ಶುಕ್ರವಾರ, ನವೆಂಬರ್ 22, 2019
23 °C
ಚಳವಳಿ ಮುಖೇನ ಏತ ನೀರಾವರಿ ಬೇಡಿಕೆ ಈಡೇರಿಸಿಕೊಳ್ಳಲು ನಿರ್ಧಾರ

ಏತ ನೀರಾವರಿ ಬೇಡಿಕೆ; ಹೋರಾಟಕ್ಕೆ ಸಜ್ಜಾದ ರೈತರು

Published:
Updated:
Prajavani

ಹೊಸಪೇಟೆ: ಹೋರಾಟದ ಮುಖೇನವೇ ಏತ ನೀರಾವರಿ ಬೇಡಿಕೆ ಈಡೇರಿಸಿಕೊಳ್ಳಲು ತಾಲ್ಲೂಕಿನ ರೈತರು ನಿರ್ಧರಿಸಿದ್ದಾರೆ.

ಅದಕ್ಕಾಗಿ ಮೊದಲ ಹಂತದಲ್ಲಿ ಪತ್ರ ಚಳವಳಿ, ಧರಣಿ ಸತ್ಯಾಗ್ರಹ ನಡೆಸಿದರೆ, ಎರಡನೇ ಹಂತದಲ್ಲಿ ರಸ್ತೆ ತಡೆ ಚಳವಳಿ, ಉಪವಾಸ ಸತ್ಯಾಗ್ರಹ ನಡೆಸುವ ತೀರ್ಮಾನಕ್ಕೆ ರೈತರು ಬಂದಿದ್ದಾರೆ. ಶತಾಯ ಗತಾಯ ಈ ವಿಷಯ ತಾರ್ಕಿಕ ಅಂತ್ಯ ಕಾಣುವವರೆಗೆ ನಿರಂತರವಾಗಿ ಹೋರಾಟ ನಡೆಸುವ ದೃಢ ಸಂಕಲ್ಪ ರೈತರು ಮಾಡಿದ್ದಾರೆ.

ತಾಲ್ಲೂಕಿನ ಬೈಲುವದ್ದಿಗೇರಿಯ ಸುಡುಗಾಡೆಪ್ಪ ತಾತನವರ ಮಠದಲ್ಲಿ ಶುಕ್ರವಾರ ಹನ್ನೊಂದು ಗ್ರಾಮಗಳ ರೈತರು ಸೇರಿ, ಅಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ವಿಸ್ತೃತವಾಗಿ ಚರ್ಚಿಸಿದರು. ತಾಲ್ಲೂಕಿನ ಗಾದಿಗನೂರು, ಇಂಗಳಗಿ, ವಡ್ಡರಹಳ್ಳಿ, ಪಿ.ಕೆ.ಹಳ್ಳಿ, ಧರ್ಮಸಾಗರ, ಕೊಟಗಿನಹಾಳು, ಗುಂಡ್ಲವದ್ದಿಗೇರಿ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಪಾಲ್ಗೊಂಡಿದ್ದರು.

ತಾಲ್ಲೂಕಿನ ಕಾರಿಗನೂರಿನಿಂದ ಭುವನಹಳ್ಳಿ ವರೆಗೆ ಮಳೆಯಾಶ್ರಿತ ಪ್ರದೇಶವಾಗಿದೆ. ಈ ಭಾಗದಲ್ಲಿ ಯಾವುದೇ ರೀತಿಯ ನೀರಾವರಿ ಯೋಜನೆಗಳಿಲ್ಲ. ತುಂಗಭದ್ರಾ ಜಲಾಶಯದ ಕಾಲುವೆಗಳು ಹಾದು ಹೋಗಿಲ್ಲ. ಹೀಗಾಗಿ ಸಂಪೂರ್ಣ ಮಳೆಯನ್ನೇ ಆಶ್ರಯಿಸಿ ರೈತರು ಕೃಷಿ ಮಾಡುತ್ತಾರೆ.

ಆದರೆ, ಸತತ ನಾಲ್ಕು ವರ್ಷಗಳ ಬರದಿಂದ ಅವರ ಬದುಕು ಮೂರಾ ಬಟ್ಟೆಯಾಗಿದೆ. ಹೀಗಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಪರಿಸ್ಥಿತಿಗೆ ರೈತರು ಸಾಕ್ಷಿಯಾಗಿದ್ದಾರೆ. ಏತ ನೀರಾವರಿ ಯೋಜನೆ ಮೂಲಕ ಆ ಭಾಗಕ್ಕೆ ನೀರು ಹರಿಸಬೇಕು ಎನ್ನುವುದು ರೈತರ ದಶಕಗಳ ಬೇಡಿಕೆಯಾಗಿದೆ. ಆದರೆ, ಅದು ಈಡೇರಿಲ್ಲ.

‘ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಏತ ನೀರಾವರಿ ಯೋಜನೆ ಬಗ್ಗೆ ಭರವಸೆ ನೀಡುತ್ತ ಬಂದಿದ್ದಾರೆ. ಆದರೆ, ಗೆದ್ದ ನಂತರ ಯಾರು ಕೂಡ ಅದಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಿಲ್ಲ. ರೈತರು ಬಹಳ ಕಷ್ಟದಲ್ಲಿದ್ದಾರೆ. ಅವರ ನೋವಿಗೆ ಸ್ಪಂದಿಸುವ ಕೆಲಸ ಯಾರೂ ಮಾಡುತ್ತಿಲ್ಲ’ ಎಂದು ವಡ್ಡರಹಳ್ಳಿಯ ರೈತ ದೇವೇಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಸಿ ಭರವಸೆಗಳಿಂದ ರೈತರು ರೋಸಿ ಹೋಗಿದ್ದಾರೆ. ಹೀಗಾಗಿ ಈ ಸಲ ಹೋರಾಟದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಮೊದಲು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸುವ ಮೂಲಕ ಹೋರಾಟ ಆರಂಭಿಸಲು ತೀರ್ಮಾನಿಸಿದ್ದಾರೆ’ ಎಂದು ವಿವರಿಸಿದರು.

‘ಈ ಭಾಗದಲ್ಲಿ ಒಟ್ಟು 13 ಕೆರೆಗಳಿವೆ. ತುಂಗಭದ್ರಾ ಜಲಾಶಯದಿಂದ ಅವುಗಳನ್ನು ತುಂಬಿಸಬಹುದು. ಆದರೆ, ಇಚ್ಛಾಶಕ್ತಿ ತೋರುತ್ತಿಲ್ಲ. ಪ್ರತಿವರ್ಷ ನದಿಗೆ ಅಪಾರ ನೀರು ಹರಿದು ಹೋಗುತ್ತಿದೆ. ಉತ್ತಮ ಯೋಜನೆ ರೂಪಿಸಿದರೆ ಆ ನೀರನ್ನು ಬಳಸಿಕೊಳ್ಳಬಹುದು. ಯಾರೂ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ರೈತ ಜೆ. ಕೊಟ್ರಪ್ಪ ತಿಳಿಸಿದರು.

ಪ್ರತಿಕ್ರಿಯಿಸಿ (+)