ಬುಧವಾರ, ನವೆಂಬರ್ 20, 2019
21 °C

ಐ.ಎಸ್‌.ಆರ್‌. ಕಾರ್ಖಾನೆ ಆರಂಭಿಸಲು ಆಗ್ರಹ

Published:
Updated:
Prajavani

ಹೊಸಪೇಟೆ: ಇಲ್ಲಿನ ಚಿತ್ತವಾಡ್ಗಿಯ ಇಂಡಿಯನ್‌ ಶುಗರ್‌ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ಬಳಿ ಸೇರಿದ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿ, ರೋಟರಿ ವೃತ್ತದಲ್ಲಿ ಸಮಾವೇಶಗೊಂಡರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

‘ಕೂಡಲೇ ಕಾರ್ಖಾನೆ ಆರಂಭಿಸಬೇಕು. ಕಾರ್ಖಾನೆಗೆ ಈ ಹಿಂದೆ ಕಬ್ಬು ಪೂರೈಸಿದ ರೈತರ ಬಾಕಿ ಪಾವತಿಸಬೇಕು. ಕಾರ್ಖಾನೆಯ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.

‘ಮಾಲೀಕರಿಗೆ ಕಾರ್ಖಾನೆ ನಡೆಸಲು ಆಗದಿದ್ದರೆ ಸರ್ಕಾರವೇ ಅದನ್ನು ಸ್ವಾಧೀನಕ್ಕೆ ತೆಗೆದುಕೊಂಡು ಪ್ರಾರಂಭಿಸಬೇಕು. ಸಣ್ಣ ಹಾಗೂ ಅತಿ ಸಣ್ಣ ರೈತರು ಬೇರೆಡೆ ಕಬ್ಬು ಸಾಗಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಕಾರ್ಖಾನೆ ಆರಂಭಿಸಿ ಅವರ ನೆರವಿಗೆ ಬರಬೇಕು’ ಎಂದು ಹಕ್ಕೊತ್ತಾಯ ಮಾಡಿದರು.

‘ಮಳೆಯಾಶ್ರಿತ ಗಾದಿಗನೂರು, ಕಾಕುಬಾಳು, ವಡ್ಡರಹಳ್ಳಿ, ಧರ್ಮಸಾಗರ, ಗುಂಡ್ಲವದ್ದಿಗೇರಿ, ಭುವನಹಳ್ಳಿ, ಕೊಟಗಿನಹಾಳು ಸೇರಿದಂತೆ ಹನ್ನೊಂದು ಗ್ರಾಮಗಳಿಗೆ ಅನುಕೂಲವಾಗುವಂತೆ ಏತ ನೀರಾವರಿ ಯೋಜನೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ಸೇನೆ ರಾಜ್ಯ ಉಪಾಧ್ಯಕ್ಷ ಖಾಜಾ ಹುಸೇನ್‌ ನಿಯಾಜಿ, ಪ್ರಧಾನ ಕಾರ್ಯದರ್ಶಿ ಕೆ. ಪರಶುರಾಮಪ್ಪ, ಜಿಲ್ಲಾ ಅಧ್ಯಕ್ಷ ದೇವರಮನಿ ಮಹೇಶ್‌, ಜಿಲ್ಲಾ ಉಪಾಧ್ಯಕ್ಷರಾದ ಎಂ. ಪ್ರಕಾಶ, ಎಂ. ಸೋಮಣ್ಣ, ಮುಖಂಡರಾದ ಜೆ.ಎನ್‌. ಕಾಳಿದಾಸ್‌, ಷಣ್ಮುಖಪ್ಪ, ಜಡಿಯಪ್ಪ, ಡಿ. ಹನುಮಂತಪ್ಪ, ಕೆ. ಶಿವಕುಮಾರ, ಬಾಗಲರ ಹನುಮಂತಪ್ಪ, ಹನುಮಂತಪ್ಪ, ಜೈರುದ್ದೀನ್‌, ರಾಮಚಂದ್ರಗೌಡ, ವೈ. ಯಮುನೇಶ್‌, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ ಇದ್ದರು.

ಪ್ರತಿಕ್ರಿಯಿಸಿ (+)