇಕು. ಆದರೆ, ರೈತರ ಹಿತಾಸಕ್ತಿಗೆ ವಿರುದ್ಧವಾದ ಕಾಯ್ದೆಗಳನ್ನು ತರುವುದರ ಮೂಲಕ ಮೋದಿ ಸರ್ಕಾರ ರೈತರನ್ನು ಕೃಷಿಯಿಂದ ಸಂಪೂರ್ಣ ವಿಮುಖರಾಗಿಸುವ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಇದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT